ಬುಧವಾರ, ಜನವರಿ 29, 2020
30 °C

ತಡರಾತ್ರಿಯಲ್ಲಿ ವಿದ್ಯಾರ್ಥಿನಿಗೆ ಕಾವಲುಗಾರರಾದ ಸಾರಿಗೆ ಸಿಬ್ಬಂದಿ: ಜನರ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟಾಯಂ: ದೇಶಾದ್ಯಂತ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮನೆ ಮಾಡಿರುವ ಬೆನ್ನಲ್ಲೇ ಕೇರಳದಲ್ಲಿ ನಡೆದಿರುವ ಘಟನೆಯೊಂದು ಪ್ರಶಂಸೆಗೆ ಕಾರಣವಾಗಿದೆ. 

ಕೇರಳ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್‌ ಕಂಡಕ್ಟರ್ ಪಿ.ಶಜುದ್ದೀನ್‌ ಮತ್ತು ಡ್ರೈವರ್‌ ಡೆನ್ನಿಸ್‌ ಕ್ಸೇವಿಯರ್  ಜನರ ಹೊಗಳಿಕೆಗೆ ಪಾತ್ರರಾಗಿದ್ದಾರೆ. ತಡರಾತ್ರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸುರಕ್ಷತೆ ಬಗ್ಗೆ ಅವರು ತೋರಿದ ಕಾಳಜಿ ಮತ್ತು ಅವಳಿಗೆ ನೀಡಿದ ಭದ್ರತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಎಂಫಿಲ್‌ ಓದುತ್ತಿರುವ ಕೇರಳದ ಕುನ್ನೂರಿನ ಎಲ್ಸಿನಾ ಎಂಬ ವಿದ್ಯಾರ್ಥಿನಿ ತನ್ನ ಸಂಶೋಧನೆ ಕೆಲಸದ ನಿಮಿತ್ತ ಮಂಗಳವಾರ ಕೊಟ್ಟಾಯಂ ಜಿಲ್ಲೆಯ ಪೊಡಿಮಟ್ಟಂಗೆ ತೆರಳಿದ್ದಾಳೆ.

ಅವಳು ಪೊಡಿಮಟ್ಟಂ ಹತ್ತಿರದ ಕಂಜರಪಲ್ಲಿ ಬಸ್‌ ನಿಲ್ದಾನಕ್ಕೆ ತಲುಪಿದಾಗ ರಾತ್ರಿ 11 ಗಂಟೆಯಾಗಿತ್ತು. ಅಂದು ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರಿಂದ ನಿಲ್ದಾಣದ ಹತ್ತಿರವಿದ್ದ ಎಲ್ಲ ಅಂಗಡಿಗಳು ಮುಚ್ಚಿದ್ದವು. ಆ ಕತ್ತಲ ರಾತ್ರಿಯಲ್ಲಿ ಬಸ್‌ ನಿಲ್ದಾಣ ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿತ್ತು. ಅಲ್ಲಿ ಎಲ್ಸಿನಾ ಒಬ್ಬಳೇ ಇಳಿಯಬೇಕಿತ್ತು.

ಜನರಹಿತ ಸ್ಥಳದಲ್ಲಿ ಒಬ್ಬಳೇ ಹೆಣ್ಣುಮಗಳನ್ನು ಕೆಳಗಿಳಿಸಬಾರದು ಎಂದು ಡ್ರೈವರ್‌ ಮತ್ತು ಕಂಡಕ್ಟರ್‌ ಅದೇ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಿದರು. ಎಲ್ಸಿನಾಳನ್ನು ಕರೆದುಕೊಂಡು ಹೋಗಲು ಅವಳ ಸಂಬಂಧಿ ಬರುವವರೆಗೂ ಕಾಯ್ದುರು. ಬಸ್‌ ಒಳಗಿದ್ದ ಸಹ ಪ್ರಯಾಣಿಕರು ಸಹ ತಮಗೆ ಮನೆ ತಲುಪಲು ತಡವಾಗುತ್ತದೆಂದು ಪ್ರತಿಭಟಿಸದೇ ಸಮ್ಮನೇ ಕುಳಿತಿದ್ದರು. 

15 ನಿಮಿಷಗಳ ನಂತರ ಎಲ್ಸಿನಾ ಸಂಬಂಧಿಯೊಬ್ಬರು ಸ್ಥಳಕ್ಕೆ ಬಂದು ಅವಳನ್ನು ಕಾರಿನಲ್ಲಿ ಕರೆದೊಯ್ದರು.

ಬಸ್‌ ಕಂಡಕ್ಟರ್‌ ಪಿ.ಶಜುದ್ದೀನ್‌ ಮತ್ತು ಡೆನ್ನಿಸ್‌ ಕ್ಸೇವಿಯರ್‌ ಅವರು ತಡರಾತ್ರಿಯಲ್ಲಿ ವಿದ್ಯಾರ್ಥಿನಿಗೆ ತೋರಿದ ಕಾಳಜಿ ಮತ್ತು ಪ್ರತಿಭಟಸದೇ ಸುಮ್ಮನೇ ಕುಳಿತಿದ್ದ ಸಹ ಪ್ರಯಾಣಿಕರ ಸಂಯಮಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ಕೊಟ್ಟಾಯಂ ಜಿಲ್ಲೆಯ ಪುಂಜಾರ್‌ ತಾಲ್ಲೂಕು ಶಾಸಕ ಪಿ.ಸಿ. ಜಾರ್ಜ್‌ ಅವರು ಶಜುದ್ದೀನ್‌ ಮತ್ತು  ಕ್ಸೇವಿಯರ್‌ ಅವರನ್ನು ಅಭಿನಂದಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು