ಸೋಮವಾರ, ಸೆಪ್ಟೆಂಬರ್ 21, 2020
25 °C

2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಉಮಾ ಭಾರತಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಆಡಳಿತಾರೂಢ ಬಿಜೆಪಿ ಹಿರಿಯ ನಾಯಕಿ, ಕೇಂದ್ರ ಸಚಿವೆ ಉಮಾ ಭಾರತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. 2019ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. 

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಹಾಗೂ ಗಂಗಾ ನದಿಯನ್ನು ಶುಚಿಗೊಳಿಸುವ ಕಾರ್ಯಗಳಲ್ಲಿ ಮುಂದಿನ ಒಂದೂವರೆ ವರ್ಷಗಳು ನಿರತರಾಗುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಸ್ಥಾನದಲ್ಲಿನ ಇಬ್ಬರು ಸಚಿವರು ಮುಂದಿನ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಂತಾಗಿದೆ. 

ಇದನ್ನೂ ಓದಿ: ‘ಆರೋಗ್ಯ ಕಾರಣ’ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಸುಷ್ಮಾ ಸ್ವರಾಜ್‌

ರಾಮ ಮಂದಿರ ನಿರ್ಮಾಣಕ್ಕೆ ಶಾಸನಾತ್ಮಕ ಕ್ರಮವಹಿಸುವಂತೆ ಹಿಂದೂ ಸಂಘಟನೆಗಳಿಂದ ಒತ್ತಡ ಹೆಚ್ಚುತ್ತಿರುವ ಸಮಯದಲ್ಲಿ ಉಮಾ ಭಾರತಿ ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಭೋಪಾಲ್‌ನಲ್ಲಿ ಪ್ರಕಟಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ರಾಮ ಮಂದಿರ ನಿರ್ಮಾಣ ಅಭಿಯಾನದಲ್ಲಿ ಉಮಾ ಭಾರತಿ ಸಹ ಸಾರಥ್ಯವಹಿಸಿದ್ದಾರೆ. 

‘ರಾಮ ಮಂದಿರ ನಿರ್ಮಾಣದಲ್ಲಿ ನಮ್ಮ ಪಕ್ಷ ಹಕ್ಕು ಸ್ವಾಮ್ಯತೆ ಪಡೆದುಕೊಂಡಿಲ್ಲ, ಸರ್ವ ಪಕ್ಷಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಕಳೆದ ವಾರ ಹೇಳಿದ್ದರು. 

ಆರ್‌ಎಸ್‌ಎಸ್‌ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ರಾಮ ಮಂದಿರ ನಿರ್ಮಾಣಕ್ಕೆ ಸೂಕ್ತ ಕ್ರಮವಹಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿದ್ದವು. ರಾಮನ ಜನ್ಮಸ್ಥಳವೆಂದು ನಂಬಲಾಗಿರುವ ಅಯೋಧ್ಯೆಯಲ್ಲಿನ ರಾಮ ಮಂದಿರ ಸ್ಥಳದಲ್ಲಿ 16ನೇ ಶತಮಾನದಲ್ಲಿ ಬಾಬ್ರಿ ಮಸೀದಿ ಕಟ್ಟಲಾಗಿದೆ ಎಂದು ಬಹುತೇಕ ಹಿಂದೂಗಳು ನಂಬಿದ್ದಾರೆ. 1992ರಲ್ಲಿ ಗುಂಪು ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿತ್ತು. ಇದರಿಂದಾಗಿ ಭಾರತದಾದ್ಯಂತ ಕೋಮು ಗಲಭೆ ಉಂಟಾಗಿತ್ತು. 

ಇದನ್ನೂ ಓದಿ: ಆರೋಗ್ಯವೋ.. ಆಡಳಿತವೋ?– ರಾಜಕೀಯ ದ್ವಂದ್ವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು