ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಭಾರತ ಸರ್ಕಾರದ ಪ್ರಯತ್ನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ

Last Updated 19 ಮಾರ್ಚ್ 2020, 7:24 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಪಿಡುಗು ಕೋವಿಡ್-19 ಆಘಾತಕ್ಕೆ ಭಾರತವು ಸ್ಪಂದಿಸಿ, ನೊವೆಲ್ ಕೊರೊನಾ ವೈರಸ್ 2 ತಡೆಗೆ ಸರ್ಕಾರವು ತೋರಿದ ಬದ್ಧಯೆನ್ನು ವಿಶ್ವ ಆರೋಗ್ಯ ಸಂಸ್ಥೆಯು ಶ್ಲಾಘಿಸಿದೆ.

ನವದೆಹಲಿಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತೀಯ ಪ್ರತಿನಿಧಿ ಹೆಂಕ್ ಬೆಕೆಡಮ್ ಅವರು, ಕೊರೊನಾ ವೈರಸ್ ಸೋಂಕು ಹರಡುವ ವಿರುದ್ಧ ಹೋರಾಡಲು ಸ್ವತಃ ಪ್ರಧಾನಮಂತ್ರಿಗಳ ಕಚೇರಿಯೂ ಸೇರಿದಂತೆ ಭಾರತ ಸರ್ಕಾರವು ತೋರಿದ ಬದ್ಧತೆಗೆ ಶಹಭಾಸ್ ಹೇಳಿದ್ದಾರೆ.

ಸಾರ್ಸ್ ಕೊರೊನಾ ವೈರಸ್ 2 ಬಾಧಿತರನ್ನು ಪ್ರತ್ಯೇಕೀಕರಿಸುವಲ್ಲಿ ಭಾರತದ ಸಂಶೋಧನೆಗಳ ಪರಮೋಚ್ಚ ಸಂಸ್ಥೆಯು ಅತ್ಯುತ್ತಮವಾಗಿ ಕೆಲಸ ನಿಭಾಯಿಸುತ್ತಿದೆ. ಉನ್ನತ ಮಟ್ಟದಲ್ಲಿ ಕೂಡ, ಸ್ವತಃ ಪ್ರಧಾನಿಯವರ ಕಚೇರಿಯೂ ಅದ್ಭುತವಾದ ಮತ್ತು ಪರಿಣಾಮಕಾರಿ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಕೋವಿಡ್-19 ಹರಡುವಿಕೆ ನಿಯಂತ್ರಣದಲ್ಲಿ ಭಾರತವು ಸಾಕಷ್ಟು ಯಶಸ್ಸು ಸಾಧಿಸಿದೆ. ಎಲ್ಲರನ್ನೂ ಜೊತೆಯಾಗಿಸಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ನನ್ನ ಮೇಲೆ ಪ್ರಭಾವ ಬೀರಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಮತ್ತು ವಿಶೇಷವಾಗಿ ICMR ನಲ್ಲಿ ಹಾಗೂ ಆರೋಗ್ಯ ಸಂಶೋಧನಾ ಇಲಾಖೆಯ ಬಳಿ ಅತ್ಯುತ್ತಮ ಸಂಶೋಧನಾ ಸಾಮರ್ಥ್ಯವಿದೆ. ವೈರಸ್ ಪ್ರತ್ಯೇಕೀಕರಿಸಲು ಸಾಧ್ಯವೂ ಆಗಿದೆ ಮತ್ತು ಭಾರತವೀಗ ಜಾಗತಿಕ ಸಂಶೋಧನಾ ಸಮುದಾಯದ ಭಾಗವಾಗಿ ಮುಂದುವರಿಯುತ್ತಿದೆ ಎಂದು ಬೆಕೆಡಮ್ ಹೇಳಿದ್ದಾರೆ.

ಕಳೆದ ವಾರ, ಕೊರೊನಾ ವೈರಸ್‌ನ ಹೊಸ ತಳಿಯನ್ನು ಪ್ರತ್ಯೇಕೀಕರಿಸುವಲ್ಲಿ ಯಶಸ್ವಿಯಾಗಿರುವುದಾಗಿ ಐಸಿಎಆರ್ ಘೋಷಿಸಿತ್ತು. ಇದು ಕೋವಿಡ್-19 ಕಾಯಿಲೆಗೆ ಔಷಧಿ ಹಾಗೂ ಲಸಿಕೆ ತಯಾರಿಕೆಯ ಪ್ರಯತ್ನಗಳಲ್ಲಿ ಮಹತ್ವದ ಘಟ್ಟವಾಗಿದೆ.

ಭಾರತದಲ್ಲಿ ಗುರುವಾರದ ಪೂರ್ವಾಹ್ನದವರೆಗೆ 170 ಮಂದಿ ಕೊರೊನಾ ವೈರಸ್ ಸೋಂಕು ಪೀಡಿತರಿದ್ದು, 3 ಸಾವು ಸಂಭವಿಸಿದೆ.

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್, ಜಾಗತಿಕವಾಗಿ ಸುಮಾರು 2 ಲಕ್ಷ ಮಂದಿಗೆ ಬಾಧಿಸಿದ್ದು, 7 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT