ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಾಗಣೆ: ಒಂದೂವರೆ ತಿಂಗಳಲ್ಲಿ 546 ಮಂದಿ ಬಂಧನ!

₹1.41 ಕೋಟಿ ಮೌಲ್ಯದ ಮದ್ಯ, ವಾಹನ ವಶ
Last Updated 28 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಮಾದರಿ ನೀತಿಸಂಹಿತೆ ಜಾರಿಯಲ್ಲಿದ್ದ ಒಂದೂವರೆ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಬರೋಬ್ಬರಿ 546 ಮಂದಿಯನ್ನು ಬಂಧಿಸಿದ್ದಾರೆ. ₹ 1.41 ಕೋಟಿ ಮೌಲ್ಯದ ಮದ್ಯ ಹಾಗೂ ವಾಹನಗಳನ್ನು ವಶಕ್ಕೆ ಪಡೆದು ಅಕ್ರಮ ಸಾಗಣೆ ಮಾಡುವವರಿಗೆ ‘ಬಿಸಿ’ ಮುಟ್ಟಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ಗೋವಾ ಗಡಿಯನ್ನು ಹೊಂದಿರುವ ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷದವರು ಯೋಜಿಸುವ ಅಕ್ರಮ ಮದ್ಯ ಸಾಗಣೆಗೆ ಇದ್ದ ಅವಕಾಶಗಳ ಮೇಲೆ ಇಲಾಖೆ ಅಧಿಕಾರಿಗಳು ಚುನಾವಣಾ ಸಮಯದಲ್ಲಿ ತೀವ್ರ ನಿಗಾ ವಹಿಸಿದ್ದರು. ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಸಿಬ್ಬಂದಿ ನಿಯೋಜಿಸಿದ್ದರು. ಹೊರ ರಾಜ್ಯಗಳಿಂದ ಬರುವ ವಾಹನಗಳ ಮೇಲೆ ಹೆಚ್ಚಿನ ಕಣ್ಣಿಡಲಾಗಿತ್ತು. ಜೊತೆಗೆ ಫ್ಲೈಯಿಂಗ್ ಸ್ಕ್ವಾಡ್‌ಗಳು ಕೂಡ ಕಾರ್ಯನಿರತವಾಗಿದ್ದವು. ಅಕ್ರಮ ಮದ್ಯ ಸಾಗಣೆ, ತಯಾರಿಕೆ ಹಾಗೂ ಸಂಗ್ರಹದ ಮೇಲೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿತ್ತು.

ಮಾರ್ಚ್‌ 10ರಿಂದ

ನೀತಿಸಂಹಿತೆ ಜಾರಿಯಾದ ಮಾರ್ಚ್‌ 10ರಿಂದ ಏ. 21ರವರೆಗೆ 54 ದ್ವಿಚಕ್ರವಾಹನ, 1 ಗೂಡ್ಸ್‌ ವಾಹನ, 1 ಲಾರಿ, 1 ಬೈಸಿಕಲ್ ಹಾಗೂ 7 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 54,15,188. ಅಂತೆಯೇ, 1,184 ದಾಳಿಗಳನ್ನು ನಡೆಸಲಾಗಿದೆ. 6,91 ಪ್ರಕರಣಗಳನ್ನು ದಾಖಲಿಸಲಾಗಿದೆ. 9,593 ಲೀಟರ್‌ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಮಾರ್ಚ್‌ 28ರಂದು ಒಂದೇ ದಿನ 8,640 ಲೀಟರ್ ಮದ್ಯವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಮೂಲಕ, ಚುನಾವಣಾ ಅಕ್ರಮಕ್ಕೆ ತಡೆ ಹಾಕಲು ಇಲಾಖೆಯಿಂದ ಸಹಕಾರ ನೀಡಲಾಗಿದೆ.

ತಾಲ್ಲೂಕಿಗೆ ತಲಾ 1, ಉಪವಿಭಾಗಗಳಿಗೆ ತಲಾ 1 ಹಾಗೂ ಜಿಲ್ಲಾಮಟ್ಟಕ್ಕೆ 1 ಸೇರಿದಂತೆ 15 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿತ್ತು. ಮಹಾರಾಷ್ಟ್ರ ಹಾಗೂ ಗೋವಾ ಗಡಿಗಳಲ್ಲಿ ಸೇರಿದಂತೆ ವಿವಿಧೆಡೆ ತಾತ್ಕಾಲಿಕವಾಗಿ 20 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಶಾಶ್ವತ ಚೆಕ್‌ಪೋಸ್ಟ್‌ಗಳಾದ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿ ಹಾಗೂ ನಿಪ್ಪಾಣಿ ತಾಲ್ಲೂಕಿನ ಕುಗನೋಳಿಯಲ್ಲಿ, 4 ಡಿಸ್ಟಿಲರಿಗಳು, 273 ವೈನ್‌ಶಾಪ್‌ಗಳು ಹಾಗೂ 63 ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಈ ಬಾರಿ ಜಾಸ್ತಿ

2014ರ ಲೋಕಸಭಾ ಚುನಾವಣೆಯಲ್ಲಿ 632 ದಾಳಿಗಳನ್ನು ನಡೆಸಲಾಗಿತ್ತು. 145 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. 844 ಲೀಟರ್ ಮದ್ಯ, 30 ವಾಹನ ವಶಪಡಿಸಿಕೊಳ್ಳಲಾಗಿತ್ತು. ಅವುಗಳ ಮೌಲ್ಯ ₹ 90 ಲಕ್ಷವಾಗಿತ್ತು.

ಜಿಲ್ಲೆಯಲ್ಲಿ (ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಖಾನಾಪುರ ಹಾಗೂ ಚನ್ನಮ್ಮನಕಿತ್ತೂರು ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಂಡಂತೆ) ಅಕ್ರಮ ಮದ್ಯ ಸಾಗಣೆಗೆ ಸಂಬಂಧಿಸಿದವು ಹಾಗೂ ಇತರ ಉಲ್ಲಂಘನೆ ಸೇರಿ 719 ಪ್ರಕಗಳನ್ನು ದಾಖಲಿಸಲಾಗಿದೆ. ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು ₹ 2.89 ಕೋಟಿ ನಗದು, ₹ 17.91 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

2014ರ ಲೋಕಸಭಾ ಚುನಾವಣೆ ಹಾಗೂ 2018ರಲ್ಲಿ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ದಾಳಿಗಳನ್ನೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗಿದೆ.

ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ₹ 1.9 ಕೋಟಿ ನಗದನ್ನು ಬೈಲಹೊಂಗಲ ತಾಲ್ಲೂಕು ನೇಸರಗಿ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ನಿಪ್ಪಾಣಿ ತಾಲ್ಲೂಕಿನ ಕೊಗನೋಳಿ ಚೆಕ್‌ಪೋಸ್ಟ್‌ನಲ್ಲಿ 30 ಕೆ.ಜಿ. ಬೆಳ್ಳಿ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿತ್ತು. ಇವರೆಡು ದೊಡ್ಡ ಪ್ರಕರಣಗಳೆನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT