ಸೋಮವಾರ, ಜೂಲೈ 13, 2020
29 °C

‘ಬಯಲು ಶಾಲೆಗೆ ಬನ್ನಿ; ಬದುಕು ಕಟ್ಟಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಗ್ಗೋಡ: ‘ಶಾಲಾ ಕೊಠಡಿಯಲ್ಲಿ ವಿಷಯ ಜ್ಞಾನ ಪಡೆದ ಮೇಲೆ ಎಲ್ಲರೂ ಬಯಲು ಶಾಲೆಗೆ ಬರಬೇಕು. ನಮ್ಮ ಜ್ಞಾನ ಸಂಪತ್ತಿನೊಂದಿಗೆ ಬಯಲು ಶಾಲೆ ಬದುಕು ಕಟ್ಟಿಕೊಳ್ಳಲು ಸಹಾಯಕವಾಗಲಿದೆ’ ಎಂದು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್‌ ಆಳ್ವಾ ಹೇಳಿದರು.

ಭಾರತೀಯ ಸಂಸ್ಕೃತಿ ಉತ್ಸವ-5ರ ಜ್ಞಾನ ಸಂಗಮದ ಮಧ್ಯಾಹ್ನದ ಗೋಷ್ಠಿಯಲ್ಲಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ನಮ್ಮ ಮಕ್ಕಳು ಭಾರತೀಯ ಸಂಸ್ಕೃತಿ ಮುಂದುವರೆಸಿಕೊಂಡು ಹೋಗುವ ವಿಶ್ವಾಸವಿಲ್ಲ. ತಂದೆ ತಾಯಿಗಳು ಮಕ್ಕಳಿಗೆ ಪುಸ್ತಕಗಳ ಜ್ಞಾನದೊಂದಿಗೆ ಭಾರತೀಯ ಪ್ರಾಚೀನ ಸಂಸ್ಕೃತಿ, ಪರಂಪರೆ, ಶಿಕ್ಷಣ ವ್ಯವಸ್ಥೆ ತಿಳಿಸಿಕೊಡಬೇಕಿದೆ’ ಎಂದರು.

‘ನಮ್ಮ ಶಾಸ್ತ್ರೀಯ ಕಲೆ, ಜಾನಪದ ಸಂಸ್ಕೃತಿಯಲ್ಲಿ ಧರ್ಮ ಜಾಗೃತಿ, ಪರಿಸರ ಪ್ರಜ್ಞೆ, ಸಾಮರಸ್ಯದ ಬದುಕು ಸೇರಿದಂತೆ ಸುಂದರ ಬದುಕಿಗೆ ಬೇಕಾದ ಅಂಶಗಳಿವೆ. ಮಕ್ಕಳು ಕಲೆ, ಸಂಸ್ಕೃತಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತಾಗಬೇಕು. ಪರಿಸರ ಪ್ರಜ್ಞೆ ಇಲ್ಲದ ವ್ಯಕ್ತಿ ಅಪಾಯಕಾರಿ. ಈ ರೀತಿ ಮಕ್ಕಳಾಗಬಾರದೆಂದರೇ ಅವರಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು. ಶಿಕ್ಷಣದೊಂದಿಗೆ ದೇಶಿಯ ಶಿಕ್ಷಣ ತಿಳಿಸಿಕೊಡಬೇಕು’ ಎಂದು ಹೇಳಿದರು.

ದೆಹಲಿಯ ಗಣಿತ ತಜ್ಞ ಸಿ.ಕೆ.ರಾಜು ಮಾತನಾಡಿ ‘ನಾವಿಂದು ಭಾರತದ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ನಿರ್ಲಕ್ಷಿಸುತ್ತಿದ್ದೇವೆ. ಈಗಿನ ಶಿಕ್ಷಣ ಪದ್ಧತಿ ಬದಲಾವಣೆಯಾಗಬೇಕಿದೆ. ನಮ್ಮ ದೇಶದ ಅರ್ಥ ವ್ಯವಸ್ಥೆ ಕೃಷಿಯನ್ನು ಅವಲಂಬಿಸಿದೆ. ಕೃಷಿಯು ಮಳೆಯನ್ನು ಆಧರಿಸಿದೆ. ಆದರೆ ಇಂದು ನಾವು ಬಳಸುತ್ತಿರುವ ಗ್ರೆಗೊರಿಯಲ್ ಕ್ಯಾಲೆಂಡರ್‌ಗಳಲ್ಲಿ ಮಳೆಯ ಮಾಹಿತಿ ಇಲ್ಲ. ಇದ್ದರೂ ಅದು ನಮ್ಮ ಪರಂಪರೆಯಿಂದ ಬಂದದ್ದು’ ಎಂದು ಹೇಳಿದರು.

ಬಸವರಾಜ ಪಾಟೀಲ ಸೇಡಂ, ಆಶಿಸ್‌ ಗುಪ್ತಾ ಮಾತನಾಡಿದರು. ತಿಂಥಣಿ ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಿಕ್ಷಣ, ಗಣಿತ ಕ್ಷೇತ್ರದ ಸಾಧಕರಾದ ಗುರುರಾಜ ಕರ್ಜಗಿ, ಅಶೋಕ ಠಾಕೂರ, ಆಶಿಷ್‌ ಗುಪ್ತಾ, ಜಪಾನ್‌ನ ತಾನಾಕಾಸಾನ್, ತಾಖೀಹಿರೊ, ಓಡಿಶಾದ ಹಿಮಾಂಶು, ಬಿ.ವೀ.ವಿ ಸಂಘದ ಆಡಳಿತಾಧಿಕಾರಿ ಎನ್.ಜಿ.ಕರೂರ, ವೇಣುಗೋಪಾಲ ಹೆರೂರ, ಪಿ.ಎಸ್.ದಂಡಿನ, ಸಾವಯವ ಕೃಷಿ ತಜ್ಞ ಡಾ.ವಾರಣಾಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಡಾ.ಎಚ್.ವೆಂಕಟೇಶ ಸ್ವಾಗತಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.