ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರೋಧಿಸಿದವರ ಹೆಸರುಗಳ ಫಲಕ ಪ್ರದರ್ಶಿಸಲು ಯಾವ ಕಾನೂನು ಇದೆ?:ಸುಪ್ರೀಂಕೋರ್ಟ್

Last Updated 12 ಮಾರ್ಚ್ 2020, 9:44 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ ಮೊಕದ್ದಮೆ ದಾಖಲಿಸಲಾಗಿರುವ 57 ಮಂದಿಯ ಹೆಸರು, ವಿವರಗಳನ್ನು ಒಳಗೊಂಡ ಬೃಹತ್‌ ಫಲಕಗಳನ್ನು ಉತ್ತರ ಪ್ರದೇಶ ಸರ್ಕಾರ ಪ್ರದರ್ಶಿಸಿತ್ತು. ಈ ಪ್ರಕರಣ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಯಾವ ಕಾನೂನು ಪ್ರಕಾರ ಈ ರೀತಿ ಫಲಕ ಪ್ರದರ್ಶಿಸಿದ್ದೀರಿ? ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ.

ಇದು ಖಾಸಗಿತನಕ್ಕೆ ಸಂಬಂಧಪಟ್ಟದ್ದು ಎಂದು ಹೇಳಿದ ನ್ಯಾಯಮೂರ್ತಿ ಯು.ಯು ಲಲಿತ್, ಹೀಗೆ ಫಲಕ ಪ್ರದರ್ಶಿಸಬೇಕಾದರೆ ಅದಕ್ಕೊಂದು ಕಾನೂನು ಇರಬೇಕು. ಇಲ್ಲಿ ಯಾವುದೇ ಕಾನೂನು ಫಲಕ ಪ್ರದರ್ಶಿಸುವ ವಿಷಯವನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಖಾಸಗಿತನಕ್ಕೆ ಸಂಬಂಧಪಟ್ಟಂತೆ 1994ರಲ್ಲಿ ಆರ್. ರಾಜಗೋಪಾಲ್ vs ತಮಿಳುನಾಡು ನಡುವಿನ ನ್ಯಾಯಾಲಯದ ತೀರ್ಪನ್ನು ಮುಂದಿಟ್ಟಿದ್ದಾರೆ. ಪ್ರತಿಭಟನೆ ವೇಳೆ ಹಿಂಸಾಚಾರ ನಡೆಸಿ, ಗನ್ ತೋರಿಸಿದವರಿಗೆ ಗೌಪ್ಯತೆಯ ಹಕ್ಕು ಇರುವುದಿಲ್ಲ ಎಂದು ಮೆಹ್ತಾ ವಾದಿಸಿದ್ದಾರೆ.

ಆದಾಗ್ಯೂ, ಪೋಸ್ಟರ್ ತೆರವುಗೊಳಿಸಬೇಕು ಎಂದಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ನ್ಯಾಯಾಲಯವು ಈ ಪ್ರಕರಣವನ್ನು ವಿಸ್ತೃತ ಪೀಠದ ಮುಂದಿಟ್ಟಿದೆ. ಈ ವಿಷಯ ಮತ್ತಷ್ಟು ವಿವರವಾಗಿಪರಿಶೀಲನೆಗೊಳಪಡಬೇಕಿದೆ ಎಂದು ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ ಹೇಳಿದೆ.

ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದವರ ಫೋಟೊ ಮತ್ತು ವೈಯಕ್ತಿಕ ಮಾಹಿತಿಗಳನ್ನೊಳಗೊಂಡ ಫಲಕವನ್ನು ತೆರವುಗೊಳಿಸಬೇಕು ಎಂದು ಮಾರ್ಚ್ 9ರಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT