ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರಿಗಾಗಿ 1,000 ಬಸ್‌: ಪ್ರಿಯಾಂಕಾ ಮನವಿಗೆ ಉತ್ತರ ಪ್ರದೇಶ ಸಮ್ಮತಿ

Last Updated 18 ಮೇ 2020, 12:59 IST
ಅಕ್ಷರ ಗಾತ್ರ

ಲಖನೌ: ಕೋವಿಡ್‌–19 ಲಾಕ್‌ಡೌನ್‌ನಿಂದ ಉತ್ತರ ಪ್ರದೇಶದ ವಿವಿಧ ಕಡೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು 1,000 ಬಸ್‌ ವ್ಯವಸ್ಥೆ ಮಾಡುವುದಾಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿದ್ದ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಸಮ್ಮತಿಸಿದೆ.

ಪ್ರಿಯಾಂಕಾ ಅವರು ಸಲ್ಲಿಸಿರುವ ಪ್ರಸ್ತಾಪವನ್ನು ಸರ್ಕಾರ ಒಪ್ಪಿರುವುದಾಗಿ ಉತ್ತರ ಪ್ರದೇಶ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್‌ ಅವಸ್ಥಿ ಆದೇಶ ರವಾನಿಸಿದ್ದಾರೆ. ಪ್ರಿಯಾಂಕಾ ಅವರ ಆಪ್ತ ಕಾರ್ಯದರ್ಶಿಗೆ ಈ ಕುರಿತು ತಿಳಿಸಲಾಗಿದೆ.

ಅವನಿಶ್‌ ಅವಸ್ಥಿ ಅವರು 1,000 ಬಸ್‌ಗಳ ಚಾಲನೆ ಮಾಡುವ ಚಾಲಕರ ಹೆಸರು ಹಾಗೂ ಇತರೆ ವಿವರಗಳನ್ನು ನೀಡುವಂತೆ ಕೋರಿದ್ದಾರೆ.

ಘಾಜಿಯಾಬಾದ್‌ನ ಘಾಜಿಪುರ್‌ ಗಡಿಯಿಂದ ಹಾಗೂ ನೋಯ್ಡಾ ಗಡಿಭಾಗದಿಂದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಎರಡೂ ಸ್ಥಳಗಳಿಂದ ತಲಾ 500 ಬಸ್‌ಗಳ ಸಂಚಾರ ವ್ಯವಸ್ಥೆ ಕಾಂಗ್ರೆಸ್‌ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪ್ರಿಯಾಂಕಾಪತ್ರ ಮುಖೇನ ಮನವಿ ಮಾಡಿದ್ದರು. ಎರಡು ದಿನಗಳ ನಂತರ ಸರ್ಕಾರ ನಿರ್ಧಾರ ಪ್ರಕಟಿಸಿದೆ.

1,000 ಬಸ್‌ಗಳ ಸಂಚಾರಕ್ಕೆ ಆಗುವ ಎಲ್ಲ ವೆಚ್ಚವನ್ನು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಭರಿಸುವುದಾಗಿ ಪ್ರಿಯಾಂಕಾಪತ್ರದಲ್ಲಿ ಪ್ರಸ್ತಾಪಿಸಿದ್ದರು.

ರಾಜಸ್ಥಾನದ ಭರತ್‌ಪುರ್‌ ಮತ್ತು ಆಲ್ವಾರ್‌ನಿಂದ 500 ಬಸ್‌ಗಳು ಎರಡು ರಾಜ್ಯಗಳ ಗಡಿ ಭಾಗವಾದ ಬಹಜ್‌–ಗೋವರ್ಧನ್‌ ಪ್ರದೇಶ ತಲುಪಿವೆ. ಆದರೆ, ಉತ್ತರ ಪ್ರದೇಶ ಸರ್ಕಾರ ಅಗತ್ಯ ಅನುಮತಿ ನೀಡದೆ ಮೌನ ವಹಿಸಿತ್ತು. ಬಸ್‌ಗಳು ಅಲ್ಲಿಂದ ಮರಳಿದ್ದವು,ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ, 'ಇದು ರಾಜಕೀಯ ಮಾಡುವ ಸಮಯವಲ್ಲ. ನಮ್ಮ ಬಸ್‌ಗಳು ಗಡಿ ಭಾಗದಲ್ಲಿ ನಿಂತಿವೆ. ಅನುಮತಿ ನೀಡಿ...' ಎಂದು ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿದ್ದರು.

ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿಕೊಡಲು ವಿಫಲವಾದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ವ್ಯಕ್ತಪಡಿಸಿದ್ದರು. ಔರೇಯಾ ಎಂಬಲ್ಲಿ ಟ್ರಕ್‌ಗಳು ಡಿಕ್ಕಿಯಾಗಿ 24 ವಲಸೆ ಕಾರ್ಮಿಕರು ಮೃತಪಟ್ಟ ಬಗ್ಗೆ ಉಲ್ಲೇಖಿಸಿದ ಅವರು, ಸರ್ಕಾರ ಎಲ್ಲವನ್ನೂ ಮರೆತಿದೆ ಎಂದು ಟೀಕಿಸಿದ್ದರು.

‘ವಲಸೆ ಕಾರ್ಮಿಕರು ಮನೆಗಳಿಗೆ ಮರಳಲು ಸರ್ಕಾರ ವ್ಯವಸ್ಥೆ ಮಾಡಿಕೊಡುತ್ತಿಲ್ಲ ಯಾಕೆ ಎಂಬುದನ್ನು ಈ ಹೃದಯವಿದ್ರಾವಕ ಘಟನೆ ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ. ವಲಸೆ ಕಾರ್ಮಿಕರನ್ನು ರಾಜ್ಯದೊಳಕ್ಕೆ ಕರೆದುಕೊಂಡು ಬರಲು ಬಸ್‌ಗಳು ಯಾಕೆ ಸಂಚರಿಸುತ್ತಿಲ್ಲ. ಸರ್ಕಾರಕ್ಕೆ ಇದ್ಯಾವುದೂ ಕಾಣಿಸುತ್ತಿಲ್ಲವೇ?’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT