ಶುಕ್ರವಾರ, ಜೂಲೈ 3, 2020
21 °C

ಬೆಂಗಳೂರಿನಿಂದ ರಾಜಸ್ಥಾನಕ್ಕೆ ಟ್ರಕ್‌ನಲ್ಲಿ ಹೋಗುತ್ತಿದ್ದ 101 ಕಾರ್ಮಿಕರು ವಶಕ್ಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

labour

ಬೆಂಗಳೂರು: ಗೂಡ್ಸ್ ಟ್ರಕ್‌ನಲ್ಲಿ ಬೆಂಗಳೂರಿನಿಂದ ರಾಜಸ್ಥಾನದ ಕಡೆಗೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಾಗಿ ಸಾಗುತ್ತಿದ್ದ ಸುಮಾರು 101 ಕಾರ್ಮಿಕರನ್ನು ಬೆಳಗಾವಿ ತಾಲೂಕಿನ ಹೀರೇಬಾಗೇವಾಡಿ ಗ್ರಾಮದ ಬಳಿಯಲ್ಲಿರುವ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕಾರ್ಮಿಕರನ್ನು ಈಗ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಪುರುಷರು, ಮಹಿಳೆಯರು ಮತ್ತು ಮಕ್ಕಳು ಇರುವ ಕಾರ್ಮಿಕರ ತಂಡವು ಅನುಮತಿ ಇಲ್ಲದೆಯೇ ಗೂಡ್ಸ್ ಟ್ರಕ್‌ನಲ್ಲಿ ರಾಜಸ್ಥಾನದತ್ತ ಹೋಗುತ್ತಿತ್ತು. ಮಂಗಳವಾರ ಬೆಳಗ್ಗೆ ಹೀರೇಬಾಗೇವಾಡಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಮತ್ತು ಇತರ ಅಧಿಕಾರಿಗಳು ಇವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ದೈಹಿಕ ಶಿಕ್ಷಣ ಕಾಲೇಜಿನ ಕ್ರೀಡಾಂಗಣಕ್ಕೆ ತಂದು ವಿಚಾರಣೆ ನಡೆಸಿ ಆಮೇಲೆ ಬೆಳಗಾವಿ ನಗರದ ನೆಹರು ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಈ ಪೈಕಿ ಒಬ್ಬ ಕಾರ್ಮಿಕನಿಗೆ ಜ್ವರ ಇರುವುದು ವೈದ್ಯಕೀಯ ತಪಾಸಣೆ ಮಾಡಿದಾಗ ತಿಳಿದುಬಂದಿದೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಳಗಾವಿ ನಗರ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಹೇಳಿದ್ದಾರೆ.

ಏಪ್ರಿಲ್ ತಿಂಗಳಲ್ಲಿ 300ಕ್ಕಿಂತಲೂ ಹೆಚ್ಚು ಕಾರ್ಮಿಕರು ಎರಡು ಗೂಡ್ಸ್ ಟ್ರಕ್‌ಗಳಲ್ಲಿ ರಾಜಸ್ಥಾನಕ್ಕೆ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ತೆಗೆದುಕೊಂಡು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ 101 ಕಾರ್ಮಿಕರು ಬೆಂಗಳೂರಿನಿಂದ ಹೊರಗೆ ಹೋಗುತ್ತಿರುವ ಪ್ರಕರಣ ಪತ್ತೆಯಾದ ನಂತರ ನಗರದ ಚೆಕ್ ಪಾಯಿಂಟ್‌ಗಳಲ್ಲಿ ಸರಿಯಾಗಿ ತಪಾಸಣೆ ನಡೆಯುತ್ತಿಲ್ಲವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು