ಪೌರಕಾರ್ಮಿಕರ ₹384 ಕೋಟಿ ಪಿಎಫ್, ಇಎಸ್‌ಐ ಹಣ ಗುಳುಂ: ಬಿಬಿಎಂಪಿ ಮೇಲೆ ಎಸಿಬಿ ದಾಳಿ

7

ಪೌರಕಾರ್ಮಿಕರ ₹384 ಕೋಟಿ ಪಿಎಫ್, ಇಎಸ್‌ಐ ಹಣ ಗುಳುಂ: ಬಿಬಿಎಂಪಿ ಮೇಲೆ ಎಸಿಬಿ ದಾಳಿ

Published:
Updated:
Prajavani

ಬೆಂಗಳೂರು: ಪೌರಕಾರ್ಮಿಕರ ಭವಿಷ್ಯ ನಿಧಿ, ಇಎಸ್‌ಐ ಬಾಬ್ತಿನ ₹ 384 ಕೋಟಿ ಹಾಗೂ ನಕಲಿ ಕಾರ್ಮಿಕರ ವೇತನದ ಹೆಸರಿನಲ್ಲಿ ₹ 550 ಕೋಟಿ ವಂಚಿಸಿರುವ ಪ್ರಕರಣದ ಸಂಬಂಧ ‘ಭ್ರಷ್ಟಾಚಾರ ನಿಗ್ರಹ ದಳ’ದ (ಎಸಿಬಿ) ಅಧಿಕಾರಿಗಳು ಗುರುವಾರ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯ ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆ ವಶಪಡಿಸಿಕೊಂಡಿದ್ದಾರೆ.

ಬೆಳಿಗ್ಗೆ ಅಧಿಕಾರಿಗಳ ತಂಡ ದಾಖಲೆಗಳನ್ನು ಜಾಲಾಡಿದೆ. ಈ ಸಂಬಂಧ ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷರು 2017ರ ಮಾರ್ಚ್‌ನಲ್ಲಿ ನೀಡಿದ್ದ ದೂರು ಆಧರಿಸಿ, ರಾಜ್ಯ ಸರ್ಕಾರ ಅದೇ ವರ್ಷದ ಅಕ್ಟೋಬರ್‌ 19ರಂದು ಎಸಿಬಿ ತನಿಖೆಗೆ ಆದೇಶಿಸಿತ್ತು. ಪಾಲಿಕೆಯ ಏಳು ಜಂಟಿ ಕಮಿಷನರ್‌, ಏಳು ಅಧೀಕ್ಷಕ ಎಂಜಿನಿಯರ್‌, ಇಬ್ಬರು ಕಾರ್ಯಪಾಲಕ ಎಂಜಿನಿಯರ್‌, 26 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಸಹಾಯಕ ಎಂಜಿನಿಯರ್‌ ಸೇರಿ 46 ಅಧಿಕಾರಿಗಳಿಗೆ ಒಂಬತ್ತು ಸಲ ಎಸಿಬಿ ನೋಟಿಸ್‌ ನೀಡಿತ್ತು. ಈ ನೋಟಿಸ್‌ಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ್ದರಿಂದ ದಾಳಿ ನಡೆಸಲಾಗಿದೆ.

ಬಿಬಿಎಂಪಿಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸಿಲ್ಲ. ವೇತನದಲ್ಲಿ ‍ಪಿಎಫ್‌, ಇಎಸ್‌ಐ ಹಣ ಕಡಿತಗೊಳಿಸಿದ್ದರೂ ಅವರ ವೈಯಕ್ತಿಕ ಖಾತೆಗೆ ಜಮಾ ಮಾಡದೆ ಅಕ್ರಮ ಎಸಗಲಾಗಿದೆ. ಅಲ್ಲದೆ, 6,600 ನಕಲಿ ಕಾರ್ಮಿಕರ ಹೆಸರಿನಲ್ಲಿ ವೇತನ ಪಡೆಯಲಾಗುತ್ತಿದೆ. 19 ಸಾವಿರ ಕಾರ್ಮಿಕರ ವೇತನದ ಲೆಕ್ಕ ಇಡಲಾಗಿದ್ದರೂ ವಾಸ್ತವದಲ್ಲಿ 12,400 ಮಂದಿ ಮಾತ್ರ ದುಡಿಯುತ್ತಿದ್ದಾರೆ ಎನ್ನಲಾಗಿದೆ. ಗುತ್ತಿಗೆ ಕಾರ್ಮಿಕರ ಭವಿಷ್ಯ ನಿಧಿಗೆ ಅವರ ವೇತನದ ಶೇ 12, ಮಾಲೀಕರ ಶೇ 13.61ರಷ್ಟು ಪಾಲು ಇರುತ್ತದೆ. ಇಎಸ್‌ಐಗೆ ಕಾರ್ಮಿಕರು ಶೇ1.75ರಷ್ಟು,ಮಾಲೀಕರಶೇ4.75 ರಷ್ಟು ತುಂಬಬೇಕು. ಗುತ್ತಿಗೆದಾರರ ಪಾಲನ್ನು ಬಿಬಿಎಂಪಿ ಪಾವತಿಸುತ್ತಿದೆ. ಆದರೆ, 2005ರಿಂದ ₹ 384ಕೋಟಿ ಕಟ್ಟದೆ ಅಕ್ರಮ ಎಸಗಲಾ ಗಿದೆ. ಇದಲ್ಲದೆ, 19 ವರ್ಷದಿಂದ 6,600 ನಕಲಿ ಕಾರ್ಮಿಕರ ವೇತನಕ್ಕೆ ₹ 550 ಕೋಟಿ ಎತ್ತುವಳಿ ಮಾಡಲಾಗಿದೆ. ಈ ಆರೋಪಗಳು  ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

‘ಬಯೊಮೆಟ್ರಿಕ್‌ ಅಳವಡಿಸಿಲ್ಲ’

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾವಿರಾರು ಪೌರ ಕಾರ್ಮಿಕರು ದುಡಿಯುತ್ತಿದ್ದರೂ ಬಯೊಮೆಟ್ರಿಕ್‌ ಅಳವಡಿಸದ ಬಗ್ಗೆ ಎಸಿಬಿ ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ.

ಸಾಫ್ಟ್‌ವೇರ್‌ ತಂತ್ರಜ್ಞಾನಕ್ಕೆ ಜಗತ್ತಿನಾದ್ಯಂತ ಬೆಂಗಳೂರು ಹೆಸರುವಾಸಿಯಾಗಿದೆ. ಆದರೆ, ಪಾಲಿಕೆಯಲ್ಲಿ ಕಾರ್ಮಿಕರ ಹಾಜರಾತಿ ದಾಖಲಿಸಲು ಈ ತಂತ್ರಜ್ಞಾನವನ್ನು ಏಕೆ ಅಳವಡಿಸಿಲ್ಲ ಎಂಬುದು ಮೂಲಗಳ ಪ್ರಶ್ನೆ.

ಬಯೊಮೆಟ್ರಿಕ್‌ ಅಳವಡಿಸಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನು ಮೂಲಗಳು ವ್ಯಕ್ತಪಡಿಸಿವೆ.

ರಿಯಲ್‌ಎಸ್ಟೇಟ್‌ ಉದ್ಯಮಗಳ ಮೇಲೆ ಐ.ಟಿ ದಾಳಿ

ಆದಾಯ ತೆರಿಗೆ ಅಧಿಕಾರಿಗಳು ನಗರದ ಕೆಲವು ಪ್ರತಿಷ್ಠಿತ ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬುಧವಾರದಿಂದ ಆರಂಭವಾಗಿರುವ ದಾಳಿ ಗುರುವಾರವೂ ಮುಂದುವರಿದಿದೆ. ವೈಟ್‌ಫೀಲ್ಡ್‌, ಅವಲಹಳ್ಳಿ, ಬೊಮ್ಮನಹಳ್ಳಿ ಒಳಗೊಂಡಂತೆ 15ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಉದ್ಯಮಿಗಳ ಆ‍ಪ್ತರು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ.

 

ಬರಹ ಇಷ್ಟವಾಯಿತೆ?

 • 9

  Happy
 • 3

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !