ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮುಂದಿನ ಗುರಿ ‘ಗಗನಯಾನ’, ‘ಆದಿತ್ಯ ಎಲ್‌–1’: ಶಿವನ್‌

Last Updated 26 ಸೆಪ್ಟೆಂಬರ್ 2019, 12:49 IST
ಅಕ್ಷರ ಗಾತ್ರ

ಅಹ್ಮದಾಬಾದ್‌ (ಗುಜರಾತ್‌): ಚಂದ್ರಯಾನ–2ನ ಆರ್ಬಿಟರ್‌ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಶಿವನ್‌ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇದರ ಜತೆಗೇ ಭವಿಷ್ಯದ ಯೋಜನೆಗಳನ್ನೂ ತಿಳಿಸಿರುವ ಶಿವನ್‌, ಗಗನಯಾನ ಮತ್ತು ಆದಿತ್ಯ ಎಲ್‌–1 ಕಡೆಗೆ ಇಸ್ರೋ ದೃಷ್ಟಿ ನೆಟ್ಟಿದೆ ಎಂದು ತಿಳಿಸಿದ್ದಾರೆ.

ಅಹ್ಮದಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಚಂದ್ರಯಾನ–2ನ ಆರ್ಬಿಟರ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಎಲ್ಲ ಕಾರ್ಯಗಳೂ ಆರಂಭವಾಗಿವೆ. ಅದಯ ಚೆನ್ನಾಗಿಯೂ ಕೆಲಸ ಮಾಡುತ್ತಿದೆ. ಆದರೆ, ವಿಕ್ರಮ್‌ ಲ್ಯಾಂಡ್‌ನಿಂದ ಈ ವರೆಗೆ ಯಾವುದೇ ಸಂದೇಶ ಸಿಕ್ಕಿಲ್ಲ. ಹೀಗಾಗಿ ಅದರ ಸಂಪರ್ಕ ಸಾಧ್ಯವಾಗಿಲ್ಲ,’ಎಂದು ಅವರು ತಿಳಿಸಿದರು.
‘ವಿಕ್ರಮ್‌ ಲ್ಯಾಂಡ್‌ನ ವೈಫಲ್ಯಕ್ಕೆ ಕಾರಣಗಳೇನು ಎಂಬುದನ್ನು ಅಧ್ಯಯನ ಮಾಡಲು ರಾಷ್ಟ್ರ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ವರದಿಯ ಆಧಾರದಲ್ಲಿ ಇಸ್ರೋ ತನ್ನ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಿದೆ,’ ಎಂದರು.

‘ಇಸ್ರೋ ಭವಿಷ್ಯದಲ್ಲಿ ರೂಪಿಸಿರುವ ಬಾಹ್ಯಾಕಾಶ ಯೋಜನೆಗಳೇನು,’ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವನ್‌,‘ಭವಿಷ್ಯದಲ್ಲಿ ನಾವು ‘ಗಗನಯಾನ’ ಎಂಬ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಇದರ ಜತೆಗೇ, ಉಪಗ್ರಹ ಉಡ್ಡಾಯನಕ್ಕೆ ಸಣ್ಣ ವಾಹಕ–‘ಆದಿತ್ಯ–ಎಲ್‌1’ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ,’ ಎಂದು ಅವರು ತಿಳಿಸಿದರು.

ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ‘ಗಗನಯಾನ’, ಭಾರತದ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳ ದೊಡ್ಡ ಪಡೆಯೇ ಹಲವು ದಶಕಗಳಿಂದ ತಪಸ್ಸಿನಂತೆ ಶ್ರಮ ಹಾಕಿದೆ. ತಮ್ಮ ಶ್ರಮವನ್ನು ಸಾಕ್ಷಾತ್ಕಾರಗೊಳಿಸಲು ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಚಾತಕಪಕ್ಷಿಯಂತೆ ಕಾದು ಕುಳಿತಿತ್ತು. ‘ಗಗನಯಾನ’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಕೊನೆಗೂ ಒಪ್ಪಿಗೆ ನೀಡಿದೆ. ಇದರಿಂದ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.ಈ ಯಾನದಲ್ಲಿ ಮೂವರು ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.

‘ಗಗನಯಾನ’ ಯಶಸ್ವಿಯಾದರೆ, ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಲಿದೆ. ಈ ಯೋಜನೆಗೆ ತಗಲುವ ವೆಚ್ಚ ₹10,000 ಕೋಟಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಏಳು ದಿನಗಳು ಇದ್ದು, ಭೂಮಿಗೆ ವಾಪಸಾಗಲಿದ್ದಾರೆ. ಇಸ್ರೊ ವಿಜ್ಞಾನಿಗಳು ಆರಂಭದಲ್ಲಿ ಈ ಯೋಜನೆಗೆ ₹12,500 ಕೋಟಿ ವೆಚ್ಚ ಆಗಬಹುದು ಎಂಬ ಅಂದಾಜು ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದರೆ, 2022ರೊಳಗೇ ಮೂವರು ಭಾರತೀಯರು ಬಾಹ್ಯಾಕಾಶದಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT