ಶನಿವಾರ, ಮಾರ್ಚ್ 6, 2021
28 °C
2017–18ನೇ ಸಾಲಿನಲ್ಲಿ ಶೇ 6.1ರಷ್ಟು ದಾಖಲು

ನೋಟು ರದ್ದತಿ ಬಳಿಕ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ 2017–18ನೇ ಸಾಲಿನಲ್ಲಿ ದಾಖಲಾಗಿದೆ. ಈ ಹಣಕಾಸು ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಶೇ 6.1ರಷ್ಟಿದೆ ಎಂದು ವರದಿಯಾಗಿದೆ.

ಈ ವಿಷಯವು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿಯು (ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಬ್ಯುಸಿನೆಸ್‌ ಸ್ಟ್ಯಾಂಡರ್ಡ್‌ ಸುದ್ದಿತಾಣ ವರದಿ ಮಾಡಿದೆ. ಗರಿಷ್ಠ ಮುಖ ಬೆಲೆಯ ನೋಟು ರದ್ದು ಮಾಡಿದ ಬಳಿಕ ನಿರುದ್ಯೋಗ ವಿಚಾರಕ್ಕೆ ಸಂಬಂಧಿಸಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ನಡೆಸಿದ ಮೊದಲ ಸಮೀಕ್ಷೆ ಇದಾಗಿದೆ ಎಂದೂ ವರದಿ ತಿಳಿಸಿದೆ.

ಕಳೆದ ತಿಂಗಳೇ ವರದಿ ಸಿದ್ಧವಾಗಿದ್ದರೂ ಅದನ್ನು ಬಹಿರಂಗಪಡಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಇಬ್ಬರು ಸ್ವತಂತ್ರ ಸದಸ್ಯರು ಈಚೆಗೆ ರಾಜೀನಾಮೆ ನೀಡಿದ್ದಾರೆ. ವರದಿಯನ್ನು ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ. 2017ರ ಜುಲೈನಿಂದ 2018ರ ಜೂನ್ ಅವಧಿಯಲ್ಲಿ ಸಂಗ್ರಹಿಸಿದ ದತ್ತಾಂಶಗಳಿಂದ ವರದಿ ಸಿದ್ಧಪಡಿಸಲಾಗಿದೆ.

ದೇಶದಲ್ಲಿ 1972-73ರ ಬಳಿಕ ಇದೇ ಮೊದಲು ನಿರುದ್ಯೋಗ ಪ್ರಮಾಣ ಅತಿ ಹೆಚ್ಚು ದಾಖಲಾಗಿದೆ. 2011–12ನೇ ಸಾಲಿನಲ್ಲಿ (ಯುಪಿಎ ಸರ್ಕಾರದ ಎರಡನೇ ಅವಧಿ) ನಿರುದ್ಯೋಗ ಪ್ರಮಾಣ ಶೇ 2.2ರಷ್ಟಿತ್ತು ಎಂಬುದು ದಾಖಲೆಗಳಿಂದ ತಿಳಿದುಬಂದಿದೆ ಎಂದು ಬ್ಯುಸಿನೆಸ್‌ ಸ್ಟ್ಯಾಂಡರ್ಡ್‌ ವರದಿ ಉಲ್ಲೇಖಿಸಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಯುವಕರ ನಿರುದ್ಯೋಗ ಪ್ರಮಾಣ ಅತಿ ಹೆಚ್ಚಿದೆ. ಒಟ್ಟು ಜನಸಂಖ್ಯೆಗೆ ಹೋಲಿಸಿದರೂ ನಿರುದ್ಯೋಗ ಪ್ರಮಾಣ ಹೆಚ್ಚಿದೆ.

ಗ್ರಾಮೀಣ ಪ್ರದೇಶಗಳಲ್ಲಿ 15ರಿಂದ 29 ವರ್ಷ ವಯೋಮಾನದವರ ನಿರುದ್ಯೋಗ ಪ್ರಮಾಣ 2011–12ರಲ್ಲಿ ಶೇ 5ರಷ್ಟಿದ್ದುದು 2017–18ರಲ್ಲಿ ಶೇ 17.4ರಷ್ಟಾಗಿದೆ. ಇದೇ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರ ನಿರುದ್ಯೋಗ ಪ್ರಮಾಣ ಶೇ 4.8ರಿಂದ ಶೇ 13.6ಕ್ಕೆ ಏರಿಕೆಯಾಗಿದೆ.

2017–18ನೇ ಸಾಲಿನಲ್ಲಿ ನಗರ ಪ್ರದೇಶಗಳ ಯುವಕ, ಯುವತಿಯರ ನಿರುದ್ಯೋಗ ಪ್ರಮಾಣ ಕ್ರಮವಾಗಿ ಶೇ 18.7 ಮತ್ತು ಶೇ 27.2ರಷ್ಟಿದೆ.

2004–05ಕ್ಕೆ ಹೋಲಿಸಿದರೆ 2017–18ರಲ್ಲಿ ಶಿಕ್ಷಿತ ನಿರುದ್ಯೋಗಿಗಳ ಪ್ರಮಾಣ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳ ಶಿಕ್ಷಿತ ಮಹಿಳೆಯರ ನಿರುದ್ಯೋಗ ಪ್ರಮಾಣ 2017–18ರಲ್ಲಿ ಶೇ 17.3ರಷ್ಟಿದೆ. ಇದು 2004–05ರಿಂದ 2011–12ರ ಅವಧಿಯಲ್ಲಿ ಶೇ 9.7ರಿಂದ ಶೇ 15.2ರಷ್ಟಿತ್ತು. ಗ್ರಾಮೀಣ ಪ್ರದೇಶಗಳ ಶಿಕ್ಷಿತ ಪುರುಷರ ನಿರುದ್ಯೋಗ ಪ್ರಮಾಣ 2017–18ರಲ್ಲಿ ಶೇ 10.5ಕ್ಕೆ ಏರಿಕೆಯಾಗಿದೆ. ಇದು 2004–05ರಿಂದ 2011–12ರ ಅವಧಿಯಲ್ಲಿ ಶೇ 3.5ರಿಂದ ಶೇ 4.4ರಷ್ಟಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು