ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ಅವಧಿಯೊಳಗೇ ರಫೇಲ್‌ ಜೆಟ್‌ಗಳ ಪೂರೈಕೆ: ಫ್ರಾನ್ಸ್‌ ಸ್ಪಷ್ಟನೆ

Last Updated 25 ಮೇ 2020, 2:39 IST
ಅಕ್ಷರ ಗಾತ್ರ

ನವದೆಹಲಿ: ಒಪ್ಪಂದದಂತೆ ಭಾರತಕ್ಕೆ ನಿಗದಿತ ಅವಧಿಯೊಳಗೇ ರಫೇಲ್‌‌ ಜೆಟ್‌ಗಳನ್ನು ಪೂರೈಸಲಾಗುವುದು ಎಂದು ಪ್ರಾನ್ಸ್‌ ಸ್ಪಷ್ಟಪಡಿಸಿದೆ.

‘36 ರಫೇಲ್‌ ಜೆಟ್‌ಗಳನ್ನು ಭಾರತಕ್ಕೆ ಪೂರೈಸುವಲ್ಲಿ ಯಾವುದೇ ವಿಳಂಬವಾಗುವುದಿಲ್ಲ. ಫೈಟರ್ ಜೆಟ್‌ಗಳ ಪೂರೈಕೆಗಾಗಿ ನಿಗದಿ ಮಾಡಲಾಗಿರುವ ಅವಧಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ಗೌರವಿಸಲಾಗುವುದು,’ ಎಂದು ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಇಮ್ಯಾನ್ಯುಯಲ್‌ ಲೆನೈನ್ ಭಾನುವಾರ ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕು ಪ್ರಕರಣಗಳ ಹೆಚ್ಚಳದಿಂದ ಫ್ರಾನ್ಸ್ ತತ್ತರಿಸುತ್ತಿದೆ. ಅಲ್ಲಿ 1,45,000 ಕ್ಕೂ ಹೆಚ್ಚು ಜನರು ವೈರಸ್ ಸೋಂಕಿಗೆ ಈಡಾಗಿದ್ದಾರೆ. ಇದೇ ವೇಳೆ ಅಲ್ಲಿನ ಸಾವಿನ ಸಂಖ್ಯೆ 28,330ಕ್ಕೇರಿದೆ. ಈ ಹಿನ್ನೆಲೆಯಲ್ಲಿ ರಫೇಲ್‌ ಜೆಟ್‌ಗಳ ಪೂರೈಕೆ ವಿಳಂಬವಾಗಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಫ್ರಾನ್ಸ್‌ ಅದನ್ನು ನಿರಾಕರಿಸಿದೆ. ‘ಜೆಟ್‌ಗಳ ಪೂರೈಕೆಗೆ ನಿಗದಿಯಾಗಿರುವ ಸಮಯವನ್ನು ಪಾಲನೆ ಮಾಡಲಾಗುವುದು,’ ಎಂದು ರಾಯಭಾರಿ ಲೆನೈನ್ ತಿಳಿಸಿದ್ದಾರೆ.

‘ರಫೇಲ್‌‌ ಜೆಟ್‌ಗಳ ಪೂರೈಕೆ ವೇಳಾಪಟ್ಟಿಯನ್ನು ಇಲ್ಲಿಯವರೆಗೆ ನಾವು ಸಂಪೂರ್ಣವಾಗಿ ಗೌರವಿಸಿದ್ದೇವೆ. ಈಗಾಗಲೇ ವಿಮಾನಗಳನ್ನು ಏಪ್ರಿಲ್‌ ಅಂತ್ಯದಲ್ಲಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗಿದೆ. ಮುಂದಿನ ಒಪ್ಪಂದವನ್ನೂ ನಾವು ಗೌರವಿಸುತ್ತೇವೆ" ಎಂದು ಲೆನೈನ್ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಮೊದಲ ನಾಲ್ಕು ರಫೇಲ್‌‌ ಜೆಟ್‌ಗಳನ್ನು ಫ್ರಾನ್ಸ್‌ ಅಕ್ಟೋಬರ್‌ನಲ್ಲಿ ಭಾರತಕ್ಕೆ ಹಸ್ತಾಂತರಿಸಿತ್ತು. ಅದನ್ನು ಏಪ್ರಿಲ್‌ ಅಂತ್ಯದ ವೇಳೆ ಭಾರತಕ್ಕೆ ತರಲಾಗಿತ್ತು.

ಸುಮಾರು 58,000 ಕೋಟಿ ರೂ.ಗಳ ವೆಚ್ಚದಲ್ಲಿ 36 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಭಾರತ 2016 ರ ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT