ಬುಧವಾರ, ಜೂನ್ 3, 2020
27 °C

ಉತ್ತರ ಪ್ರದೇಶ: ವಲಸೆ ಕಾರ್ಮಿಕರ ಪ್ರಯಾಣಕ್ಕೆ 1,000 ಬಸ್‌ ವ್ಯವಸ್ಥೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ದೆಹಲಿ ಗಡಿ ಭಾಗದಲ್ಲಿ ಬಸ್‌ಗಳಿಗಾಗಿ ಕಾದು ನಿಂತಿರುವ ಉತ್ತರ ಪ್ರದೇಶದ ವಲಸೆ ಕಾರ್ಮಿಕರು

ಲಖನೌ: ಉತ್ತರ ಪ್ರದೇಶದಿಂದ ಅಕ್ಕ–ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿರುವ ಕಾರ್ಮಿಕರು ಊರು ಸೇರಲಾರದೆ ಗಡಿ ಭಾಗಗಳಲ್ಲಿ ಸಿಲುಕಿದ್ದು, ಅವರು ರಾಜ್ಯಕ್ಕೆ ಮರಳಲು ಅನುವಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ 1,000 ಬಸ್‌ಗಳನ್ನು ಕಳುಹಿಸಿಕೊಡುತ್ತಿರುವುದಾಗಿ ಸರ್ಕಾರದ ವಕ್ತಾರರು ಶನಿವಾರ ತಿಳಿಸಿದ್ದಾರೆ. 

ನೋಯಿಡಾ, ಘಾಜಿಯಾಬಾದ್‌, ಬುಲಂದ್‌ಷಹರ್‌, ಅಲಿಗಢ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅತಂತ್ರರಾಗಿರುವ ಕಾರ್ಮಿಕರನ್ನು ರಾಜ್ಯಕ್ಕೆ ಕರೆ ತರಲು ಸಾರಿಗೆ ಇಲಾಖೆಯ ಅಧಿಕಾರಿಗಳು, ಬಸ್‌ ಚಾಲಕರು ಹಾಗೂ ನಿರ್ವಾಹಕರನ್ನು ಶುಕ್ರವಾರ ರಾತ್ರಿ ಸಂಪರ್ಕಿಸಲಾಗಿದೆ. ಜನರಿಗೆ ಸಹಾಯ ಮಾಡಲು ಸೇವೆಯ ಅವಶ್ಯಕತೆ ಇರುವುದನ್ನು ತಿಳಿಸಲಾಗಿದೆ. 

ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರು ಶುಕ್ರವಾರ ತಡ ರಾತ್ರಿ ವರೆಗೂ ಬಸ್‌ಗಳ ವ್ಯವಸ್ಥೆ ಮಾಡುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುವುದರಲ್ಲಿ ತೊಡಗಿದ್ದರು ಹಾಗೂ ಕಾರ್ಮಿಕರು, ಅವರ ಕುಟುಂಬಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ. 

ಲಖನೌ ಬಸ್‌ ನಿಲ್ದಾಣಕ್ಕೆ ಬಂದಿಳಿಯುವ ಜನರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಆಗಿರುವ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಗಮನಿಸಿದ್ದಾರೆ. ಕಾನ್ಪುರ, ವಾರಾಣಸಿ, ಗೋರಖ್‌ಪುರ್‌, ಫೈಜಾಬಾದ್‌, ಪ್ರತಾಪಗಢ, ಸುಲ್ತಾನ್‌ಪುರ್‌, ಅಮೇಠಿ, ರಾಯ್‌ ಬರೇಲಿ, ಗೋಂಡಾ, ಶ್ರಾವಸ್ತಿ ಸೇರಿದಂತೆ ಹಲವು ಭಾಗಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. 

ರಾಜ್ಯದ ಡಿಜಿಪಿ ಹಿತೇಶ್‌ ಚಂದ್ರ ಅವಾಸ್ಥಿ ಹಾಗೂ ಲಖನೌ ಪೊಲೀಸ್‌ ಕಮಿಷನರ್‌ ಸುಜಿತ್‌ ಕುಮಾರ್‌ ಪಾಂಡೆ ಬಸ್‌ ನಿಲ್ದಾಣಕ್ಕೆ ಬಂದು ವ್ಯವಸ್ಥೆಯ ನಿರ್ವಹಣೆ ನಡೆಸಿದ್ದಾರೆ. ಕೊರೊನಾ ವೈರಸ್‌ ಸೋಂಕು ತಡೆಗಾಗಿ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗಿದ್ದು, ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಲು ಸಾಧ್ಯವಾಗದೆ ಹಲವು ರಾಜ್ಯಗಳ ನಗರಗಳಲ್ಲಿ ಉಳಿದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು