ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಟೆಂಡರ್‌: ರೈಲ್ವೆ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌

ಮೈಸೂರು– ಬೆಂಗಳೂರು ಮೇಲ್ಸೆತುವೆ ನಿರ್ಮಾಣ ಕಾಮಗಾರಿ
Last Updated 10 ಜನವರಿ 2020, 19:44 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು– ಬೆಂಗಳೂರು ನಡುವೆ ರೈಲ್ವೆ ಮೇಲ್ಸೆತುವೆ ಮತ್ತು ಕೆಳ ಸೇತುವೆ ನಿರ್ಮಾಣ ಕಾಮಗಾರಿ ಟೆಂಡರ್‌ಗಳನ್ನು ಕಂಪನಿಯೊಂದಕ್ಕೆಅಕ್ರಮವಾಗಿ ನೀಡಿರುವ ಆರೋಪದ ಮೇಲೆ ಅಂದಿನ ರೈಲ್ವೆ ಮುಖ್ಯ ಎಂಜಿನಿಯರ್‌ (ನಿರ್ಮಾಣ) ರವೀಂದ್ರನಾಥ ರೆಡ್ಡಿ ಅವರೂ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ ಎರಡು ಪ್ರಕರಣಗಳನ್ನು ದಾಖಲಿಸಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಇದೇ 7ರಂದು ದಾಖಲಿಸಿರುವ ಪ್ರಕರಣದಲ್ಲಿ ನೈರುತ್ಯ ರೈಲ್ವೆ ವಲಯ ಬೆಂಗಳೂರು ಕಂಟೋನ್ಮೆಂಟ್‌ನ ಉಪ ಮುಖ್ಯ ಎಂಜಿನಿಯರ್‌ (ನಿರ್ಮಾಣ) ಬನ್ಸೋಡೆ, ಕ್ರಿಷ್‌ ಇನ್‌ಫ್ರಾಟೆಕ್‌ ಕಂಪನಿಯ ಪಾಲುದಾರ ಸೂರ್ಯನಾರಾಯಣರೆಡ್ಡಿ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಅಕ್ರಮವಾಗಿ ಮಂಜೂರು ಮಾಡಲಾಗಿರುವ ಟೆಂಡರ್‌ಗಳಲ್ಲಿ ಇನ್ನೂ ಕೆಲವು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಪಾತ್ರವಿದೆ ಎಂದು ಆರೋಪಿಸಲಾಗಿದೆ.

ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಅಧಿಕಾರಿಗಳು ಕಂಪನಿಗೆ ನಿಗದಿಪಡಿಸಿದ ಮೊತ್ತಕ್ಕಿಂತಲೂ ಹೆಚ್ಚುವರಿ ಕಾಮಗಾರಿ ನಡೆಸಲು ಆದೇಶ ನೀಡಿದ್ದಾರೆ. ಆ ಮೂಲಕ ಆರೋಪಿಗಳು ಕಂಪನಿಗೆ ಅನಪೇಕ್ಷಿತ ಲಾಭ ಮಾಡಿಕೊಟ್ಟಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದೂರಲಾಗಿದೆ.

ಅದೇ ದಿನ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ, ಆರೋಪಿ ಕಂಪನಿಗೆ ರೈಲ್ವೆ ಮೇಲ್ಸೆತುವೆ ಮತ್ತು ಕೆಳ ಸೇತುವೆ ಟೆಂಡರ್‌ ಮಂಜೂರು ಮಾಡುವ ಉದ್ದೇಶದಿಂದ ₹76 ಕೋಟಿ ಮೊತ್ತದ ಟೆಂಡರ್‌ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕ್ರಿಷ್‌ ಕಂಪನಿ ₹50 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿ ಗುತ್ತಿಗೆ ಪಡೆಯುವ ಅರ್ಹತೆ ಹೊಂದಿರುವುದಿಲ್ಲ. ಕಾಮಗಾರಿ ತುಂಡರಿಸುವ ತೀರ್ಮಾನಕ್ಕೆ ಸಂಬಂಧಪಟ್ಟವರ ಅನುಮತಿ ಪಡೆದಿಲ್ಲ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಈ ಆರೋಪದಲ್ಲಿ ರವೀಂದ್ರನಾಥ ರೆಡ್ಡಿ, ಉಪ ಮುಖ್ಯ ಎಂಜಿನಿಯರ್‌ಗಳಾದ (ನಿರ್ಮಾಣ) ಶೆರ್ಫುದ್ದೀನ್‌, ಪಿ. ಮೋಹನನ್‌ ಅವರು ಕ್ರಿಷ್‌ ಇನ್‌ಫ್ರಾಟೆಕ್‌ ಕಂಪನಿ ಜತೆ ಸೇರಿ ಕಾಮಗಾರಿ ತುಂಡರಿಸಲು ಪಿತೂರಿ ಮಾಡಿದ್ದಾರೆ. ₹ 38.4 ಮತ್ತು ₹ 37.6 ಕೋಟಿ ಕಾಮಗಾರಿಗೆ ಒಪ್ಪಂದ ಮಾಡಿಕೊಂಡು ಬಳಿಕ ಇದನ್ನು ಕ್ರಮವಾಗಿ ₹54.2 ಹಾಗೂ ₹ 48.81ಕ್ಕೆ ಹೆಚ್ಚಿಸಲಾಗಿದೆ. ಇದಕ್ಕೂ ಮೇಲಧಿಕಾರಿಗಳ ಒಪ್ಪಿಗೆ ಪಡೆದಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ ಎಂದು ಸಿಬಿಐ ಎಸಿಬಿ ಹೇಳಿದೆ.

ಎಂಜಿನಿಯರ್‌ ಮನೆ ಶೋಧ

ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪಕ್ಕೆ ಒಳಗಾಗಿರುವ ನೈರುತ್ಯ ರೈಲ್ವೆ ವಲಯ ಮೈಸೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಘನಶ್ಯಾಂ ಪ್ರಧಾನ್‌ ಅವರ ಮನೆಯನ್ನು ಸಿಬಿಐ ಇತ್ತೀಚೆಗೆ ಶೋಧಿಸಿದೆ.

ಪ್ರಧಾನ್‌ ತಮ್ಮ ಹೆಸರಿನಲ್ಲಿ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಆದಾಯ ಮೀರಿ ₹ 2.25 ಕೋಟಿ ಮೌಲ್ಯದ ಹೆಚ್ಚುವರಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

ಏಕಕಾಲಕ್ಕೆ ಎಂಜಿನಿಯರ್‌ ಮನೆ, ಕಚೇರಿ ಸೇರಿದಂತೆ 16 ಸ್ಥಳಗಳಲ್ಲಿ ಶೋಧನೆ ನಡೆಸಲಾಗಿದ್ದು, ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT