ಗುರುವಾರ , ಫೆಬ್ರವರಿ 27, 2020
19 °C
ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ನಿಂದ ವಿಶ್ವಸಂಸ್ಥೆಗೆ ಪ್ರಸ್ತಾವ

ಉಗ್ರ ಮಸೂದ್ ನಿಷೇಧಕ್ಕೆ ಮತ್ತೊಮ್ಮೆ ಪ್ರಸ್ತಾವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಜೈಷ್‌ ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ ವಿಶ್ವಸಂಸ್ಥೆಗೆ ಪ್ರಸ್ತಾವ ಸಲ್ಲಿಸಿವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಬುಧವಾರ ಈ ಪ್ರಸ್ತಾವ ಸಲ್ಲಿಸಲಾಗಿದೆ. 15 ಸದಸ್ಯರಿರುವ ಭದ್ರತಾ ಮಂಡಳಿಯಲ್ಲಿ ಐವರು ಶಾಶ್ವತ ಸದಸ್ಯ ರಾಷ್ಟ್ರಗಳಲ್ಲಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ ಸೇರಿವೆ. ಈ ರಾಷ್ಟ್ರಗಳು ವೀಟೊ ಅಧಿಕಾರ ಹೊಂದಿರುವುದರಿಂದ ಈ ಪ್ರಸ್ತಾವಕ್ಕೆ ಹೆಚ್ಚು ಮಹತ್ವ ಬಂದಿದೆ. ಭಾರತದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದು ನಾವೇ ಎಂದು ಜೆಇಎಂ ಘೋಷಿಸಿಕೊಂಡಿತ್ತು. ಹೀಗಾಗಿಯೂ ಈ ಪ್ರಸ್ತಾವ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಈ ಪ್ರಸ್ತಾವ ಕುರಿತಂತೆ ಮುಂದಿನ 10 ದಿನಗಳ ಒಳಗೆ ಭದ್ರತಾ ಮಂಡಳಿಯು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಮಸೂದ್‌ನ ನಿಷೇಧಕ್ಕಾಗಿ ಹತ್ತು ವರ್ಷಗಳಲ್ಲಿ ಸಲ್ಲಿಸಲಾದ ನಾಲ್ಕನೇ ಪ್ರಸ್ತಾವ ಇದು. 2009ರಲ್ಲಿ ಭಾರತವು ಮೊದಲ ಬಾರಿ ಪ್ರಸ್ತಾವ ಸಲ್ಲಿಸಿತ್ತು. 2016ರಲ್ಲಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಪ್ರಸ್ತಾವ ಸಲ್ಲಿಸಿದ್ದವು. 2017ರಲ್ಲೂ ಈ ರಾಷ್ಟ್ರಗಳು ಪ್ರಸ್ತಾವ ಸಲ್ಲಿಸಿದ್ದವು. ಆದರೆ ಮೂರು ಬಾರಿಯೂ ಈ ಪ್ರಸ್ತಾವವನ್ನು ಚೀನಾ ತಿರಸ್ಕರಿಸಿತ್ತು. ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿರುವ ಕಾರಣ ಚೀನಾಕ್ಕೆ ವೀಟೊ ಅಧಿಕಾರ ಇದೆ. ಆ ಅಧಿಕಾರ ಬಳಸಿ ಚೀನಾವು ಈ ಪ್ರಸ್ತಾವವು ವಿಫಲವಾಗುವಂತೆ ಮಾಡಿತ್ತು. ಈ ಬಾರಿಯೂ ಚೀನಾ ಏನು ಮಾಡುತ್ತದೆ ಎಂಬುದರ ಮೇಲೆ ಈ ಪ್ರಸ್ತಾವದ ಭವಿಷ್ಯ ನಿರ್ಧಾರವಾಗುತ್ತದೆ.

ಮಸೂದ್‌ನನ್ನು ಕಟ್ಟಿಹಾಕಲು ಸಾಧ್ಯ: ಮಸೂದ್‌ನನ್ನು ಈ ಪಟ್ಟಿಗೆ ಸೇರಿಸಿದರೆ, ಆತನ ಮೇಲೆ ಪ್ರಯಾಣ ನಿಷೇಧವನ್ನು ಹೇರಲಾಗುತ್ತದೆ. ಯಾವುದೇ ಸ್ವರೂಪದ ಸಾರಿಗೆಯ ಮೂಲಕವೂ ಆತ ತಮ್ಮ ಗಡಿಯನ್ನು ಪ್ರವೇಶಿಸುವುದನ್ನು ಎಲ್ಲಾ ದೇಶಗಳು ನಿಷೇಧಿಸಬೇಕಾಗುತ್ತದೆ. 

ಆತ ಮತ್ತು ಆತನ ಉಗ್ರ ಸಂಘಟನೆಗೆ ಸೇರಿದ ಎಲ್ಲಾ ಸ್ವರೂಪದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆತನಿಗೆ ಮತ್ತು ಆತನ ಸಂಘಟನೆಗೆ ಹಣಕಾಸು ನೆರವು ನೀಡುವುದನ್ನು ನಿಷೇಧಿಸಲಾಗುತ್ತದೆ.

ಆತ ಮತ್ತು ಆತನ ಸಂಘಟನೆಗೆ ಯಾವುದೇ ರಾಷ್ಟ್ರಗಳು ನೇರವಾಗಿ ಅಥವಾ ಪರೋಕ್ಷವಾಗಿ ಶಸ್ತ್ರಾಸ್ತ್ರ, ಶಸ್ತ್ರಾಸ್ತ್ರಗಳ ಬಿಡಿಭಾಗಗಳು, ಶಸ್ತ್ರಾಸ್ತ್ರ ತಯಾರಿಕೆಗೆ ತಾಂತ್ರಿಕ ನೆರವು, ಶಸ್ತ್ರಾಸ್ತ್ರ ತಯಾರಿಕೆ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ಬಳಕೆ ತರಬೇತಿ ನೀಡುವುದನ್ನು ನಿಷೇಧಿಸಲಾಗುತ್ತದೆ.

ಕದನ ವಿರಾಮ ಉಲ್ಲಂಘನೆ

ಗಡಿ ನಿಯಂತ್ರಣಾ ರೇಖೆಗೆ ಹೊಂದಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಮತ್ತು ರಾಜೌರಿ ಜಿಲ್ಲೆಗಳ ಗಡಿ ಗ್ರಾಮಗಳ ಮೇಲೆ ಪಾಕಿಸ್ತಾನದ ಸೈನಿಕರು ಅಪ್ರಚೋದಿತರಾಗಿ ಗುಂಡು ಮತ್ತು ಷೆಲ್ ದಾಳಿ ನಡೆಸಿದ್ದಾರೆ. ಭಾರತದ ಗಡಿ ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿವೆ.

ಆಸ್ಪತ್ರೆಗಳಿಗೆ ರೆಡ್‌ಕ್ರಾಸ್

ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಲ್ಲಿ ಪಾಕಿಸ್ತಾನವು ಅಪ್ರಚೋದಿತವಾಗಿ ದಾಳಿ ನಡೆಸುತ್ತಿರುವ ಕಾರಣ ರಾಜ್ಯದ ಎಲ್ಲಾ ಆಸ್ಪತ್ರೆಗಳ ಚಾವಣಿ ಮೇಲೆ ರೆಡ್‌ಕ್ರಾಸ್‌ ಚಿನ್ಹೆ ಬಿಡಿಸಲಾಗುತ್ತಿದೆ. ಇವು ಆಸ್ಪತ್ರೆಗಳು ಎಂದು ಸೂಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸಮಜೋತಾ ಅತಂತ್ರ

ದೆಹಲಿ ಮತ್ತು ಪಾಕಿಸ್ತಾನದ ಲಾಹೋರ್ ನಡುವಣ ಸಮಜೋತಾ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ಪಾಕಿಸ್ತಾನ ಸ್ಥಗಿತಗೊಳಿಸಿದೆ. ಈ ಸಂಬಂಧ ಭಾರತ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ. 1976ರಲ್ಲಿ ಈ ರೈಲನ್ನು ಆರಂಭಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು