ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಹೇಳಿಕೆ ಅಲ್ಲಗಳೆದ ಭಾರತ

ಕಾಶ್ಮೀರ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಮೋದಿ ಕೋರಿದ್ದರು ಎಂದ ಅಮೆರಿಕ ಅಧ್ಯಕ್ಷ
Last Updated 23 ಜುಲೈ 2019, 19:49 IST
ಅಕ್ಷರ ಗಾತ್ರ

ನವದೆಹಲಿ: ಕಾಶ್ಮೀರ ವಿವಾದ ಪರಿಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಕೋರಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ನೀಡಿದ ಹೇಳಿಕೆ ಬಹುದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಚಾರದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಧ್ಯಸ್ಥಿಕೆ ವಹಿಸಿ ಎಂದು ಟ್ರಂಪ್‌ಗೆ ಮೋದಿ ಹೇಳಿಯೇ ಇಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.

ಕಾಶ್ಮೀರ ವಿವಾದ ಪರಿಹಾರಕ್ಕೆ ಹೊರಗಿನವರ ಮಧ್ಯಸ್ಥಿಕೆ ಬೇಕು ಎಂದು ಪಾಕಿಸ್ತಾನ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ. ಆದರೆ, ಈ ಪ್ರಸ್ತಾವವನ್ನು ಭಾರತ ವಿರೋಧಿಸುತ್ತಲೇ ಇದೆ. ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯವಾಗಿ ಮಾತ್ರ ಪರಿಹರಿಸಿಕೊಳ್ಳಲು ಸಾಧ್ಯ ಎಂಬ ನಿಲುವನ್ನು ಭಾರತ ಹೊಂದಿದೆ.

ಕಾಶ್ಮೀರ ವಿಚಾರದಲ್ಲಿ ಸಂಧಾನಕಾರನಾಗಲು ಸಿದ್ಧ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಜತೆಗಿನ ಮಾತುಕತೆ ಸಂದರ್ಭದಲ್ಲಿ ಟ್ರಂಪ್‌ ಹೇಳುವ ಮೂಲಕ ರಾಜಕೀಯ ಬಿರುಗಾಳಿಗೆ ಕಾರಣರಾಗಿದ್ದಾರೆ.

‘ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷರಿಗೆ ಇಂತಹ ಯಾವುದೇ ಮನವಿ ಮಾಡಿಕೊಂಡಿಲ್ಲ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಹೇಳುತ್ತೇನೆ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಸಂಸತ್ತಿನ ಎರಡೂ ಸದನಗಳಲ್ಲಿ ಮಂಗಳವಾರ ಹೇಳಿದರು. ಆದರೆ, ವಿರೋಧ ಪಕ್ಷಗಳ ಗದ್ದಲ ಎಷ್ಟೊಂದು ಜೋರಾಗಿತ್ತೆಂದರೆ ಅವರ ಮಾತು ಕೇಳಿಸಲೇ ಇಲ್ಲ.

ಕಾಶ್ಮೀರ ವಿವಾದವನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಿಕೊಳ್ಳಬೇಕು ಮತ್ತು ಅದಕ್ಕೂ ಮೊದಲು ಗಡಿಯಾಚಿನಿಂದ ನಡೆಯುತ್ತಿರುವ ಭಯೋತ್ಪಾದನೆ ನಿಲ್ಲಬೇಕು ಎಂದು ಜೈಶಂಕರ್‌ ಪ್ರತಿಪಾದಿಸಿದರು.

ಪಾಕಿಸ್ತಾನದ ಜತೆಗೆ ನೇರ ಮಾತುಕತೆ ಅಲ್ಲದೆ ಬೇರೆ ಸಾಧ್ಯತೆ ಈ ವಿವಾದ ಪರಿಹಾರಕ್ಕೆ ಇಲ್ಲ ಎಂಬ ಭಾರತದ ಬಹುಕಾಲದ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದನ್ನು ಮೋದಿ ಅವರೇ ಸದನದಲ್ಲಿ ತಿಳಿಸಬೇಕು ಎಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರು.

ಹಾನಿ ಸರಿಪಡಿಸಲು ಮುಂದಾದ ವಿದೇಶಾಂಗ ಸಚಿವಾಲಯ: ಟ್ರಂಪ್‌ ಅವರ ಹೇಳಿಕೆಯಿಂದ ರಾಜತಾಂತ್ರಿಕ ಮಟ್ಟದಲ್ಲಿ ಆಗಿರುವ ಹಾನಿ ಸರಿಪಡಿಸಲು ಅಮೆರಿಕದ ವಿದೇಶಾಂಗ ಇಲಾಖೆ ಮುಂದಾಗಿದೆ. ಭಾರತ–ಪಾಕಿಸ್ತಾನ ನಡುವೆ ನಡೆಯುವ ಯಾವುದೇ ಮಾತುಕತೆಯನ್ನು ಅಮೆರಿಕ ಬೆಂಬಲಿಸುತ್ತದೆ. ಕಾಶ್ಮೀರವು ಎರಡು ದೇಶಗಳಿಗೆ ಮಾತ್ರ ಸಂಬಂಧಿಸಿದ ವಿಚಾರ ಎಂದು ಇಲಾಖೆ ತಿಳಿಸಿದೆ.

‘ಕಾಶ್ಮೀರವು ಎರಡೂ ಕಡೆಯವರು ಸೇರಿ ಚರ್ಚಿಸಬೇಕಾದ ವಿಚಾರ. ಎರಡೂ ದೇಶಗಳು ಮಾತುಕತೆ ನಡೆಸುವುದನ್ನು ಅಮೆರಿಕ ಸ್ವಾಗತಿಸುತ್ತದೆ. ಇಂತಹ ಮಾತುಕತೆಗೆ ನೆರವು ನೀಡಲು ಅಮೆರಿಕ ಸದಾ ಸಿದ್ಧ’ ಎಂದು ವಿದೇಶಾಂಗ ಸಚಿವಾಲಯ ಟ್ವೀಟ್‌ ಮಾಡಿದೆ.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ತಮ್ಮ ದೇಶದ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಅಮೆರಿಕದ ಜನಪ್ರತಿನಿಧಿ ಸಭೆಯ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಎಲಿಯಟ್‌ ಎಂಗೆಲ್‌ ಸ್ಪಷ್ಟಪಡಿಸಿದ್ದಾರೆ.

‘ಕಾಶ್ಮೀರ ವಿವಾದದ ವಿಚಾರದಲ್ಲಿ ದೀರ್ಘ ಕಾಲದಿಂದ ಅಮೆರಿಕ ಅನುಸರಿಸುತ್ತಿರುವ ನೀತಿಯನ್ನು ಎಂಗೆಲ್‌ ಪುನರುಚ್ಚರಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಗೆ ನಮ್ಮ ಬೆಂಬಲ ಇದೆ. ಆದರೆ, ಮಾತುಕತೆ ಹೇಗೆ ನಡೆಯಬೇಕು ಎಂಬುದನ್ನು ಭಾರತ–ಪಾಕಿಸ್ತಾನವೇ ನಿರ್ಧರಿಸಬೇಕು ಎಂದು ಎಂಗೆಲ್‌ ಹೇಳಿದ್ದಾರೆ’ ಎಂದು ಸಮಿತಿಯು ಟ್ವೀಟ್‌ ಮಾಡಿದೆ.

ಅಮೆರಿಕದಲ್ಲೇ ವಿರೋಧ: ಅಮೆರಿಕದ ಕೆಲವು ರಾಜಕಾರಣಿಗಳು ಟ್ರಂಪ್‌ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿ
ದ್ದಾರೆ.ಟ್ರಂಪ್‌ ಅವರ ಹೇಳಿಕೆಗಾಗಿಅಮೆರಿಕದಲ್ಲಿ ಭಾರತದ ರಾಯಭಾರಿಯ ಕ್ಷಮೆ ಯಾಚಿಸಿದ್ದಾಗಿ ಡೆಮಾಕ್ರಟಿಕ್‌ ಸಂಸದ ಬ್ರಾಡ್‌ ಶೆರ್ಮನ್‌ ಹೇಳಿದ್ದಾರೆ. ಬ್ರಾಡ್‌ ಅವರು ಅಮೆರಿಕ ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರೂ ಹೌದು.

‘ಪ್ರಧಾನಿ ಮೋದಿ ಇಂತಹ ಕೋರಿಕೆಯನ್ನು ಮುಂದಿಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಟ್ರಂಪ್‌ ಅವರ ಹೇಳಿಕೆ ಬುದ್ಧಿಯಿಲ್ಲದ್ದು ಮತ್ತು ಭ್ರಮೆಯಿಂದ ಕೂಡಿದ್ದು. ಇದು ಮುಜುಗರ ತಂದಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ವಿವಾದಕ್ಕೆ ತಿದಿಯೊತ್ತಿದ ಇಮ್ರಾನ್‌

ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿರುವ ಇಮ್ರಾನ್‌ ಅವರು ಕಾಶ್ಮೀರ ವಿವಾದ ಪರಿಹಾರದ ಹೇಳಿಕೆಯ ಬೆಂಕಿ ಇನ್ನಷ್ಟು ಭುಗಿಲೇಳುವಂತೆ ಮಾಡಿದ್ದಾರೆ. ಹೊರಗಿನ ಬೆಂಬಲದಿಂದ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ ಎಂದು ಅವರು ಹೇಳಿದ್ದಾರೆ.

ದ್ವಿಪಕ್ಷೀಯವಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಅಷ್ಟೊಂದು ಬಿರುಕು ಉಂಟಾಗಿದೆ. ‘ಭಾರತವು ಮಾತುಕತೆಗೆ ಬರಬೇಕು. ಅಮೆರಿಕವು ಇದರಲ್ಲಿ ದೊಡ್ಡ ಪಾತ್ರ ವಹಿಸಬಹುದು. ಅಧ್ಯಕ್ಷ ಟ್ರಂಪ್‌ ಅವರು ಖಂಡಿತವಾಗಿಯೂ ನಿರ್ಣಾಯಕ ಪಾತ್ರ ವಹಿಸಬಹುದು’ ಎಂದು ಇಮ್ರಾನ್‌ ಅವರು ಫಾಕ್ಸ್‌ ನ್ಯೂಸ್‌ಗೆ ಹೇಳಿದ್ದಾರೆ.

ಅಮೆರಿಕದಲ್ಲೇ ವಿರೋಧ

ಅಮೆರಿಕದ ಕೆಲವು ರಾಜಕಾರಣಿಗಳು ಟ್ರಂಪ್‌ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

ಟ್ರಂಪ್‌ ಅವರ ಹೇಳಿಕೆಗಾಗಿ ಅಮೆರಿಕದಲ್ಲಿ ಭಾರತದ ರಾಯಭಾರಿಯ ಕ್ಷಮೆ ಯಾಚಿಸಿದ್ದಾಗಿ ಡೆಮಾಕ್ರಟಿಕ್‌ ಸಂಸದ ಬ್ರಾಡ್‌ ಶೆರ್ಮನ್‌ ಹೇಳಿದ್ದಾರೆ. ಬ್ರಾಡ್‌ ಅವರು ಅಮೆರಿಕ ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರೂ ಹೌದು.

‘ಪ್ರಧಾನಿ ಮೋದಿ ಇಂತಹ ಕೋರಿಕೆಯನ್ನು ಮುಂದಿಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಟ್ರಂಪ್‌ ಅವರ ಹೇಳಿಕೆ ಬುದ್ಧಿಯಿಲ್ಲದ್ದು ಮತ್ತು ಭ್ರಮೆಯಿಂದ ಕೂಡಿದ್ದು. ಇದು ಮುಜುಗರ ತಂದಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
ತಿದಿಯೊತ್ತಿದ ಇಮ್ರಾನ್‌

ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿರುವ ಇಮ್ರಾನ್‌ ಅವರು ಕಾಶ್ಮೀರ ವಿವಾದ ಪರಿಹಾರದ ಹೇಳಿಕೆಯ ಬೆಂಕಿ ಇನ್ನಷ್ಟು ಭುಗಿಲೇಳುವಂತೆ ಮಾಡಿದ್ದಾರೆ. ಹೊರಗಿನ ಬೆಂಬಲದಿಂದ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ ಎಂದು ಅವರು ಹೇಳಿದ್ದಾರೆ.

ದ್ವಿಪಕ್ಷೀಯವಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಅಷ್ಟೊಂದು ಬಿರುಕು ಉಂಟಾಗಿದೆ. ‘ಭಾರತವು ಮಾತುಕತೆಗೆ ಬರಬೇಕು. ಅಮೆರಿಕವು ಇದರಲ್ಲಿ ದೊಡ್ಡ ಪಾತ್ರ ವಹಿಸಬಹುದು. ಅಧ್ಯಕ್ಷ ಟ್ರಂಪ್‌ ಅವರು ಖಂಡಿತವಾಗಿಯೂ ನಿರ್ಣಾಯಕ ಪಾತ್ರ ವಹಿಸಬಹುದು’ ಎಂದು ಇಮ್ರಾನ್‌ ಅವರು ಫಾಕ್ಸ್‌ ನ್ಯೂಸ್‌ಗೆ ಹೇಳಿದ್ದಾರೆ.

ಮೋದಿ ಸ್ಪಷ್ಟನೆಗೆ ಪಟ್ಟು

ಮೋದಿ ಅವರೇ ಸಂಸತ್ತಿನಲ್ಲಿ ಸ್ಪಷ್ಟನೆ ಕೊಡಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯದಿರಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಈ ಬೇಡಿಕೆಗೆ ಸರ್ಕಾರವು ಮಣಿಯುವ ಸಾಧ್ಯತೆ ಇಲ್ಲ. ‘ಸರ್ಕಾರಕ್ಕೆ ಸಾಮೂಹಿಕ ಹೊಣೆಗಾರಿಕೆ ಇದೆ. ಜೈಶಂಕರ್‌ ಅವರ ಹೇಳಿಕೆಯೇ ಸಾಕಷ್ಟಾಯಿತು’ ಎಂಬುದು ಸರ್ಕಾರದ ನಿಲುವು. ಹಾಗಾಗಿ ಬುಧವಾರವೂ ಕಲಾಪ ನಡೆಯುವ ಸಾಧ್ಯತೆ ಕಡಿಮೆ.

ಈ ವಿಚಾರದಲ್ಲಿ ವಿರೋಧ ಪಕ್ಷಗಳ ಕಾರ್ಯತಂತ್ರ ಏನಿರಬೇಕು ಎಂಬ ಬಗ್ಗೆ ರಾಜ್ಯಸಭೆಯ ವಿರೋಧ ಪಕ್ಷಗಳ ನಾಯಕರು ಮಂಗಳವಾರ ಎರಡು ಸಭೆ ನಡೆಸಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಲೋಕಸಭೆಯ ಕಾಂಗ್ರೆಸ್‌ ಸಂಸದರ ಸಭೆಯೂ ನಡೆದಿದೆ.

ಮೋದಿ ಅವರು ಸ್ಪಷ್ಟನೆ ನೀಡದೇ ಇದ್ದರೆ ಬುಧವಾರ ಮಧ್ಯಾಹ್ನ ಮತ್ತೆ ಭೇಟಿಯಾಗಿ ಯಾವ ಕಾರ್ಯತಂತ್ರ ಅನುಸರಿಸಬೇಕು ಎಂಬ ಬಗ್ಗೆ ನಿರ್ಧರಿಸಲು ರಾಜ್ಯಸಭೆಯ ಮುಖಂಡರು ನಿರ್ಧರಿಸಿದ್ದಾರೆ.

ಟ್ರಂಪ್‌ ಹೇಳಿದ್ದೇನು?

‘ನನ್ನ ಸಹಾಯ ಬೇಕಿದ್ದರೆ, ಸಂತೋಷದಿಂದಲೇ ಮಧ್ಯಸ್ಥಿಕೆ ವಹಿಸುವೆ. ನನ್ನಿಂದ ಏನಾದರೂ ನೆರವು ಬೇಕಿದ್ದರೆ ತಿಳಿಸಿ’ ಎಂದು ಪ್ರಶ್ನೆಯೊಂದಕ್ಕೆ ಟ್ರಂಪ್‌ ಉತ್ತರಿಸಿದರು.

‘ಎರಡು ವಾರ ಹಿಂದೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೆ. ಈ ವಿಚಾರದ (ಕಾಶ್ಮೀರ) ಬಗ್ಗೆ ನಾವು ಮಾತನಾಡಿದ್ದೆವು. ‘ನೀವು ಮಧ್ಯಸ್ಥಿಕೆ ವಹಿಸಲು ಅಥವಾ ಸಂಧಾನಕಾರರಾಗಲು ಸಾಧ್ಯವೇ’ ಎಂದು ಅವರು ಕೇಳಿದರು. ‘ಎಲ್ಲಿ’ ಎಂದು ನಾನು ಕೇಳಿದೆ. ‘ಕಾಶ್ಮೀರ’ ಎಂದು ಮೋದಿ ಹೇಳಿದರು’ ಎಂದು ಟ್ರಂಪ್‌ ಸೋಮವಾರ ಹೇಳಿದ್ದರು.

**

ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದಾಗಲೂ ನಮ್ಮ ಕಾಶ್ಮೀರ ನೀತಿ ಒಂದೇ ಆಗಿತ್ತು. ಮೂರನೆಯವರಿಗೆ ಈ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ಅವಕಾಶವೇ ಇರಲಿಲ್ಲ.

- ಗುಲಾಂ ನಬಿ ಆಜಾದ್‌,ರಾಜ್ಯಸಭೆಯ ವಿಪಕ್ಷ ನಾಯಕ

**

ಪ್ರಧಾನಿ ಪರವಾಗಿ ವಿದೇಶಾಂಗ ಸಚಿವರು ಯಾಕೆ ಹೇಳಿಕೆ ಕೊಡಬೇಕು? ಪ್ರಧಾನಿಯೇ ಸದನಕ್ಕೆ ಬಂದು ಹೇಳಿಕೆ ಕೊಡಬೇಕು

- ತಿರುಚ್ಚಿ ಶಿವ, ಡಿಎಂಕೆ ನಾಯಕ

**

ಪ್ರಧಾನಿಯವರು ಯಾವಾಗ ಎಚ್ಚೆತ್ತುಕೊಂಡು ಟ್ರಂಪ್‌ ಸುಳ್ಳು ಹೇಳಿದ್ದಾರೆ ಎನ್ನಲಿದ್ದಾರೆ? ಅಥವಾ ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕದ ಅಧ್ಯಕ್ಷರನ್ನು ಮೋದಿ ಅವರು ಕೋರಿದ್ದಾರೆಯೇ?

- ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ವಕ್ತಾರ

**

ವಿರೋಧ ಪಕ್ಷಗಳಿಗೆ ಇರುವುದು ಒಂದೇ ಒಂದು ಬೇಡಿಕೆ. ಪ್ರಧಾನಿ ಮೋದಿ ಅವರು ಸದನಕ್ಕೆ ಬಂದು ಸ್ಪಷ್ಟನೆ ನೀಡಲೇಬೇಕು

- ಡೆರೆಕ್‌ ಒ ಬ್ರಯಾನ್‌, ಟಿಎಂಸಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT