ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜಿಕಲ್ ದಾಳಿಗೆ ಈ ಬಾರಿ ವಾಯುಪಡೆಯನ್ನೇ ನೆಚ್ಚಿಕೊಂಡಿದ್ದು ಏಕೆ?

Last Updated 27 ಫೆಬ್ರುವರಿ 2019, 10:37 IST
ಅಕ್ಷರ ಗಾತ್ರ

ನವದೆಹಲಿ: ಕ್ಲಿಷ್ಟ ಕಾರ್ಯಾಚರಣೆಗಳನ್ನು ನಡೆಸಬೇಕಾದ ಸವಾಲು ಎದುರಾದಾಗಲೆಲ್ಲಾಭೂಸೇನೆ ಯಾವಾಗಲೂನಮ್ಮ ಆಡಳಿತಗಾರರ ನೆಚ್ಚಿನ ಆಯ್ಕೆ ಆಗಿರುತ್ತಿತ್ತು. ಕಠಿಣ ತರಬೇತಿ, ವೈವಿಧ್ಯಮಯ ಅನುಭವಮತ್ತು ವೃತ್ತಿಪರತೆಯಿಂದಾಗಿ ಭಾರತೀಯ ಸೇನೆಗೆಜಾಗತಿಕಮಟ್ಟದಲ್ಲಿ ಉತ್ತಮ ಹೆಸರು ಇದೆ.ಕಳೆದ ಬಾರಿಯ ಸರ್ಜಿಕಲ್ ಸ್ಟ್ರೈಕ್‌ಗೆ ಸಹ ಭೂಸೇನೆಯೇ ಬಳಕೆಯಾದ ಸಂಗತಿ ನಿಮಗೆ ನೆನಪಿರಬಹುದು. ಆದರೆ ಈ ಬಾರಿ ರಣಪಂಡಿತರು ಭೂಸೇನೆ ಮತ್ತು ನೌಕಾಪಡೆಗಳು ಮುಂದಿಟ್ಟ ಪ್ರಸ್ತಾವಗಳನ್ನು ಬದಿಗೆ ಸರಿಸಿ, ವಾಯುಪಡೆಯ ಪ್ರಸ್ತಾವವದತ್ತ ಒಲವು ತೋರಿದ್ದೇಕೆ?ಈ ನಿರ್ಧಾರಕ್ಕೆ ಕಾರಣವೇನಿರಬಹುದು?

‘ದಿ ಪ್ರಿಂಟ್’ ಜಾಲತಾಣದಲ್ಲಿ ಪ್ರಕಟವಾಗಿರುವ ಲೇಖನ ಈ ಪ್ರಶ್ನೆಗಳಿಗೆ ಉತ್ತರ ನೀಡಿದೆ.

‘ಫೆ.14ರಂದು ಪುಲ್ವಾಮಾದಲ್ಲಿ ನಡೆದ ಘೋರ ದಾಳಿಗೆ ನಾವು ಉತ್ತರ ಕೊಡಲೇಬೇಕು, ಇನ್ನು ಸುಮ್ಮನಿರಬಾರದು’ ಎನ್ನುವ ಭಾವನೆ ದೇಶದಲ್ಲಿ ಮೂಡಿತ್ತು. ಸಶಸ್ತ್ರಪಡೆಗಳ ಉನ್ನತ ನಾಯಕತ್ವ ಇದಕ್ಕಾಗಿ ಪ್ರತ್ಯೇಕ ಪ್ರಸ್ತಾವಗಳನ್ನು ಸಿದ್ಧಪಡಿಸಿದವು.ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಹಿರಿಯ ಕಮಾಂಡರ್‌ಗಳು ಮೂರು ಸಶಸ್ತ್ರ ಪಡೆಗಳ ಪೈಕಿ ಯಾವುದಾದರೂ ಒಂದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದದಾಳಿ ನಡೆಸುವ ಸಾಧ್ಯತೆ ಮತ್ತುಪರಿಣಾಮ ಕುರಿತ ಪ್ರಸ್ತಾವಗಳನ್ನು ರಕ್ಷಣಾ ಇಲಾಖೆಯ ಮುಂದಿಟ್ಟರು. ಫೆ.15ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ರಕ್ಷಣಾ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಈ ಪ್ರಸ್ತಾವಗಳನ್ನು ಪರಿಶೀಲಿಸಬಹುದು ಎಂಬುದು ಅವರ ನಿರೀಕ್ಷೆಯಾಗಿತ್ತು.

ಪಾಕಿಸ್ತಾನವನ್ನು ವಿಶ್ವದಲ್ಲಿ ಏಕಾಂಗಿಯಾಗಿಸುವ ಕುರಿತು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಸುದೀರ್ಘ ಚರ್ಚೆ ಸಂಪುಟ ಸಮಿತಿ ಸಭೆಯಲ್ಲಿ ನಡೆಯಿತು.ಸಭೆ ಮುಗಿಯುವಾಗ ಶಸ್ತ್ರ ಬಳಸಿ ಪಾಕಿಸ್ತಾನವನ್ನು ಶಿಕ್ಷಿಸಬೇಕು ಎನ್ನುವ ಅಭಿಪ್ರಾಯಕ್ಕೆ ಒಮ್ಮತ ಸಿಕ್ಕಿತ್ತು.

‘ಕಮಾಂಡರ್‌ಗಳು ಈ ಹಿಂದೆ ಸಲ್ಲಿಸಿದ್ದ ಪ್ರಸ್ತಾವಗಳನ್ನು ಮುಂದಿಟ್ಟುಕೊಂಡ ರಕ್ಷಣಾ ಇಲಾಖೆ ಮತ್ತು ಪ್ರಧಾನಿ ಕಚೇರಿಯ ಹಿರಿಯ ಅಧಿಕಾರಿಗಳು ಚಿಂತನಮಂಥನ ನಡೆಸಿ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದರು. ವಾಯುಪಡೆಯ ಪ್ರಸ್ತಾವವೇ ಕಾರ್ಯಸಾಧು ಎಂದು ಅನ್ನಿಸಿದ್ದರಿಂದ ವೈಮಾನಿಕ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿಸಿದರು’ ಎಂದು ‘ದಿ ಪ್ರಿಂಟ್’ ಜಾಲತಾಣ ವರದಿ ಮಾಡಿದೆ.

ಭೂಸೇನೆ ಬಳಕೆಯಾಗಲಿಲ್ಲ ಏಕೆ

2016ರಲ್ಲಿ ಭೂಸೇನೆಯ ವಿಶೇಷ ಕಾರ್ಯಪಡೆ ಸದ್ದಿಲ್ಲದೆ ಪಾಕ್ ನೆಲಕ್ಕೆ ನುಗ್ಗಿ ಉಗ್ರರನ್ನು ಹೊಡೆದುರುಳಿಸಿದ್ದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಪಾಕ್ಸೇನೆಗೆ ಅಚ್ಚರಿಯುಂಟು ಮಾಡಿತ್ತು. ಸರ್ಜಿಕಲ್ ಸ್ಟ್ರೈಕ್ ಯಶಸ್ಸಿಗೆಅಚ್ಚರಿಯ ಅಂಶವೂ ದೊಡ್ಡಮಟ್ಟದ ಕೊಡುಗೆಯನ್ನು ನೀಡಿತ್ತು.ಇದರಿಂದ ಪಾಠ ಕಲಿತಿದ್ದ ಪಾಕ್ ಸೇನೆ ಈ ಬಾರಿ ಎಚ್ಚೆತ್ತುಕೊಂಡಿತ್ತು.ಪುಲ್ವಾಮಾ ದಾಳಿಯ ನಂತರ ಸರ್ಜಿಕಲ್ ಸ್ಟ್ರೈಕ್‌ನಂಥಮತ್ತೊಂದು ದಾಳಿಯನ್ನು ನಿರೀಕ್ಷಿಸಿ, ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ಪಾಕ್ ಸೇನೆ ಕಟ್ಟೆಚ್ಚರ ವಹಿಸಿದ್ದರಿಂದ ಭಾರತೀಯ ಸೇನೆಗೆ ‘ಅಚ್ಚರಿಯ ದಾಳಿ’ ನಡೆಸುವ ಮತ್ತೊಂದು ಅವಕಾಶ ಸಿಗುವುದು ಕಠಿಣ ಎನಿಸಿತ್ತು.

ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದ ನಂತರ ಪಾಕ್ ಸೇನೆಯು ತನ್ನ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಿತು. ಸೇನಾ ಸಂಘಟನೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ,ಸಜ್ಜುಗೊಳಿಸಿ ಪೂರ್ವದಗಡಿಗೆ (ಭಾರತ ಗಡಿ)ರವಾನಿಸಿತು. ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟೀಯ ಗಡಿಯುದ್ದಕ್ಕೂ ಭದ್ರತೆಗೆ ನಿಯೋಜನೆಗೊಂಡಿದ್ದ ಪ್ಯಾರಾ ಮಿಲಿಟರಿ ಪಡೆ ‘ಪಾಕಿಸ್ತಾನ್ ರೇಂಜರ್ಸ್‌’ ತುಕಡಿಗಳನ್ನು ತೆರವುಗೊಳಿಸಿ,ಸೈನಿಕರನ್ನೇ ಪಹರೆಗೆ ನಿಯೋಜಿಸಿತು.

ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗಬಹುದು ಎಂಬ ಭೀತಿಯಿಂದ ಗಡಿ ರೇಖೆಯಗುಂಟ ಇದ್ದಉಗ್ರಗಾಮಿ ತರಬೇತಿ ಶಿಬಿರಗಳನ್ನು ಆಂತರಿಕ ವಲಯಕ್ಕೆ ಸ್ಥಳಾಂತರಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ಕಾಶ್ಮೀರದಲ್ಲಿರುವ ಪ್ರತಿಕೂಲ ಹವಾಮಾನ, ಹಿಮಪಾತವು ಈ ಬಾರಿಚುರುಕು ಕಾರ್ಯಾಚರಣೆಗೆ ಭೂಸೇನೆಯನ್ನು ಬಳಸುವ ಅವಕಾಶಕ್ಕೆ ಇದ್ದ ದೊಡ್ಡತೊಡಕಾಗಿ ಪರಿಣಮಿಸಿತ್ತು. ಕಾಲ್ನಡಿಗೆಯಲ್ಲಿ ಸೇನೆಯ ಸಂಚಾರ ಕಷ್ಟ ಎನಿಸುವ ವಾತಾವರಣ ಇತ್ತು.

ನೌಕಾ ಸಂಚಾರ ನಿರ್ಬಂಧಕ್ಕೆ ಹಿಂದೇಟು

ಪಾಕಿಸ್ತಾನದ ವಾಣಿಜ್ಯ ರಾಜಧಾನಿ, ಆರ್ಥಿಕ ನರಮಂಡಲ ಎನಿಸಿರುವ ಬಂದರು ನಗರ ಕರಾಚಿಗೆ ನೌಕಾ ನಿರ್ಬಂಧ ಹೇರುವ ಪ್ರಸ್ತಾವವನ್ನು ನೌಕಾಪಡೆ ಮುಂದಿಟ್ಟಿತ್ತು. 1971ರಲ್ಲಿ ನೌಕಾಪಡೆ ಕರಾಚಿ, ಚಿತ್ತಗಾಂಗ್ ಮತ್ತು ಢಾಕಾ ಬಂದರುಗಳನ್ನು ನಿರ್ಬಂಧಿಸಿದ್ದ ವಿಚಾರ ನಿಮಗೆ ನೆನಪಿರಬಹುದು.

ಆದರೆ ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಲು ಹಲವು ತೊಡಕುಗಳಿದ್ದವು.ಕರಾಚಿ ಬಂದರು ಪಾಕಿಸ್ತಾನಕ್ಕೆ ಸೇರಿದ್ದರೂ ಅಲ್ಲಿಗೆ ಹಲವು ದೇಶಗಳ ವಾಣಿಜ್ಯ ಹಡಗುಗಳು ಬಂದು ಹೋಗುತ್ತವೆ. ಬಂದರಿಗೆ ನಿರ್ಬಂಧ ವಿಧಿಸಿದರೆ ಮಿತ್ರರಾಷ್ಟ್ರಗಳ ನೌಕೆಗಳ ಸಂಚಾರಕ್ಕೂ ತೊಂದರೆಯಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಗ್ಗೆ ಪ್ರತಿಕೂಲ ಅಭಿಪ್ರಾಯ ರೂಪುಗೊಳ್ಳುವ ಮತ್ತು ಬಂದರಿಗೆ ಹಾಕುವ ನಿರ್ಬಂಧವನ್ನೇ ಪಾಕಿಸ್ತಾನವು ವಿಶ್ವಮಟ್ಟದಲ್ಲಿ ‘ಭಾರತ ತನ್ನ ವಿರುದ್ಧ ಯುದ್ಧ ಸಾರಿದೆ’ ಎಂದು ಬಿಂಬಿಸುವ ಅಪಾಯವಿತ್ತು.

ವಾಯುದಾಳಿಗೆ ಸಮ್ಮತಿಸಲು ಕಾರಣವೇನು

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿ ತರಬೇತಿ ಶಿಬಿರಗಳನ್ನು ಗುರಿಯಾಗಿಸಿನಿರ್ದಿಷ್ಟದಾಳಿ ನಡೆಸಲು ವಾಯುಪಡೆ ಸಮರ್ಥವಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ಬಿ.ಎಸ್.ಧನೋವಾ ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟರು.1971ರ ಯುದ್ಧದ ನಂತರ ಭಾರತೀಯ ವಾಯುಪಡೆ ಅಂತರರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿಲ್ಲ. ಆದರೆ ಪಾಕಿಸ್ತಾನದ ಸಾಮರ್ಥ್ಯವನ್ನು ಗಮನದಲ್ಲಿರಿಸಿಕೊಂಡು ಸಾಕಷ್ಟು ತಂತ್ರಗಳನ್ನು ಹೆಣೆದಿತ್ತು. ಈ ಎಲ್ಲ ಅಂಶಗಳನ್ನೂ ಧನೋವಾ ವಿವರಿಸಿದರು.

‘ಸುದೀರ್ಘ ಚರ್ಚೆಯ ನಂತರ ವಾಯುದಾಳಿಯ ವಿಚಾರದಲ್ಲಿ ಸಮ್ಮತಿ ಮೂಡಿತು.ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಗಳಿಗೆ (National Technical Research Organisation) ವಾಯುಪಡೆ ದಾಳಿಗೆ ಗುರಿ ಹುಡುಕಿಕೊಡುವ ಜವಾಬ್ದಾರಿವಹಿಸಲಾಯಿತು’ ಎಂದು ‘ದಿ ಪ್ರಿಂಟ್’ ಲೇಖನ ಹೇಳುತ್ತದೆ.

ನಂತರ ಏನು ನಡೆಯಿತು ಎನ್ನುವುದು ಇದೀಗ ಇತಿಹಾಸ.

ಇನ್ನಷ್ಟು ಓದು
*ಭಾರತದ ಉರಿ ವಲಯದ ಮೇಲೆ ಪಾಕಿಸ್ತಾನದ ಶೆಲ್‌ ದಾಳಿ ​
*ಗಡಿದಾಟಿದ ಪಾಕ್‌ ಯುದ್ಧ ವಿಮಾನಗಳು; ಭಾರತದ ಸೇನಾ ವಲಯದ ಮೇಲೆ ಬಾಂಬ್‌ ದಾಳಿ
*ಜಮ್ಮು–ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್‌ ವಿಮಾನ ಪತನ; ಇಬ್ಬರು ಪೈಲಟ್‌ ಸಾವು
*ಶ್ರೀನಗರ ಸೇರಿ ಐದು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ
*ಬಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿದ ಭಾರತ
*ವೈಮಾನಿಕ ದಾಳಿಯಲ್ಲಿ ಹತರಾಗಿದ್ದು 200 ಉಗ್ರರು!
*ಪಾಕ್‍ ವಿರುದ್ಧ ವೈಮಾನಿಕ ದಾಳಿ ನಡೆಸಿದ ಐಎಎಫ್‍ಗೆ ಟ್ವೀಟ್ ಪ್ರಶಂಸೆ
*ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ: ಸೀಬರ್ಡ್ ನೌಕಾನೆಲೆಯಲ್ಲಿ ಭದ್ರತೆ ಹೆಚ್ಚಳ
*ಇಂದಿನ ದಾಳಿ ನವ ಭಾರತದ ಸಂಕಲ್ಪದ ಮುನ್ನುಡಿ: ಅಮಿತ್‌ ಶಾ
*ಪಾಕಿಸ್ತಾನ ಇನ್ನಾದರೂ ತೆಪ್ಪಗಿರಲಿ: ಪ್ರಹ್ಲಾದ ಜೋಶಿ
*ಮೋದಿ ನುಡಿದಂತೆ ನಡೆದಿದ್ದಾರೆ; ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ -ಸದಾನಂದ ಗೌಡ
*ಉಗ್ರರ ಶಿಬಿರಗಳನ್ನೇ ಗುರಿಯಾಗಿರಿಸಿ ಕಾರ್ಯಾಚರಣೆ ಮಾಡಲಾಗಿದೆ: ವಿಜಯ್ ಗೋಖಲೆ
*ಪುಲ್ವಾಮಾ ದಾಳಿಗೆ ಪ್ರತೀಕಾರ: ಉಗ್ರರ ವಿರುದ್ಧ ಭಾರತ ‘ಯುದ್ಧ’
*ನಮ್ಮ ಸರ್ಕಾರ ಬಳಸುತ್ತಿರುವ ‘ನಾನ್–ಮಿಲಿಟರಿ ಆಕ್ಷನ್’ ಪದಗಳ ಅರ್ಥವೇನು
*ಸಾರ್ವತ್ರಿಕ ಚುನಾವಣೆ ಗಮನದಲ್ಲಿರಿಸಿ ವಾಯುದಾಳಿ ನಡೆಸಿದ ಭಾರತ: ಪಾಕಿಸ್ತಾನ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT