ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | 'ಮಹಿಳೆ ಕಮಾಂಡರ್' ಸೇನೆಯಲ್ಲಿ ಉನ್ನತ ಹುದ್ದೆಯ ಕನಸಿಗೆ ಗರಿ

Last Updated 17 ಫೆಬ್ರುವರಿ 2020, 20:30 IST
ಅಕ್ಷರ ಗಾತ್ರ
ADVERTISEMENT
""
""

ಮಹಿಳೆಯರನ್ನು ಸೇನೆಯಲ್ಲಿ ಕಮಾಂಡರ್‌ ಮುಂತಾಗಿ ಶಾಶ್ವತ ಸೇವೆಯ ಹುದ್ದೆಗಳಿಗೂ ನೇಮಕ ಮಾಡಬೇಕು ಎಂದು 2010ರಲ್ಲಿ ದೆಹಲಿ ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಸಿದ್ಧವಿರಲಿಲ್ಲ. ಇಂಥ ಜವಾಬ್ದಾರಿಯನ್ನು ಮಹಿಳೆಯರಿಗೆ ನೀಡಲಾಗದು ಎಂದು ವಾದಿಸಿ, ಸರ್ಕಾರವು ದೆಹಲಿ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು.

ಮಹಿಳೆಯರಿಗೆ ಸ್ಥಾನ ನಿರಾಕರಿಸಲು ಸರ್ಕಾರ ನೀಡಿದ ಕಾರಣಗಳೆಂದರೆ.

* ಕಮಾಂಡರ್‌ ಹುದ್ದೆಗಳಿಗೆ ಮಹಿಳೆಯರು ಸೂಕ್ತರಲ್ಲ. ಯಾಕೆಂದರೆ, ಸೇನೆಯ ಪ್ರಮುಖ ಹುದ್ದೆಗಳಲ್ಲಿ ಪುರುಷರೇ ಇರುತ್ತಾರೆ. ಸೈನಿಕರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದ ಹಿನ್ನೆಲೆಯವರಾಗಿರುತ್ತಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಹಿನ್ನೆಲೆಯಲ್ಲಿಟ್ಟು ನೋಡಿದರೆ, ಮಹಿಳಾ ಅಧಿಕಾರಿಯ ಆದೇಶವನ್ನು ಪಾಲಿಸುವ ರೀತಿಯಲ್ಲಿ ಸೇನಾ ಪಡೆಗಳು ಇನ್ನೂ ಮಾನಸಿಕವಾಗಿ ಸಿದ್ಧವಾಗಿಲ್ಲ

*ಮಹಿಳೆ ಮತ್ತು ಪುರುಷರ ದೈಹಿಕ ಸ್ಥಿತಿಯು ವಿಭಿನ್ನವಾಗಿದೆ. ಆದ್ದರಿಂದ ಮಹಿಳೆ ಮತ್ತು ಪುರುಷ ಅಧಿಕಾರಿಯನ್ನು ಸಮಾನವಾಗಿ ಪರಿಗಣಿಸಲು ಸಾಧ್ಯವಾಗದು. ಮಹಿಳೆಗೆ ಕೌಟುಂಬಿಕವಾಗಿಯೂ ಹೆಚ್ಚಿನ ಜವಾಬ್ದಾರಿಗಳು ಇರುತ್ತವೆ

*ಶತ್ರು ಸೇನೆಯು ಸೈನಿಕರನ್ನು ಯುದ್ಧಕೈದಿಗಳನ್ನಾಗಿ ತಮ್ಮ ಬಳಿ ಇಟ್ಟುಕೊಳ್ಳುವ ಅಪಾಯ ಇರುತ್ತವೆ. ಇಂಥ ಸಂದರ್ಭಗಳಲ್ಲಿ ಮಹಿಳೆಯರಿಗೆ ಅಪಾಯಗಳು ಹೆಚ್ಚು. ಮಹಿಳೆಯನ್ನು ಯುದ್ಧ ಕೈದಿಯನ್ನಾಗಿಸಿದರೆ ಸೇನೆ ಮತ್ತು ಸರ್ಕಾರದ ಮೇಲೆ ವಿಪರೀತ ಮಾನಸಿಕ ಒತ್ತಡ ಬೀಳುತ್ತದೆ. ಮಹಿಳೆಯರನ್ನು ಯುದ್ಧಭೂಮಿಯಿಂದ ದೂರವಿಟ್ಟರೆ ಇಂಥ ಅಪಾಯವನ್ನು ತಪ್ಪಿಸಬಹುದು

*ಸಶಸ್ತ್ರ ಸೇನೆಯಲ್ಲಿರುವವರು ತ್ಯಾಗಕ್ಕೆ ಸಿದ್ಧರಾಗಿರಬೇಕು, ಅಷ್ಟೇ ಅಲ್ಲ ಸೇನೆಯು ಅವರಿಂದ ಗರಿಷ್ಠ ಬದ್ಧತೆಯನ್ನು ನಿರೀಕ್ಷಿಸುತ್ತದೆ. ಕುಟುಂಬದಿಂದ ದೂರವಾಗಿರುವುದು, ಆಗಾಗ ವರ್ಗಾವಣೆಗಳಾಗುವುದರಿಂದ ಮಕ್ಕಳ ಶಿಕ್ಷಣ ಮತ್ತು ಬಾಳ ಸಂಗಾತಿಯ ಭವಿಷ್ಯದ ಮೇಲೂ ಪರಿಣಾಮಗಳಾಗಬಹುದು

*ಕೌಟುಂಬಿಕ ಜವಾಬ್ದಾರಿಗಳು, ತಾಯ್ತನದ ಸಂದರ್ಭದಲ್ಲಿ ಸುದೀರ್ಘ ರಜೆ ಮುಂತಾದ ಕಾರಣಗಳಿಂದ ಸೇನೆಯ ಅಗತ್ಯಗಳಿಗೆ ತಕ್ಕಂತೆ ಹೊಂದಿಕೊಳ್ಳಲು ಮಹಿಳೆಗೆ ಕಷ್ಟವಾಗಬಹುದು. ಪತಿ–ಪತ್ನಿ ಇಬ್ಬರೂ ಸೇನೆಯಲ್ಲಿ ಅಧಿಕಾರಿಗಳಾಗಿದ್ದರೆ ಕಷ್ಟಗಳು ಇನ್ನೂ ಹೆಚ್ಚು

*ಯುದ್ಧದ ಸ್ವರೂಪ ಈಗ ಬದಲಾಗಿದೆ. ಭವಿಷ್ಯದ ಯುದ್ಧಗಳು ಸಂಕ್ಷಿಪ್ತ, ತೀವ್ರ ಮತ್ತು ಮಾರಕ ಸ್ವರೂಪದ್ದಾಗಿರುತ್ತವೆ. ಪುರುಷ ಪ್ರಧಾನವಾಗಿದ್ದ ಸೇನಾ ವ್ಯವಸ್ಥೆಯಲ್ಲಿ ಮಹಿಳೆಗೆ ಸಮಾನ ಸ್ಥಾನ ನೀಡುವ ವಿಚಾರವನ್ನು ಬದಲಾದ ಯುದ್ಧ ಸ್ವರೂಪವನ್ನು ಹಿನ್ನೆಲೆಯಾಗಿಟ್ಟುಕೊಂಡೇ ನೋಡಬೇಕಾಗಿದೆ

ಮಹಿಳಾ ಪರ ವಾದವೇನು?

*ವಿಷಮ ಪರಿಸ್ಥಿತಿಯಲ್ಲಿ ಮಹಿಳೆಯರು ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ ನಿದರ್ಶನಗಳು ಸಾಕಷ್ಟು ಇವೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸುವಾಗ ಅವರಿಗೆ ಫ್ಲೈಟ್‌ ಕಂಟ್ರೋಲರ್‌ ಆಗಿ ಮಾರ್ಗದರ್ಶನ ನೀಡಿದ್ದು ಮಿಂಟಿ ಅಗರ್ವಾಲ್‌ ಎಂಬ ಮಹಿಳೆ. ಆಕೆಗೆ ಯುದ್ಧಸೇವಾ ಮೆಡಲ್‌ಅನ್ನೂ ನೀಡಲಾಗಿದೆ ಕಾಬೂಲ್‌ನಲ್ಲಿ ಭಾರತದ ದೂತಾವಾಸದ ಮೇಲೆ ಉಗ್ರರು ದಾಳಿ ನಡೆಸಿದಾಗ ಮಿತಾಲಿ ಮಧುಮಿತಾ ಎಂಬ ಅಧಿಕಾರಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದರು. ಆಕೆಗೆ ಸೇನಾ ಮೆಡಲ್‌ ನೀಡಲಾಗಿತ್ತು

*ನೇಮಕಾತಿ ಪ್ರಕ್ರಿಯೆಗೆ ಚಾಲನೆ

ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಸೇನೆಯು ಇದೇ ಮೊದಲಬಾರಿಗೆ ಮಿಲಿಟರಿ ಪೊಲೀಸ್‌ ದಳಕ್ಕೆ (ಜವಾನ್‌ ಹುದ್ದೆಗೆ) ಮಹಿಳೆಯರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇತ್ತೀಚೆಗಷ್ಟೇ ಈ ಬಗ್ಗೆ ಪತ್ರಿಕಾ ಜಾಹೀರಾತು ನೀಡಿರುವ ಸೇನೆಯು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ಮಹಿಳೆಯರನ್ನು ಈ ಹುದ್ದೆಗಳಿಗೆ ಹಂತಹಂತವಾಗಿ ನೇಮಕ ಮಾಡಲಾಗುವುದು. ಒಟ್ಟಾರೆ ಮಿಲಿಟರಿ ಪೊಲೀಸ್‌ ದಳದ ಶೇ 20ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಲು ಸೇನೆ ಉದ್ದೇಶಿಸಿದೆ. ಕ್ರಿಮಿನಲ್‌ ಅಪರಾಧ ಪ್ರಕರಣಗಳ ತನಿಖೆ ನಡೆಸುವುದರಿಂದ ಆರಂಭಿಸಿ ಕ್ಷೇತ್ರ ಕಾರ್ಯಾಚರಣೆಯಲ್ಲಿ ಸೇನೆಗೆ ನೆರವಾಗುವಲ್ಲಿಯವರೆಗೆ ಈ ಮಹಿಳೆಯರಿಗೆ ಹಲವು ಜವಾಬ್ದಾರಿಗಳು ಇರುತ್ತವೆ. ಮೊದಲ ಹಂತದಲ್ಲಿ 800 ಮಹಿಳೆಯರನ್ನು, ಆ ನಂತದ ಪ್ರತಿ ವರ್ಷವೂ ಕನಿಷ್ಠ 52 ಮಹಿಳೆಯರನ್ನು ಈ ದಳಕ್ಕೆ ನೇಮಕ ಮಾಡಲು ಸೇನೆ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಜೂನ್‌ 8 ಕೊನೆಯ ದಿನವಾಗಿದೆ.

ಸೈನಿಕನಾಗಿ ಸೇನೆಯಲ್ಲಿ ಕಾರ್ಯನಿರ್ವಹಿಸಲು ಮಹಿಳೆಗೆ ಅವಕಾಶ ನೀಡುವ ಪ್ರಸ್ತಾಪವನ್ನು 2015ರಲ್ಲಿ ಅಂದಿನ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್‌ ಮಾಡಿದ್ದರು. ‘ಸೇನೆಯ ಮೂರೂ ವಿಭಾಗಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ಉದ್ದೇಶದಿಂದ ಮಿಲಿಟರಿ ಪೊಲೀಸ್‌ ದಳದಲ್ಲಿ ಮಹಿಳೆಯರ ನೇಮಕ ಮಾಡಲಾಗುವುದು’ ಎಂದು ಅವರು ಘೋಷಿಸಿದ್ದರು.

ತೀರ್ಪಿನ ಪರಿಣಾಮಗಳು ಏನು?
*ಯುದ್ಧ ಪಾತ್ರಗಳಲ್ಲಿ ಮಹಿಳೆಯರ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹೀಗಾಗಿ ಅವರು ಪದಾತಿದಳ, ಫಿರಂಗಿ ಮತ್ತು ಶಸ್ತ್ರಸಜ್ಜಿತ ಪಡೆಗಳ ಭಾಗವಾಗಲು ಸಾಧ್ಯವಿಲ್ಲ

*ಮಹಿಳಾ ಕರ್ನಲ್‌ ಇನ್ನುಮುಂದೆ 850 ಪುರುಷ ಸೈನಿಕರನ್ನು ಹೊಂದಿದ ಬೆಟಾಲಿಯನ್ನಿನ ಮುಖ್ಯಸ್ಥೆಯಾಗಿ, ಆ ಪಡೆಯನ್ನು ಮುನ್ನಡೆಸಲು ಸಾಧ್ಯ

*ಕಮಾಂಡರ್‌ಗಳಿಗೆ ಅರ್ಹತೆ ಆಧಾರದ ಮೇಲೆ ಬ್ರಿಗೇಡಿಯರ್‌, ಮೇಜರ್‌ ಜನರಲ್‌, ಲೆಫ್ಟಿನೆಂಟ್‌ ಜನರಲ್‌ ಮಾತ್ರವಲ್ಲದೆ ಭೂಸೇನೆಯ ಮುಖ್ಯಸ್ಥರಾಗಿ ನೇಮಕಗೊಳ್ಳಲು ಅವಕಾಶವಿದೆ. ಆದರೆ, ಶಸ್ತ್ರಸಜ್ಜಿತ ಪಡೆಗಳ ಭಾಗವಾಗದೇ ಈ ಹುದ್ದೆಗಳು ದೊರೆಯುವುದು ಅಸಂಭವ. ಶಸ್ತ್ರಸಜ್ಜಿತ ಪಡೆಗಳ ಭಾಗವಾಗಲು ಮಹಿಳಾ ಅಧಿಕಾರಿಗಳಿಗೆ ಇನ್ನೂ ಅವಕಾಶವಿಲ್ಲದ ಕಾರಣ ಇಂತಹ ಉನ್ನತ ಹುದ್ದೆಗಳು ಅವರಿಗೆ ಒಲಿಯಲಾರವು

*ಕಮಾಂಡ್‌ಗಳಿಗೆ ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳುವ ಅಧಿಕಾರ ಇರುವುದರಿಂದ ಸೇನೆಯಲ್ಲಿ ಇನ್ನುಮುಂದೆ ಮಹಿಳೆಯರು ಮಹತ್ವದ ಪಾತ್ರ ನಿರ್ವಹಿಸಲು ಸಾಧ್ಯ

*ಸೇನೆಯ ಎಂಜಿನಿಯರಿಂಗ್‌ ವಿಭಾಗ, ಗೂಢಚರ್ಯೆ ವಿಭಾಗ ಮತ್ತು ಸಿಗ್ನಲ್‌ ವಿಭಾಗದ ಮುಖ್ಯಸ್ಥರ ಹೊಣೆ ಹೊರಲು ಮಹಿಳಾ ಅಧಿಕಾರಿಗಳಿಗೆ ಅವಕಾಶ

*ಮುಂದಿನ ದಿನಗಳಲ್ಲಿ ಮಹಿಳಾ ಅಧಿಕಾರಿಗಳು ಶಸ್ತ್ರಸಜ್ಜಿತ ಪಡೆಗಳ ಭಾಗವಾಗಲು ಈ ತೀರ್ಪು ಮೊದಲ ಮೆಟ್ಟಿಲಾಗುವ ಸಾಧ್ಯತೆ

ಸೇನೆ ಸೇರಿದ ಮೊದಲ ಮಹಿಳೆ ಪ್ರಿಯಾ ಜಿಂಗನ್
ಪ್ರಿಯಾಂ ಜಿಂಗನ್ ಅವರು ಭಾರತೀಯ ಸೇನೆಗೆ ಸೇರ್ಪಡೆಯಾದ (1992ರಲ್ಲಿ) ಮೊದಲ ಮಹಿಳೆ. ಪೊಲೀಸ್ ಅಧಿಕಾರಿಯ ಪುತ್ರಿಯಾಗಿ ಜನಿಸಿದ ಪ್ರಿಯಾ ಅವರಿಗೆ ಸಮವಸ್ತ್ರದಲ್ಲಿ ಪಥಸಂಚಲನ ನಡೆಸುವ ಕನಸಿತ್ತು. ಈ ಕನಸು ಬೆನ್ನುಹತ್ತಿದ ಅವರು, ಅಂದಿನ ಸೇನಾ ಮುಖ್ಯಸ್ಥರಿಗೆ ಪತ್ರ ಬರೆದರು, ಪ್ರಿಯಾ ಅವರನ್ನೂ ಒಳಗೊಂಡಂತೆ25 ಮಹಿಳೆಯರ ತಂಡ ಸೇನೆಗೆ ಸೇರ್ಪಡೆಯಾಯಿತು. ಕಾನೂನು ಪದವಿ ಮುಗಿಸಿದ್ದ ಜಿಂಗನ್ ಅವರು ಜಡ್ಜ್ ಅಡ್ವೊಕೇಟ್ ಜನರಲ್ ಆಗಿ ಸೇನೆಯಲ್ಲಿ ನೇಮಕಗೊಂಡರು.

ಪುನೀತಾ ಅರೋರಾ

ನೂರಾರು ಮಹಿಳೆಯರನ್ನು ಸೇನೆಗೆ ಸೇರುವಂತೆ ಹುರಿದುಂಬಿಸಿದವರ ಪೈಕಿ ಜನರಲ್ ಪುನೀತಾ ಅರೋರಾ ಅವರ ಪಾತ್ರ ಹಿರಿದು. ಇವರು ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಏರಿದ ಹಾಗೂ ನೌಕಾಪಡೆಯ ವೈಸ್ ಆಡ್ಮಿರಲ್ ಹುದ್ದೆಗೇರಿದ ಮೊದಲ ಮಹಿಳೆ. 37 ವರ್ಷದ ಸೇವಾವಧಿಯಲ್ಲಿ ಅಭೂತಪೂರ್ವ ನಾಯಕತ್ವಕ್ಕಾಗಿ 15 ಪದಕಗಳನ್ನು ಪಡೆದಿದ್ದಾರೆ.

ಪದ್ಮಾವತಿ ಬಂದೋಪಾಧ್ಯಾಯ

ಸೇನಾ ರಂಗದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿತ್ವ ಪದ್ಮಾವತಿ ಅವರದ್ದು. ಇವರು ಡಿಫೆನ್ಸ್ ಸರ್ವೀಸ್ ಕಾಲೇಜ್‌ನಿಂದ ಹೊರಬಂದ ಮೊದಲ ಮಹಿಳಾ ಅಧಿಕಾರಿ. ವಾಯುಪಡೆಯ ಮೊದಲ ಮಹಿಳಾ ಏರ್ ಮಾರ್ಷಲ್. 1971ರ ಭಾರತ–ಪಾಕ್ ಯುದ್ಧದಲ್ಲಿ ಮಾಡಿದ ಸೇವೆಗಾಗಿ ವಿಶಿಷ್ಟ ಸೇವಾ ಪದಕ ಸಿಕ್ಕಿದೆ.

ಹರಿತಾ ಕೌರ್ ಡಿಯೋಲ್

ಸಹಾಯಕ ಪೈಲಟ್ ಇಲ್ಲದೇ ಭಾರತೀಯ ವಾಯುಪಡೆ ವಿಮಾನವನ್ನು ಚಲಾಯಿಸಿದ ಮೊದಲ ಮಹಿಳೆ ಹರಿತಾಗೆ ಆಗ 22 ವರ್ಷ ಮಾತ್ರ. 10 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿ ಇತಿಹಾಸ ರಚಿಸಿದ್ದಾರೆ.

ದಿವ್ಯಾ ಅಜಿತ್ ಕುಮಾರ್

ಸೇನೆಯಲ್ಲಿ ಪ್ರತಿಷ್ಠಿತ ‘ಖಡ್ಗದ ಗೌರವ’ ಪಡೆದ ಮೊದಲ ಮಹಿಳೆ ದಿವ್ಯಾ ಅಜಿತ್ ಕುಮಾರ್. ವಿವಿಧ ಪರೀಕ್ಷೆಗಳಲ್ಲಿ 244 ಕೆಡೆಟ್‌ಗಳ ವಿರುದ್ಧ ಸ್ಪರ್ಧಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಒಬಾಮಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ 2015ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ 154 ಅಧಿಕಾರಿಗಳ ತಂಡವನ್ನು ಮುನ್ನಡೆಸಿ ಸೈ ಎನಿಸಿಕೊಂಡಿದ್ದರು.

ಮಿಥಾಲಿ ಮಧುಮಿತಾ

ಪ್ರತಿಷ್ಠಿತ ಸೇನಾ ಪದಕ ಪಡೆದ ಮೊದಲ ಮಹಿಳೆ ಮಿಥಾಲಿ ಮಧುಮಿತಾ. ಕಾಬೂಲ್‌ನ ದೂತವಾಸ ಕಚೇರಿ ಮೇಲಿನ ದಾಳಿಯಲ್ಲಿ ಗಾಯಗೊಂಡ ನಾಗರಿಕರು ಹಾಗೂ ಸೇನಾ ಸಿಬ್ಬಂದಿಯನ್ನು ಜೀವ ಪಣಕ್ಕಿಟ್ಟು ರಕ್ಷಿಸಿದ್ದರು.

ಗುಂಜನ್ ಸಕ್ಸೇನಾ, ಶ್ರೀವಿದ್ಯಾ ರಾಜನ್

ಕಾರ್ಗಿಲ್ ಯುದ್ಧದ ವೇಳೆ ಯುದ್ಧಭೂಮಿಯಲ್ಲಿ ವಿಮಾನ ಚಲಾಯಿಸಿದ ಮೊದಲ ಮಹಿಳಾ ಪೈಲಟರ್‌ಗಳಿವರು. ಫ್ಲೈಟ್ ಆಫೀಸರ್ ಗುಂಜನ್ ಸಕ್ಸೇನಾ ಮತ್ತು ಫ್ಲೈಟ್ ಲೆಫ್ಟಿನೆಂಟ್ ಶ್ರೀವಿದ್ಯಾ ಅವರು ವೈರಿ ಗಡಿಯ ಸಮೀಪದಲ್ಲಿ ಚೀತಾ ಹೆಲಿಕಾಪ್ಟರ್ ಚಲಾಯಿಸಿ, ಗಾಯಗೊಂಡ ಸೈನಿಕರನ್ನು ಸುರಕ್ಷಿತವಾಗಿ ಕರೆತಂದಿದ್ದರು.

ದೀಪಿಕಾ ಮಿಶ್ರಾ

‘ಸಾರಂಗ್‌’ ಹೆಲಿಕಾಪ್ಟರ್ ಏರೋಬ್ಯಾಟಿಕ್ ತಂಡಕ್ಕೆ ತರಬೇತಿ ನೀಡಿದ ಮೊದಲ ಮಹಿಳೆ ಇವರು. ಜಗತ್ತಿನ ನಾಲ್ಕು ಹೆಲಿಕಾಪ್ಟರ್ ಪ್ರದರ್ಶನ ತಂಡಗಳ ಪೈಕಿ ಸಾರಂಗ್ ಕೂಡ ಒಂದು.

ಅವನಿ ಚತುರ್ವೇದಿ

ಸೂಪರ್‌ಸಾನಿಕ್ ವಿಮಾನವನ್ನು ಏಕಾಂಗಿಯಾಗಿ ಚಲಾಯಿಸಿದ ಯುವ ಸಾಧಕಿ ಎಂದು ಅವನಿ ಚತುರ್ವೇದಿ ಗುರುತಿಸಿಕೊಂಡಿದ್ದಾರೆ.

ಮೊದಲ ಮಹಿಳಾ ಸೈನಿಕರ ತಂಡ
ಭಾರತೀಯ ಭೂಸೈನ್ಯದ ಮೊದಲ ಮಹಿಳಾ ಸೈನಿಕರ ತಂಡಕ್ಕೆ ನೂರು ಜನರನ್ನು ಆಯ್ಕೆ ಮಾಡಲಾಗಿದ್ದು, ಅವರೀಗ ಬೆಂಗಳೂರಿನ ಸೇನಾ ಪೊಲೀಸ್‌ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನೂರು ಹುದ್ದೆಗಳಿಗೆ ಎರಡು ಲಕ್ಷಕ್ಕಿಂತ ಅಧಿಕ ಯುವತಿಯರು ಅರ್ಜಿ ಹಾಕಿದ್ದರು. ದೇಶದಾದ್ಯಂತ ಆಯ್ಕೆ ಪ್ರಕ್ರಿಯೆ ನಡೆಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಸೈನ್ಯದ ಈ ಮೊದಲ ಮಹಿಳಾ ಸೈನಿಕರ ಪಡೆ 2021ರ ಅಂತ್ಯಕ್ಕೆ ತರಬೇತಿಯನ್ನು ಪೂರ್ಣಗೊಳಿಸಲಿದ್ದು, ಬಳಿಕ ಸೈನ್ಯದ ಸೇವೆಗೆ ಲಭ್ಯವಾಗಲಿದೆ.

ಯಾವ ಹುದ್ದೆಗೆ ನೇಮಕ
ಸಿಗ್ನಲ್ಸ್‌, ಎಂಜಿನಿಯರ್ಸ್‌, ಆರ್ಮಿ ಏವಿಯೇಷನ್‌, ಆರ್ಮಿ ಏರ್‌ ಡಿಫೆನ್ಸ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಮೆಕ್ಯಾನಿಕಲ್‌ ಎಂಜಿನಿಯರ್ಸ್‌ (ಇಎಂಇ), ಆರ್ಮಿ ಸರ್ವಿಸ್‌ ಕೋರ್‌, ಆರ್ಮಿ ಆರ್ಡನನ್ಸ್‌ ಕೋರ್‌, ಗೂಢಚರ್ಯ, ಜಡ್ಜ್‌ ಅಡ್ವೋಕೇಟ್‌ ಜನರಲ್‌ (ಜೆಎಜಿ) ಮತ್ತು ಆರ್ಮಿ ಎಜ್ಯುಕೇಷನ್‌ ಕೋರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT