ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಏನಿದು ಪೌರತ್ವ ತಿದ್ದುಪಡಿ ಮಸೂದೆ?

Last Updated 17 ಡಿಸೆಂಬರ್ 2019, 8:40 IST
ಅಕ್ಷರ ಗಾತ್ರ

ಪೌರತ್ವ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆಯುವುದರೊಂದಿಗೆ ಮತ್ತೆ ಅದಕ್ಕೆ ಸಂಬಂಧಿಸಿದ ಚರ್ಚೆ ಮುನ್ನೆಲೆಗೆ ಬಂದಿದೆ. ಒಂದೆಡೆ ಮಸೂದೆಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಈ ವಿಚಾರವಾಗಿ ಪರ–ವಿರೋಧ ಚರ್ಚೆಯಾಗುತ್ತಿದೆ.

ಏನಿದುಪೌರತ್ವ (ತಿದ್ದುಪಡಿ) ಮಸೂದೆ?

ಬಾಂಗ್ಲಾದೇಶ, ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ಮಸೂದೆ.1955ರಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ ಈಗಿನ ಮಸೂದೆ ರೂಪಿಸಲಾಗಿದೆ. ಹಳೆಯ ಕಾಯ್ದೆ ಪ್ರಕಾರ ಅಫ್ಗಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್‌, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದರು. ಆದರೆ ತಿದ್ದುಪಡಿ ಮಾಡಿ ರೂಪಿಸಲಾಗಿರುವ ಮಸೂದೆ ಅಡಿಯಲ್ಲಿ, ಇವರೆಲ್ಲಾಭಾರತದಲ್ಲಿ 6 ವರ್ಷ ವಾಸವಿದ್ದರೆ ಇಲ್ಲಿನಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇತರ ರಾಷ್ಟ್ರಗಳ ಮುಸ್ಲಿಮರಿಗೆ ಈ ಮಸೂದೆ ಅಡಿಯಲ್ಲಿ ಭಾರತ ಪೌರತ್ವ ನೀಡಲಾಗುವುದಿಲ್ಲ.ಈ ತಿದ್ದುಪಡಿ ಮಸೂದೆಯನ್ನುಮೊದಲಿಗೆ 2016ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು.

ಯಾರು ಅರ್ಹರು?

ಧರ್ಮದ ಆಧಾರದಲ್ಲಿ ನೆರೆ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದಿರುವ ಮುಸ್ಲಿಮೇತರ ವಲಸಿಗರು ಪೌರತ್ವಕ್ಕೆ ಅರ್ಹರಾಗಿದ್ದಾರೆ. ಆದರೆ, ಇಂತಹವರು 2014ರ ಡಿಸೆಂಬರ್‌ 31ರ ಮೊದಲು ಭಾರತಕ್ಕೆ ಬಂದಿರಬೇಕು. ಸಾಗರೋತ್ತರ ನಾಗರಿಕರ ನೋಂದಣಿಗೆ ಸಂಬಂಧಿಸಿದ ಪ್ರಸ್ತಾವವನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ. ಸಾಗರೋತ್ತರ ನಾಗರಿಕ ಕಾರ್ಡ್ (ಓವರ್‌ಸೀಸ್ ಸಿಟಿಜನ್ ಆಫ್‌ ಇಂಡಿಯಾ/ಒಸಿಐ) ಹೊಂದಿರುವ ವ್ಯಕ್ತಿಯು ಮಸೂದೆಯಲ್ಲಿರುವ ಯಾವುದೇ ಅಂಶಗಳನ್ನು ಅಥವಾ ಅಸ್ತಿತ್ವದಲ್ಲಿರುವ ಕಾನೂನನ್ನು ಉಲ್ಲಂಘಿಸಿದ್ದರೆ ಆತನ ನೋಂದಣಿ ರದ್ದು ಮಾಡುವ ಬಗ್ಗೆ ಮಸೂದೆಯ ಸೆಕ್ಷನ್ 7ರ ಉಪ ವಿಭಾಗದಲ್ಲಿ (ಡಿ) ಉಲ್ಲೇಖಿಸಲಾಗಿದೆ.

ಯಾಕಾಗಿ ಈ ಮಸೂದೆ?

ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನಗೊಳಿಸುವುದಾಗಿ 2014 ಮತ್ತು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಚನ ನೀಡಿತ್ತು. ಮಸೂದೆಯನ್ನು ಅನುಷ್ಠಾನಗೊಳಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ ಎಂದು ಇತ್ತೀಚೆಗೆ ನಡೆದಿದ್ದ ಬಿಜೆಪಿ ಸಂಸದೀಯ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ‘ನೆರೆ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಕಿರುಕುಳ ಅವರು ಭಾರತದ ಆಶ್ರಯ ಕೋರುವಂತೆ ಮಾಡಿದೆ. ಆರು ಅಲ್ಪಸಂಖ್ಯಾತ ಸಮುದಾಯಗಳ ವಲಸಿಗರಿಗೆ ಆಶ್ರಯ ನೀಡುವುದು ಮೋದಿ ಸರ್ಕಾರದ ಮತ್ತೊಂದು ಪ್ರಮುಖ ಕ್ರಮ’ ಎಂದು ರಾಜನಾಥ್ ಹೇಳಿದ್ದರು.

ವಿನಾಯಿತಿಗಳು...

ಸಂವಿಧಾನದ ಆರನೇ ಪರಿಚ್ಛೇದದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ತಿದ್ದುಪಡಿ ಮಸೂದೆ ಅನ್ವಯವಾಗುವುದಿಲ್ಲ. ಅಂದರೆ, ಬುಡಕಟ್ಟು ಪ್ರಾಬಲ್ಯ ಹೊಂದಿರುವ ಸ್ವಾಯತ್ತ ಜಿಲ್ಲಾ ಮಂಡಳಿಗಳನ್ನು ಹೊಂದಿರುವ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂಗಳಿಗೆ ಅನ್ವಯವಾಗುವುದಿಲ್ಲ.ಅದೇ ರೀತಿ ಒಂದು ರಾಜ್ಯದ ನಿರ್ದಿಷ್ಟ ಪ್ರದೇಶಕ್ಕೆ ಹೊರಗಿನವರು ಪ್ರವೇಶಿಸಲು ಅನುಮತಿ ಪತ್ರ ಪಡೆದುಕೊಳ್ಳಬೇಕಾದ ‘ಇನ್ನರ್‌ ಲೈನ್ ಪರ್ಮಿಟ್‌’ ವ್ಯವಸ್ಥೆ ಇರುವ ರಾಜ್ಯಗಳಿಗೂ (ಅರುಣಾಚಲ ಪ್ರದೇಶ, ನಾಗಾಲೆಂಡ್ ಮತ್ತು ಮಿಜೋರಾಂ) ಇದು ಅನ್ವಯಿಸುವುದಿಲ್ಲ.

ಎನ್‌ಆರ್‌ಸಿ, ಪೌರತ್ವ ತಿದ್ದುಪಡಿ ಮಸೂದೆ ನಡುವಣ ವ್ಯತ್ಯಾಸ

ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಅಕ್ರಮ ವಲಸಿಗರನ್ನು ಗುರಿಯಾಗಿಸಿಕೊಂಡುಅಸ್ಸಾಂನಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಅದರ ಪ್ರಕಾರಒಬ್ಬ ವ್ಯಕ್ತಿಯು ತಾನು ಅಸ್ಸಾಂ ನಾಗರಿಕ ಎಂದು ಸಾಬೀತುಪಡಿಸಬೇಕಿತ್ತು. ಅಥವಾ ಪೂರ್ವಜರು 1971ರಮಾರ್ಚ್ 24 ಅಥವಾ ಅದಕ್ಕೂ ಮೊದಲು ಅಸ್ಸಾಂನಲ್ಲಿದ್ದಾರೆ ಎಂದು ಸಾಬೀತುಪಡಿಸಬೇಕಾಗಿತ್ತು. ಇದನ್ನು ದೇಶದಾದ್ಯಂತ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಆದರೆ ಎನ್‌ಆರ್‌ಸಿಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯಂತೆ ಧರ್ಮವನ್ನು ಪರಿಗಣಿಸಲಾಗುವುದಿಲ್ಲ.

ಪ್ರತಿಪಕ್ಷಗಳ ವಿರೋಧ ಏಕೆ?

ಪೌರತ್ವ (ತಿದ್ದುಪಡಿ) ಮಸೂದೆಯು ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖಿಸಿರುವ ಸಮಾನತೆಯ ನಿಯಮವನ್ನು ಉಲ್ಲಂಘಿಸುತ್ತದೆ ಎಂಬುದು ಪ್ರತಿಪಕ್ಷಗಳ ಆರೋಪ.ಪೌರತ್ವ ಸಾಂವಿಧಾನಿಕ ವಿಷಯ. ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಧರ್ಮದ ಆಧಾರದ ಮೇಲೆ ಪೌರತ್ವ ನೀಡಬಾರದು ಎನ್ನುವುದು ಇವರ ನಿಲುವು.ಕಾಂಗ್ರೆಸ್, ಟಿಎಂಸಿ, ಸಿಪಿಐ(ಎಂ) ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ.

ಈಶಾನ್ಯ ರಾಜ್ಯಗಳ ವಿರೋಧ ಯಾಕೆ?

1985ರ ಅಸ್ಸಾಂ ಒಪ್ಪಂದದ ಅನುಸಾರ, 1971ರ ಮಾರ್ಚ್ 24ರ ಬಳಿಕ ವಲಸೆ ಬಂದ ಯಾವುದೇ ಧರ್ಮದವರನ್ನು ಸಹ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ತಿದ್ದುಪಡಿ ಮಾಡಲಾಗಿರುವ ಮಸೂದೆ ಜಾರಿಗೆ ಬಂದರೆ, ಅಸ್ಸಾಂ ಒಪ್ಪಂದ ಅರ್ಥ ಕಳೆದುಕೊಳ್ಳಲಿದೆ ಎನ್ನುವುದು ಇವರ ವಾದ. ಮೇಘಾಲಯ ಹಾಗೂ ಮಿಜೋರಾಂ ಸರ್ಕಾರಗಳು ಸಹ ಈ ತಿದ್ದುಪಡಿ ಮಸೂದೆ ವಿರೋಧಿಸಿ ನಿರ್ಣಯ ಅಂಗೀಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT