ಭಾನುವಾರ, ಮಾರ್ಚ್ 29, 2020
19 °C
‘ನಮಸ್ತೆ ಟ್ರಂಪ್‌’ ನಲ್ಲಿ ಪರಸ್ಪರರ ಗುಣಗಾನ

ಟ್ರಂಪ್‌ –ಮೋದಿ ಹೊಗಳಿಕೆಗೆ ಮೊಟೆರಾ ಸಾಕ್ಷಿ

ಪಿಟಿಐ Updated:

ಅಕ್ಷರ ಗಾತ್ರ : | |

Trump

ಅಹಮದಾಬಾದ್ : ಇಲ್ಲಿನ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ (ಮೊಟೆರಾ) ಕ್ರೀಡಾಂಗಣದಲ್ಲಿ ನಡೆದ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮವು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪರಸ್ಪರ ಹೊಗಳಿಕೆಯ ವಿನಿಮಯಕ್ಕೆ ಸಾಕ್ಷಿಯಾಯಿತು.

ಮಾತಿನುದ್ದಕ್ಕೂ ಮೋದಿಯನ್ನು ಹೊಗಳಿದ ಟ್ರಂಪ್‌, ‘ಮೋದಿ ಅವರೇ, ನೀವು ಗುಜರಾತ್‌ನ ಹೆಮ್ಮೆಯಷ್ಟೇ ಅಲ್ಲ, ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಭಾರತೀಯರು ಏನನ್ನು ಬೇಕಾದರೂ ಸಾಧಿಸಬಲ್ಲರು ಎನ್ನುವುದಕ್ಕೆ ಜೀವಂತ ಉದಾಹರಣೆ’ ಎಂದರು.

‘ಮೋದಿ ಅವರ ಜೀವನವು ಈ ಶ್ರೇಷ್ಠ ರಾಷ್ಟ್ರದ ಮೇಲಿನ ಅಪಾರ ಭರವಸೆಯನ್ನು ಬಿಂಬಿಸುತ್ತಿದೆ’ ಎಂದರು.

‘ಮೋದಿಯನ್ನು ಎಲ್ಲರೂ ಪ್ರೀತಿಸುತ್ತಾರೆ. ಆದರೆ ಮೋದಿ ಜತೆ ಸಂಧಾನ ಕಷ್ಟದ ಕೆಲಸ’ ಎಂದು ಬಣ್ಣಿಸಿದ ಟ್ರಂಪ್‌, ಮೋದಿ ಅವರನ್ನು ‘ಭಾರತೀಯಪ್ರಜಾಪ್ರಭುತ್ವದ ಅತ್ಯಂತ ಯಶಸ್ವಿ ನಾಯಕ’ ಎಂದು ಬಣ್ಣಿಸಿದರು.

ತಮ್ಮ ಮಾತಿನ ಸರದಿ ಬಂದಾಗ ಮೋದಿ ಅವರೂ ಟ್ರಂಪ್‌ ಬಗ್ಗೆ ಹೊಗಳಿಕೆಯ ಮಾತುಗಳನ್ನೇ ಆಡಿ
ದರು. ಆರೋಗ್ಯ ಕ್ಷೇತ್ರದಲ್ಲಿ ಟ್ರಂಪ್ ಆಡಳಿತದ ಪ್ರಯತ್ನವನ್ನು ಶ್ಲಾಘಿಸಿದ ಮೋದಿ, ಭಾರತವು ಇಂದು ಅಮೆರಿಕ
ದೊಂದಿಗೆ ಸಂಶೋಧನೆ ಮತ್ತು ಅಭಿವೃದ್ದಿ ಸಹಭಾಗಿತ್ವ ಹೊಂದಿದೆ. ಅಮೆರಿಕ ಮತ್ತು ಭಾರತದ ಸ್ನೇಹ ಬಾಂಧವ್ಯ ಚಿರಾಯುವಾಗಲಿ ಎಂದು ಆಶಿಸಿದರು. 

‘ಭಾರತ–ಅಮೆರಿಕ ಬಾಂಧವ್ಯದಲ್ಲಿ ಈ ಭೇಟಿಯು ‘ಹೊಸ ಅಧ್ಯಾಯ’. ಹೊಸ ದಶಕದ ತಿರುವಿನಲ್ಲಿ ಟ್ರಂಪ್ ಭೇಟಿ ದೊಡ್ಡ ಅವಕಾಶವಾಗಿದೆ. ಅಮೆರಿಕ ಈಗ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ಅಮೆರಿಕದ ಸೇನಾಪಡೆಗಳ ಜೊತೆಗೆ ಭಾರತೀಯ ಸೇನೆಯು ಸಮರಾಭ್ಯಾಸದಲ್ಲಿ ತೊಡಗಿಸಿಕೊಂಡಿದೆ’ ಎಂದರು.  

ಗಾಂಧಿಗೆ ನಮನ

ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಬಂದಿಳಿದ ಟ್ರಂಪ್‌ ಹಾಗೂ ಅವರ ಪತ್ನಿ ಮಲೇನಿಯಾ, ಮೊದಲು ಸಾಬರಮತಿಯ ದಂಡೆಯಲ್ಲಿರುವ ಗಾಂಧಿ ಆಶ್ರಮಕ್ಕೆ ಭೇಟಿನೀಡಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದರು.

ಆಶ್ರಮದ ಟ್ರಸ್ಟಿ ಕಾರ್ತಿಕೇಯ ಸಾರಾಭಾಯ್‌ ಅವರು ಟ್ರಂಪ್ ದಂಪತಿಗೆ ಖಾದಿ ಶಾಲು ಹೊದಿಸಿ ಸ್ವಾಗತಿಸಿದರು. ಮೋದಿ ಅವರು ಗಾಂಧೀಜಿ ಮತ್ತು ಅವರ ಪತ್ನಿ ಕಸ್ತೂರ್ ಬಾ ವಾಸಿಸುತ್ತಿದ್ದ ಮನೆ ‘ಹೃದಯ ಕುಂಜ್’ ಅನ್ನು ಟ್ರಂಪ್ ದಂಪತಿಗೆ ತೋರಿಸಿದರು.  1917ರಿಂದ 1930ರ ಅವಧಿಯಲ್ಲಿ ಗಾಂಧೀಜಿ ಅವರಿಗೆ ನೆಲೆಯಾಗಿದ್ದ ಸಾಬರಮತಿ ಆಶ್ರಮವನ್ನು ಕುರಿತು ವಿವರಗಳನ್ನು ನೀಡಿದರು. ಟ್ರಂಪ್ ದಂಪತಿ ಚರಕದಿಂದ ನೂಲು ತೆಗೆಯುವ ಬಗ್ಗೆ ಮಾಹಿತಿ ಪಡೆದು, ಚರಕವನ್ನು ತಿರುಗಿಸಲು ಯತ್ನಿಸಿದರು.

ಆಶ್ರಮದಿಂದ ಹೊರಡುವ ಮುನ್ನ ಟ್ರಂಪ್‌ ಅವರು ಸಂದರ್ಶಕರ ಪುಸ್ತಕದಲ್ಲಿ, ‘ಇಂಥ ಅದ್ಭುತ ಭೇಟಿ ಆಯೋಜಿಸಿದ್ದಕ್ಕಾಗಿ ನನ್ನ ಆತ್ಮೀಯ ಮಿತ್ರ ಮೋದಿಗೆ ಧನ್ಯವಾದಗಳು’ ಎಂದು ಬರೆದು ಸಹಿ ಹಾಕಿದರು. ಮೆಲೇನಿಯಾ ಕೂಡಾ ಹಸ್ತಾಕ್ಷರ ಮಾಡಿದರು. ಆಶ್ರಮದಲ್ಲಿ ಸುಮಾರು 15 ನಿಮಿಷ ಕಳೆದ ಟ್ರಂಪ್ ದಂಪತಿಗೆ, ಗಾಂಧೀಜಿ ಅವರ ಮೂರು ಮಂಗಗಳ ಮಾದರಿಗಳನ್ನು ಉಡುಗೊರೆಯಾಗಿ ಮೋದಿ ನೀಡಿದರು.

ಅಮೆರಿಕದ ಪ್ರಥಮ ಮಹಿಳೆ ಮತ್ತು ನಾನು ಈ ದೇಶದ ಪ್ರತಿ ಪ್ರಜೆಗೆ ಸಂದೇಶ ನೀಡಲು 8 ಸಾವಿರ ಮೈಲಿಗಳನ್ನು ಸಾಗಿಬಂದಿದ್ದೇವೆ. ಅಮೆರಿಕವು ಭಾರತವನ್ನು ಪ್ರೀತಿಸುತ್ತದೆ ಮತ್ತು ಗೌರವಿಸುತ್ತದೆ. ಅಮೆರಿಕದ ಜನರು ಯಾವಾಗಲೂ ಭಾರತದೊಂದಿಗೆ ಬದ್ಧತೆಯನ್ನು ಹೊಂದಿದ್ದು, ನಿಜವಾದ ಸ್ನೇಹಿತರಂತೆ ಇರುತ್ತಾರೆ
ಡೊನಾಲ್ಡ್‌ ಟ್ರಂಪ್ (ಹಿಂದಿ ಭಾಷೆಯಲ್ಲಿ ಮಾಡಿದ ಟ್ವೀಟ್)

ಶೋಲೆ, ಡಿಡಿಎಲ್‌ಜೆ, ಕ್ರಿಕೆಟ್‌ ಉಲ್ಲೇಖ

ಭಾಷಣದ ವೇಳೆ ಬಾಲಿವುಡ್‌ ಸಿನಿಮಾಗಳನ್ನು ಶ್ಲಾಘಿಸಿದ ಟ್ರಂಪ್‌, ಧರ್ಮೇಂದ್ರ, ಅಮಿತಾಭ್‌ ಬಚ್ಚನ್‌ ಹಾಗೂ ಹೇಮಾ ಮಾಲಿನಿ ನಟನೆಯ ‘ಶೋಲೆ’ ಹಾಗೂ ಶಾರುಕ್‌ ಖಾನ್‌ ಹಾಗೂ ಕಾಜೋಲ್‌ ಅಭಿನಯದ ‘ದಿಲ್‌ವಾಲೆ ದುಲ್ಹನಿಯಾ ಲೇಜಾಯೇಂಗೆ(ಡಿಡಿಎಲ್‌ಜೆ)’ ಚಿತ್ರಗಳನ್ನು ಉಲ್ಲೇಖಿಸಿದರು.

‘ಬಾಲಿವುಡ್‌ ಸಿನಿಮಾಗಳ ಮೂಲಕವೇ ಭಾರತದ ಸಂಸ್ಕೃತಿಯನ್ನು ಜನರು ಅರ್ಥೈಸಿಕೊಳ್ಳುತ್ತಾರೆ.
ಪ್ರತಿ ವರ್ಷ 2 ಸಾವಿರ ಸಿನಿಮಾಗಳನ್ನು ನಿರ್ಮಿಸುವ ರಾಷ್ಟ್ರವಿದು. ಭಾರತದ ಸಂಗೀತ, ನೃತ್ಯ, ನಾಟಕ,
ಭಾಂಗ್ರಾ ನೃತ್ಯವನ್ನು ವೀಕ್ಷಿಸಲು ಜನರು ಇಷ್ಟಪಡುತ್ತಾರೆ’ ಎಂದರು. 

2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗಲೂ ಡಿಡಿಎಲ್‌ಜೆಯ ಡೈಲಾಗ್‌ ಹೇಳಿದ್ದರು. 

ಭಾರತೀಯರ ಕ್ರಿಕೆಟ್‌ ಪ್ರೀತಿಯನ್ನು ಅರಿತಿದ್ದ ಟ್ರಂಪ್‌, ಭಾಷಣದಲ್ಲಿ ಸಚಿನ್‌ ತೆಂಡೂಲ್ಕರ್‌ ಹಾಗೂ ವಿರಾಟ್‌ ಕೊಹ್ಲಿ ಅವರ ಹೆಸರನ್ನೂ ಪ್ರಸ್ತಾಪಿಸಿದರು.

ಕೈಕೈ ಹಿಡಿದು ತಾಜ್‌ ವೀಕ್ಷಿಸಿದರು

ಆಗ್ರಾದ ಐತಿಹಾಸಿಕ ಪ್ರೇಮ ಸ್ಮಾರಕ ತಾಜ್‌ಮಹಲ್‌ಗೆ ಸೋಮವಾರ ಸಂಜೆ ಟ್ರಂಪ್ ದಂಪತಿ ಭೇಟಿ ನೀಡಿದರು. ಕೈಕೈ ಹಿಡಿದುಕೊಂಡು ತಾಜ್‌ಮಹಲ್ ಆವರಣದಲ್ಲಿ ಓಡಾಡಿದರು. ಸಂಜೆಯ ಆಹ್ಲಾದಕರ ತಂಪಾದ ಗಾಳಿಯಲ್ಲಿ ಪ್ರೇಮಸೌಧದ ಸೌಂದರ್ಯವನ್ನು ಸವಿದರು. 

ತಾಜ್‌ಮಹಲ್ ಮುಂದೆ ನಿಂತು ಛಾಯಾಗ್ರಾಹಕರಿಗೆ ಪೋಸ್ ನೀಡಿದ ದಂಪತಿ, ಆನಂತರ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ‘ತಾಜ್‌ಮಹಲ್ ಭಾರತದ ಶ್ರೀಮಂತ ಸಂಸ್ಕೃತಿಗೆ ಸಾರ್ವಕಾಲಿಕ ಸಾಕ್ಷಿ’ ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದರು. 

ಟ್ರಂಪ್ ದಂಪತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ತಾಜ್‌ಮಹಲ್ ಸಮೀಪದ ಒಬೆರಾಯ್ ಅಮರ್‌ವಿಲಾಸ್ ಹೋಟೆಲ್ ತನಕ ಕಾರಿನಲ್ಲಿ ತೆರಳಿದ ಟ್ರಂಪ್ ಮತ್ತು ಅವರ ಕುಟುಂಬದ ಸದಸ್ಯರು, ಹೋಟೆಲ್‌ನಿಂದ ತಾಜ್‌ಮಹಲ್‌ಗೆ ಪರಿಸರ ಸ್ನೇಹಿ ಗಾಲ್ಫ್ ಕಾರ್ಟ್‌ನಲ್ಲಿ ತೆರಳಿದರು.

‘ಅಮೆರಿಕ ಕಾರ್ಯಸೂಚಿಕೆ ಬಲಿಯಾಗಬೇಡಿ’

‘ಬಂಡವಾಳಶಾಹಿಗಳ ಹಿತಾಸಕ್ತಿ ಕಾಯಲು ಮತ್ತು ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರ ಕಾರ್ಯಸೂಚಿಗೆ ಸರ್ಕಾರ ಬಲಿಯಾಗಬಾರದು’ ಎಂದು ಸಿಪಿಎಂ ಸರ್ಕಾರವನ್ನು ಎಚ್ಚರಿಸಿದೆ. 

‘ನಮ್ಮ ಕೃಷಿ, ಆರೋಗ್ಯ ಮತ್ತು ಇತರ ಕ್ಷೇತ್ರಗಳನ್ನು ಗುರಿಯಾಗಿಸಿ ಒಪ್ಪಂದಗಳನ್ನು ಮಾಡಿಕೊಳ್ಳಲು ಟ್ರಂಪ್‌ ಭಾರತಕ್ಕೆ ಬಂದಿದ್ದಾರೆ. ಸರ್ಕಾರ ಜನರ ಧ್ವನಿ ಅಡಗಿಸಿ ಅಮೆರಿಕದ ಒತ್ತಡಕ್ಕೆ ಮಣಿಯುತ್ತಿದೆ’ ಎಂದು ಪಕ್ಷ ಆತಂಕ ವ್ಯಕ್ತಪಡಿಸಿದೆ.  ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರ ಹಿತ ಕಾಯಲು ಮುಂದಾಗಬೇಕು ಎಂದು ಸಲಹೆ ನೀಡಿದೆ.

ಹಿಂದೂ ಸೇನಾದಿಂದ ಯಜ್ಞ

ಮೋದಿ– ಟ್ರಂಪ್ ಮಾತುಕತೆಗೂ ಮುಂಚಿತವಾಗಿ, ಹಿಂದೂ ಸೇನಾ ಸಂಘಟನೆ ಸೋಮವಾರ ಜಂತರ್‌ಮಂತರ್‌ನಲ್ಲಿ ‘ಯಜ್ಞ’ವನ್ನು ಆಯೋಜಿಸಿತ್ತು. 

‘ಮೋದಿ ಮತ್ತು ಟ್ರಂಪ್ ಮಾತುಕತೆ ಆರಂಭಿಸಿದಾಗ ಅವರ ಮೇಲೆ ದೇವರ ಆಶೀರ್ವಾದ ಇರಲೆಂದು ಹಾಗೂ ಭಯೋತ್ಪಾದನೆ ನಿರ್ಮೂಲನೆಗೆ ಒಟ್ಟಾಗಿ ಕೆಲಸ ಮಾಡಬೇಕೆಂದು ನಾವು ಪ್ರಾರ್ಥಿಸುತ್ತೇವೆ’ ಎಂದು ಹಿಂದೂ ಸೇನಾದ ಮುಖ್ಯಸ್ಥ ವಿಷ್ಣು ಗುಪ್ತಾ ತಿಳಿಸಿದ್ದಾರೆ.  ವಿವಿಧ ಎಡಪಂಥೀಯ ಸಂಘಟನೆಗಳು ಮತ್ತು ಮಹಿಳಾ ಗುಂಪುಗಳು ಜಂತರ್‌ಮಂತರ್‌ನಿಂದ ಕೆಲವೇ ಮೀಟರ್ ದೂರದದಲ್ಲಿ ಟ್ರಂಪ್ ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವು.

ಮೆಲೇನಿಯಾ ಉಡುಗೆಯಲ್ಲಿ ಭಾರತೀಯತೆ

ಅಹಮದಾಬಾದ್‌ನಲ್ಲಿ ಸೋಮವಾರ ಬಂದಿಳಿದ ಅಮೆರಿಕದ ಪ್ರಥಮ ಮಹಿಳೆ ಮೆಲೇನಿಯಾ ಟ್ರಂಪ್, ಶ್ವೇತವರ್ಣದ ಜಂಪ್‌ಸೂಟ್‌ ಜತೆಗೆ ಹಸಿರು ಹಾಗೂ ಬಂಗಾರದ ಬಣ್ಣದ ಕುಸುರಿ ಉಳ್ಳ ರೇಷ್ಮೆಯ ‘ಸ್ಯಾಶ್’ ಧರಿಸಿ ಗಮನ ಸೆಳೆದರು.

ವಸ್ತ್ರವಿನ್ಯಾಸಕಾರ ಹರ್ವೆ ಪಿಯರ್ ಅವರು ಈ ಜಂಪ್‌ಸೂಟ್‌ ವಿನ್ಯಾಸಗೊಳಿಸಿದ್ದರು. ಮೆಲೇನಿಯಾ ಅವರು ಸೊಂಟದ ಪಟ್ಟಿಯ ರೀತಿ ಧರಿಸಿದ್ದ ವಸ್ತ್ರವು ಭಾರತ ಮೂಲದ್ದಾಗಿದ್ದು, ಈ ಮೂಲಕ ಅವರ ದಿರಿಸಿನಲ್ಲಿ ಭಾರತೀಯತೆ ಸೇರಿಕೊಂಡಿತ್ತು.

‘ಮೆಲೇನಿಯಾ ಧರಿಸಿರುವ ಸ್ಯಾಶ್ (ದಿರಿಸಿನ ಮೇಲೆ ಸೊಂಟದ ಸುತ್ತಲೂ ಕಟ್ಟಿಕೊಳ್ಳುವ ಬಣ್ಣಬಣ್ಣದ ವಸ್ತ್ರ), ಭಾರತದಲ್ಲಿ 20ನೇ ಶತಮಾನದಲ್ಲಿ ತಯಾರಾದ ವಸ್ತ್ರವೊಂದರ ಅಂಚಿನಿಂದ ಸಿದ್ಧಪಡಿಸಿದ್ದು. ಉತ್ತಮ ಸಂಗ್ರಹಕಾರರಾಗಿರುವ ನನ್ನ ಸ್ನೇಹಿತರಿಂದ ಪ್ಯಾರಿಸ್‌ನಲ್ಲಿ ಈ ವಸ್ತ್ರ ದೊರಕಿತು. ಈ ಅಂಚು ಆಕರ್ಷಕವಾಗಿ ಕಾಣಿಸಿದ್ದರಿಂದ ಇದನ್ನು ನಾವು ಬಳಸಿಕೊಂಡೆವು’ ಎಂದು ಹರ್ವೆ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು