ಮಸೂದ್‌ನನ್ನು ಬಿಟ್ಟವರಾರು?–ಪ್ರಧಾನಿಗೆ ರಾಹುಲ್‌ ಗಾಂಧಿ ಪ್ರಶ್ನೆ

ಮಂಗಳವಾರ, ಮಾರ್ಚ್ 26, 2019
32 °C

ಮಸೂದ್‌ನನ್ನು ಬಿಟ್ಟವರಾರು?–ಪ್ರಧಾನಿಗೆ ರಾಹುಲ್‌ ಗಾಂಧಿ ಪ್ರಶ್ನೆ

Published:
Updated:
Prajavani

ಹಾವೇರಿ: ಪುಲ್ವಾಮಾದಲ್ಲಿ ಯೋಧರ ಹತ್ಯೆಗೆ ಕಾರಣನಾದ ಜೈಷ್‌ ಎ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜೈಲಿನಿಂದ ಕಂದಹಾರ್‌ಗೆ ವಿಮಾನದಲ್ಲಿ ಬಿಟ್ಟು ಬಂದಿದ್ದು ಯಾರು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ತಿಳಿಸಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಗ್ರಹಿಸಿದರು.

ಹಾವೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಅಜರ್‌ನನ್ನು ಬಿಟ್ಟು ಬರಲು ಸಚಿವ ಜಸ್ವಂತ್‌ಸಿಂಗ್‌ ಅವರನ್ನು ಕಳುಹಿಸಿಕೊಟ್ಟಿರಲಿಲ್ಲವೇ? ನಿಮ್ಮ ಪಕ್ಷದ ಸರ್ಕಾರವೇ ಬಿಟ್ಟು ಬಂದಿರಲಿಲ್ಲವೇ? ಇದನ್ನೆಲ್ಲ ಏಕೆ ಜನರಿಗೆ ಹೇಳುವುದಿಲ್ಲ’ ಎಂದು ಪ್ರಶ್ನಿಸಿದರು.

‘ರಾಷ್ಟ್ರೀಯ ಭದ್ರತೆ ಸಲಹೆಗಾರರಾಗಿರುವ ಅಜಿತ್‌ ಡೊಭಾಲ್‌ ಸಹ ಇದ್ದರು. ಇದನ್ನೆಲ್ಲ ಮರೆತುಬಿಟ್ಟಿದ್ದೀರಾ?’ ಎಂದು ಕೇಳಿದ ರಾಹುಲ್‌, ಭಯೋತ್ಪಾದನೆ ಮುಂದೆ ಕಾಂಗ್ರೆಸ್‌ ಯಾವತ್ತೂ ತಲೆ ತಗ್ಗಿಸುವುದಿಲ್ಲ ಎಂದು ಹೇಳಿದರು.

‘ದೋಕಲಾ ಮೇಲೆ ಚೀನಾ ಸೇನೆ ದಾಳಿ ಮಾಡಿತ್ತು ಆದರೂ, ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸುತ್ತೀರಿ’ ಎಂದು ವಾಗ್ದಾಳಿ ನಡೆಸಿದರು.

ಚೌಕಿದಾರ್‌ ಚೋರ್ ಹೈ: ‘ದೇಶದ ಚೌಕಿದಾರ್‌ ಆಗುವುದಾಗಿ ಹೇಳಿದ್ದ ಮೋದಿ, ಈಗ ಚೋರ್‌ ಆಗಿದ್ದಾರೆ. ನೋಟು ರದ್ದತಿ ಮಾಡಿ ನಿಮ್ಮಿಂದ ಪಡೆದ ಹಣವನ್ನು ಕಳವು ಮಾಡಿ ನೀರವ್ ಮೋದಿ, ವಿಜಯ ಮಲ್ಯ, ಅನಿಲ್‌ ಅಂಬಾನಿ ಅವರಿಗೆ ನೀಡಿದ್ದಾರೆ’ ಎಂದು ಟೀಕಿಸಿದರು.

‘ಒಂದೇ ಒಂದು ವಿಮಾನ ನಿರ್ಮಿಸದ ಅನಿಲ್‌ ಅಂಬಾನಿ ಅವರೊಂದಿಗೆ ರಫೇಲ್‌ ಒಪ್ಪಂದ ಆಗಿದ್ದು ಹೇಗೆ? ಮೋದಿ ಅವರು ಅಂಬಾನಿ ಚೌಕಿದಾರ್ ಆಗಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಜಿಎಸ್‌ಟಿಯಲ್ಲಿ ಬದಲಾವಣೆ ಮಾಡಲಿದೆ. ಸರಳೀಕರಣ ಮಾಡಿ, ಕಡಿಮೆ ತೆರಿಗೆ ವಿಧಿಸಲಾಗುವುದು ಎಂದರು.

ಪ್ರಶ್ನೆಗಳ ಮೇಲೆ ಪ್ರಶ್ನೆ: ‘ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಯಾಕೆ ನೀಡಲಿಲ್ಲ? ಎಚ್‌ಎಎಲ್‌ನೊಂದಿಗೆ ರಫೇಲ್‌ ಒಪ್ಪಂದ ಮಾಡಿಕೊಳ್ಳದೇ ಯುವಕರ ಉದ್ಯೋಗಾವಕಾಶ ಕಿತ್ತುಕೊಂಡಿದ್ದು ಏಕೆ? ಕಪ್ಪು ಹಣ ಎಲ್ಲಿದೆ ಎಂಬ ಪ್ರಶ್ನೆಗಳಿಗೆ ಜನರಿಗೆ ಉತ್ತರಿಸಿ’ ಎಂದರು.

ದೇಶ ಎರಡಾಗಲು ಬಿಡಲ್ಲ

ಹಾವೇರಿ: ‘ಪ್ರಧಾನಿ ಮೋದಿ, ಎರಡು ಭಾರತ (ಹಿಂದೂಸ್ತಾನ) ಮಾಡಲು ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್‌ ಹಾಗೆ ಮಾಡಲು ಬಿಡುವುದಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

‘ಅನಿಲ್ ಅಂಬಾನಿ, ಮೆಹುಲ್‌ ಚೋಕ್ಸಿ ಅಂಥವರಿಗಾಗಿ ಒಂದು ಭಾರತ. ಅಲ್ಲಿರುವ ನೀರವ್ ಮೋದಿ, ಲಲಿತ್‌ ಮೋದಿ ಅಂಥವರು ₹ 36,000 ಕೋಟಿಯೊಂದಿಗೆ ದೇಶ ಬಿಟ್ಟು ಓಡಿ ಹೋಗುತ್ತಾರೆ. ವಿಜಯ್‌ ಮಲ್ಯ ಅವರು ಅರುಣ್‌ ಜೆಟ್ಲಿಗೆ ಭೇಟಿಯಾಗಿಯೇ ವಿದೇಶಕ್ಕೆ ಹೋಗುತ್ತಾರೆ; ಇನ್ನೊಂದು ಭಾರತದಲ್ಲಿ ಬಡವರು, ಕೂಲಿ ಕಾರ್ಮಿಕರು, ರೈತರಿದ್ದಾರೆ. ಅವರಿಗೆ ಅನ್ಯಾಯ ಆಗುತ್ತಿದ್ದರೂ ಕೇಳುವವರು ಯಾರೂ ಇಲ್ಲ’ ಎಂದರು.

‘ಮೋದಿ ಅವರೇ ನೀವು ಕಳ್ಳರಿಗೆ ಸಹಾಯ ಮಾಡಿ. ನಾವು ಬಡವರಿಗೆ ಸಹಾಯ ಮಾಡುತ್ತೇವೆ’ ಎಂದು ಟಾಂಗ್‌ ನೀಡಿದರು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 2

  Frustrated
 • 11

  Angry

Comments:

0 comments

Write the first review for this !