ಸೋಮವಾರ, ಆಗಸ್ಟ್ 26, 2019
27 °C

ಕೃಷ್ಣಾಗೆ 3,92 ಲಕ್ಷ ಕ್ಯುಸೆಕ್‌ ನೀರು

Published:
Updated:

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಶುಕ್ರವಾರ ಮಳೆಯ ಅಬ್ಬರ ತಗ್ಗಿದ್ದರೂ ಅಲ್ಲಿನ ಜಲಾಶಯಗಳಿಂದ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಟ್ಟು ರಾಜ್ಯಕ್ಕೆ 3,92,842 ಕ್ಯುಸೆಕ್‌ ನೀರು ಹರಿದುಬರುತ್ತಿದೆ. 

ಕೊಯ್ನಾ ಜಲಾಶಯದಿಂದ ಬರುತ್ತಿದ್ದ ನೀರಿನ ಪ್ರಮಾಣವು 69,075 ಕ್ಯುಸೆಕ್‌ಗೆ ಇಳಿದಿದೆ. ಆದರೆ, ಇತರ ಜಲಾಶಯಗಳಿಂದ ಹೆಚ್ಚಿನ ನೀರು ಬರುತ್ತಿದೆ. ವಾರಣಾದಿಂದ 15,000 ಕ್ಯುಸೆಕ್‌, ರಾಧಾನಗರಿ 7,356 ಕ್ಯುಸೆಕ್‌, ಕಣೇರದಿಂದ 6,743 ಕ್ಯುಸೆಕ್‌, ಧೂಮ್‌ ಜಲಾಶಯದಿಂದ 10,760 ಕ್ಯುಸೆಕ್‌, ಕಾಳಮ್ಮವಾಡಿಯಿಂದ 20,500 ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯಿಂದ 60,896 ಕ್ಯುಸೆಕ್‌ ಸೇರಿದಂತೆ  ಒಟ್ಟು 3,92,842 ಕ್ಯುಸೆಕ್‌ ನೀರು ಕೃಷ್ಣಾಗೆ ಸೇರಿಕೊಳ್ಳುತ್ತಿದೆ.

ತಗ್ಗಿದ ಮಳೆ: ದಕ್ಷಿಣ ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಶುಕ್ರವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಅಪರೂಪಕ್ಕೆ ಎನ್ನುವಂತೆ ಆಗಾಗ ಸೂರ್ಯನ ದರ್ಶನವೂ ಆಯಿತು. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. 

ದಾಖಲೆ ಪ್ರಮಾಣ: ಮಲಪ್ರಭಾ ಹಾಗೂ ಹಿಡಕಲ್‌ ಜಲಾಶಯಗಳಿಗೆ ದಾಖಲೆ ಪ್ರಮಾಣದಲ್ಲಿ ಒಳಹರಿವು ಹಾಗೂ ಹೊರಹರಿವು ಇದೆ. ಮಲಪ್ರಭಾ ಜಲಾಶಯಕ್ಕೆ 72,744 ಕ್ಯುಸೆಕ್‌ ನೀರು ಹರಿದು ಬಂದಿದ್ದರೆ, ಅಷ್ಟೇ ಪ್ರಮಾಣದಲ್ಲಿ ಹೊರಗೆ ಬಿಡಲಾಯಿತು. ಇದರಿಂದಾಗಿ ನದಿಪಾತ್ರದ ಮುನವಳ್ಳಿ ಹಾಗೂ ರಾಮದುರ್ಗದ ಹಲವು ಹಳ್ಳಿಗಳು ಜಲಾವೃತವಾದವು. ಹಿಡಕಲ್‌ ಜಲಾಶಯಕ್ಕೆ 1,00,942 ಕ್ಯುಸೆಕ್‌ ನೀರು ಹರಿದುಬಂದಿದ್ದು, ಇಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿದೆ. ಗೋಕಾಕ ಫಾಲ್ಸ್‌ ಭೋರ್ಗರೆಯುತ್ತಿದೆ. 

Post Comments (+)