ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದ ಕಾಯಂ ರಾಜಧಾನಿ ಯಾವುದು: ಕಾಂಗ್ರೆಸ್‌ ನಾಯಕ ರಾವತ್‌ ಪ್ರಶ್ನೆ

Last Updated 9 ಜೂನ್ 2020, 18:05 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ‘ಉತ್ತರಾಖಂಡದ ಕಾಯಂ ರಾಜಧಾನಿ ಎಲ್ಲಿದೆ ಎಂಬುದನ್ನುಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್ ತಿಳಿಸಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಆಗ್ರಹಿಸಿದ್ದಾರೆ.

ಗೈರಸೈಣ್ ಅನ್ನು ರಾಜ್ಯದ ಬೇಸಿಗೆ ಕಾಲದ ರಾಜಧಾನಿಯನ್ನಾಗಿ ಮಾಡಿ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾವತ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಪ್ರಶ್ನೆ ಮುಂದಿಟ್ಟಿದ್ದಾರೆ.

‘ಗೈರಸೈಣ್‌ ಅನ್ನು ಬೇಸಿಗೆ ಕಾಲದ ರಾಜಧಾನಿಯನ್ನಾಗಿ ಘೋಷಿಸಿ, ಅಧಿಸೂಚನೆ ಹೊರಡಿಸಿರುವುದಕ್ಕೆ ಮುಖ್ಯಮಂತ್ರಿ ಅವರನ್ನು ಅಭಿನಂದಿಸುವೆ. ಗೈರಸೈಣ್ ಬೇಸಿಗೆ ಕಾಲದ ಹಾಗೂ ಡೆಹ್ರಾಡೂನ್‌ ತಾತ್ಕಾಲಿಕ ರಾಜಧಾನಿ ಎನ್ನುವುದಾದರೆ, ರಾಜ್ಯದ ಕಾಯಂ ರಾಜಧಾನಿ ಯಾವುದು ಎಂದು ಮುಖ್ಯಮಂತ್ರಿಗಳನ್ನು ಕೇಳಬಯಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಹರೀಶ್‌ ರಾವತ್‌ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

2000ದ ನವೆಂಬರ್‌ 9ರಂದು ಉತ್ತರಪ್ರದೇಶ ವಿಭಜಿಸಿ ಉತ್ತರಾಖಂಡ ರಾಜ್ಯವನ್ನು ರಚಿಸಿದ ನಂತರ ಡೆಹ್ರಾಡೂನ್‌ ಅನ್ನು ತಾತ್ಕಾಲಿಕವಾಗಿ ರಾಜಧಾನಿಯನ್ನಾಗಿ ಘೋಷಿಸಲಾಯಿತು. ಗೈರಸೈಣ್‌ಅನ್ನು ರಾಜಧಾನಿಯನ್ನಾಗಿ ಮಾಡಬೇಕು ಎಂಬ ಬೇಡಿಕೆ ಆಗಿನಿಂದಲೂ ಇದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್‌ ಮುಖಂಡ ಧೀರೇಂದ್ರ ಪ್ರತಾಪ್‌, ‘ಸರ್ಕಾರದ ಈ ಕ್ರಮ ಕಣ್ಣೊರೆಸುವ ತಂತ್ರವಷ್ಟೇ. ಗೈರಸೈಣ್‌ ಅನ್ನು ಕಾಯಂ ರಾಜಧಾನಿಯನ್ನಾಗಿ ಮಾಡುವವರೆಗೆ ಪಕ್ಷ ಹೋರಾಟವನ್ನು ಮುಂದುವರಿಸಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT