ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಲತಾಗೆ ಕಾಂಗ್ರೆಸ್‌ ಬೆಂಬಲ ಇಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

Last Updated 1 ಮಾರ್ಚ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ದಿವಂಗತ ಅಂಬರೀಷ್‌ ಅವರ ಪತ್ನಿ ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ ಪಕ್ಷ ಬೆಂಬಲ ಕೊಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದರು.

ಮೊಳಕಾಲ್ಮುರು ಮಾಜಿ ಶಾಸಕ ತಿಪ್ಪೇಸ್ವಾಮಿ ಅವರ ಪಕ್ಷ ಸೇರ್ಪಡೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಅವರು ಈ ವಿಷಯ ತಿಳಿಸಿದರು.

‘ಕ್ಷೇತ್ರಗಳ ಹಂಚಿಕೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಯಾರಿಗೆಲ್ಲ ಟಿಕೆಟ್‌ ಕೊಡಬೇಕು ಎಂಬುದೂ ಅಂತಿಮವಾಗಿಲ್ಲ. ಸುಮಲತಾ ಪಕ್ಷೇತರರಾಗಿ ಕಣಕ್ಕಿಳಿಯುವ ಸಂಬಂಧ ಮಾತನಾಡಿಲ್ಲ. ಮಂಡ್ಯ ಬಿಟ್ಟು ಬೇರೆ ಕಡೆಯಿಂದ ಸ್ಪರ್ಧಿಸಲಿ ಎಂಬುದಾಗಿ ನಾನೂ ಸಲಹೆ ನೀಡಿದ್ದೆ’ ಎಂದು ದಿನೇಶ್‌ ಹೇಳಿದರು.

ಬಿಜೆಪಿ ಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ಧರ್ಮ, ದೇಶ ಮತ್ತು ರಕ್ಷಣೆ ವಿಚಾರಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಯನ್ನು ಗೆಲ್ಲಲು ಬಿಜೆಪಿಯವರು ಎಲ್ಲವನ್ನೂ ಬಿಟ್ಟು ನಿಂತಿದ್ದಾರೆ ಮತ್ತು ಏನನ್ನೂ ಮಾಡಲು ತಯಾರಿದ್ದಾರೆ ಎಂದು ಟೀಕಿಸಿದರು. ಯೋಧರ ಬಲಿದಾನವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡಿದೆ. ಬಿಜೆಪಿಯವರು ನಾಚಿಕೆ ಇಲ್ಲದ ಜನ ಎಂದು ಗುಂಡೂರಾವ್‌ ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯನ್ನು ಅವರ ಪಕ್ಷದ ನಾಯಕರೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದರೆ ಬಿಜೆಪಿ ನಿಲುವು ಏನು ಎಂಬುದು ಗೊತ್ತಾಗುತ್ತದೆ. ರಾಜ್ಯದ ಹಿತಾಸಕ್ತಿ ಕಾಪಾಡುವ ಕೆಲಸವೂ ಬಿಜೆಪಿಯಿಂದ ಆಗಿಲ್ಲ ಎಂದರು.

ತಿಪ್ಪೇಸ್ವಾಮಿ ಜತೆಗೆ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರೂ ಕಾಂಗ್ರೆಸ್ ಸೇರಿದರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ನೀಡದೇ ಮೊಳಕಾಲ್ಮೂರಿನಿಂದ ಬಿ.ಶ್ರೀರಾಮುಲು ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಇದರಿಂದ ಬಂಡಾಯ ಎದ್ದ ತಿಪ್ಪೇಸ್ವಾಮಿ ಬಿಜೆಪಿ ತೊರೆದಿದ್ದರು.

ಯೋಧರ ಹತ್ಯೆಯಲ್ಲಿ ಯಾರ ತಪ್ಪಿದೆ?

ಯೋಧರ ಹತ್ಯೆಯಲ್ಲಿ ಯಾರ ತಪ್ಪಿದೆ? ಬಿಜೆಪಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಹೋಗುತ್ತಿದೆ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಲು ಮುಂದಾದ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರನ್ನು ದಿನೇಶ್‌ ಗುಂಡೂರಾವ್‌ ತಕ್ಷಣವೇ ಸುಮ್ಮನಾಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT