ಭಾನುವಾರ, ಏಪ್ರಿಲ್ 18, 2021
31 °C

ಸಿದ್ಧಾರ್ಥ ಸಾವು | ಕೆಫೆ ಕಾಫಿ ಡೇ ಹಂಗಾಮಿ ಅಧ್ಯಕ್ಷರಾಗಿ ಎಸ್‌.ವಿ. ರಂಗನಾಥ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ವತಂತ್ರ ನಿರ್ದೇಶಕ ಎಸ್‌.ವಿ. ರಂಗನಾಥ್‌ ಅವರನ್ನು ಮಧ್ಯಂತರ ಅವಧಿಯ ಅಧ್ಯಕ್ಷರನ್ನಾಗಿ ಕೆಫೆ ಕಾಫಿ ಡೇಯ ರೆಸ್ಟೋರೆಂಟ್‌ ಸರಣಿಯ ಪ್ರವರ್ತಕ ಸಂಸ್ಥೆ ಕಾಫಿ ಡೇ ಎಂಟರ್‌ಪ್ರೈಸಸ್‌ ನೇಮಿಸಿದೆ. ಇವರು ಹಿಂದೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿದ್ದರು. 

ಕಂಪನಿಯ ಆಡಳಿತ ಮಂಡಳಿಯ ಸಭೆ ಬುಧವಾರ ನಡೆಯಿತು. ಸದ್ಯಕ್ಕೆ ಕಂಪನಿಯ ಆಡಳಿತ ನಿರ್ವಹಣೆಗಾಗಿ ವ್ಯವಸ್ಥೆಯೊಂದನ್ನು ಸಭೆಯಲ್ಲಿ ರೂಪಿಸಲಾಗಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಒಒ) ನಿತಿನ್‌ ಬಾಗ್ಮನೆ ಅವರನ್ನು ನೇಮಿಸಲಾಗಿದೆ. ಕಾರ್ಯನಿರ್ವಹಣಾ ಸಮಿತಿಯೊಂದನ್ನೂ ರಚಿಸಲಾಗಿದೆ. ಅದರಲ್ಲಿ ರಂಗನಾಥ್‌, ನಿತಿನ್‌ ಮತ್ತು ಮುಖ್ಯ ಹಣಕಾಸು ಅಧಿಕಾರಿ ಆರ್‌. ರಾಮ್‌ ಮೋಹನ್‌ ಅವರಿದ್ದಾರೆ.

ಕಾರ್ಯನಿರ್ವಹಣಾ ಸಮಿತಿಗೆ ಇರುವ ಅಧಿಕಾರಗಳು ಏನು ಎಂಬುದರ ವಿವರವಾದ ದಾಖಲೆಯನ್ನು ಮಂಡಳಿಯು ಮುಂದೆ ಸಿದ್ಧಪಡಿಸಲಿದೆ ಎಂದೂ ಸಭೆಯಲ್ಲಿ ಹೇಳಲಾಗಿದೆ. 

ಬ್ಯಾಂಕುಗಳು, ಹೂಡಿಕೆದಾರರು ಮತ್ತು ತೆರಿಗೆ ಅಧಿಕಾರಿಗಳಿಂದ ಒತ್ತಡ ಇದೆ ಎಂಬ ಅರ್ಥದ ಪತ್ರವನ್ನು ಕಾಫಿ ಡೇ ಎಂಟರ್‌ಪ್ರೈಸಸ್‌ ಅಧ್ಯಕ್ಷ ವಿ.ಜಿ.ಸಿದ್ಧಾರ್ಥ ಅವರು ನಾಪತ್ತೆಯಾಗುವ ಮುನ್ನ ಬರೆದಿದ್ದರು ಎನ್ನಲಾಗಿದೆ. ಈ ಪತ್ರದಲ್ಲಿನ ವಿಚಾರಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಹಿರಿಯ ಆಡಳಿತಾಧಿಕಾರಿಗಳು, ಲೆಕ್ಕ ಪರಿಶೋಧಕರು, ಮಂಡಳಿಯ ಗಮನಕ್ಕೆ ಬಾರದಿರುವ ವಹಿವಾಟುಗಳೂ ಇವೆ ಎಂದು ಪತ್ರದಲ್ಲಿ ಹೇಳಿರುವುದರ ಬಗ್ಗೆಯೂ ಚರ್ಚೆ ನಡೆದಿದೆ.

ಮಲ್ಯ ಟ್ವೀಟ್‌

ಸಿದ್ಧಾರ್ಥ ಅವರ ಜತೆಗೆ ನನಗೆ ನೇರ ಸಂಬಂಧ ಇತ್ತು. ಒಳ್ಳೆಯ ಮನುಷ್ಯ ಮತ್ತು ಚತುರ ಉದ್ಯಮಿ. ಅವರು ಬರೆದ ಪತ್ರದ ಅಂಶಗಳು ನನ್ನಲ್ಲಿ ಆಘಾತ ಮೂಡಿಸಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಬ್ಯಾಂಕುಗಳು ಯಾವುದೇ ವ್ಯಕ್ತಿಯನ್ನು ಹತಾಶೆಗೆ ತಳ್ಳಬಹುದು. ನನ್ನೆಲ್ಲ ಸಾಲ ಮರುಪಾವತಿಗೆ ಸಿದ್ಧ ಎಂದರೂ ನನ್ನ ವಿಚಾರದಲ್ಲಿ ಅವರು ಮಾಡುತ್ತಿರುವುದು ನೋಡಿ. ದುಷ್ಟತನ ಮತ್ತು ಹಟಮಾರಿತನ

ವಿಜಯ ಮಲ್ಯ, ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ

* ಸರ್ಕಾರ ಮತ್ತು ಅದರ ಅನುಯಾಯಿ ಸಂಸ್ಥೆಗಳ ಮೂಲಕ ನೀಡುವ ವ್ಯವಸ್ಥಿತ ಕಿರುಕುಳ ಅತ್ಯಂತ ದೊಡ್ಡ ಸವಾಲು. ಐ.ಟಿ., ಇ.ಡಿ., ಸಿಬಿಐ ಮುಂತಾದ ಸಂಸ್ಥೆಗಳೇ ವ್ಯಾಪಾರ ಸುಲಲಿತಗೊಳಿಸುವಲ್ಲಿ ದೊಡ್ಡ ತೊಡಕುಗಳು

-ಕಾರ್ತಿ ಚಿದಂಬರಂ, ಕಾಂಗ್ರೆಸ್‌ ಸಂಸದ

* ನನಗೆ ವೈಯಕ್ತಿಕವಾಗಿ ಅವರ (ಸಿದ್ಧಾರ್ಥ) ಬಗ್ಗೆ ಗೊತ್ತಿಲ್ಲ. ಅವರ ಆರ್ಥಿಕ ಸ್ಥಿತಿಯ ತಿಳಿವಳಿಕೆ ಇಲ್ಲ. ಉದ್ಯಮದಲ್ಲಿನ ವೈಫಲ್ಯವು ಉದ್ಯಮಿಗಳ ಆತ್ಮಗೌರವವನ್ನು ನಾಶ ಮಾಡಬಾರದು ಎಂದಷ್ಟೇ ನನಗೆ ಗೊತ್ತು. ಆತ್ಮಗೌರವ ನಷ್ಟವಾದರೆ ಅದು ಉದ್ಯಮಿಯ ಸಾವು

-ಆನಂದ್‌  ಮಹೀಂದ್ರಾ, ಉದ್ಯಮಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು