ಸುಮಲತಾಗೆ ರಜನಿ, ಚಿರಂಜೀವಿ ಬೆಂಬಲ?

7
ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ

ಸುಮಲತಾಗೆ ರಜನಿ, ಚಿರಂಜೀವಿ ಬೆಂಬಲ?

Published:
Updated:

ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿರುವ ಅಂಬರೀಷ್‌ ಪತ್ನಿ ಸುಮಲತಾ ಅವರಿಗೆ ತಮಿಳು, ತೆಲುಗು ಚಿತ್ರರಂಗದ ಬೆಂಬಲ ಸಿಕ್ಕಿದೆ. ನಟರಾದ ರಜನಿಕಾಂತ್‌, ಕಮಲ ಹಾಸನ್‌, ಚಿರಂಜೀವಿ ಅವರು ಪ್ರಚಾರಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಮಲತಾ ಕಳೆದ ನಾಲ್ಕು ದಿನಗಳಿಂದ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರನ್ನು ಭೇಟಿಯಾಗಿ, ಮಾರ್ಗದರ್ಶನ ಪಡೆಯುತ್ತಿದ್ದಾರೆ. ಸುಮಲತಾ ಸ್ಪರ್ಧೆಯ ವಿಚಾರ ತಿಳಿದ ಚಿತ್ರನಟ, ಕಾಂಗ್ರೆಸ್‌ ಮುಖಂಡ ಚಿರಂಜೀವಿ ಕರೆಮಾಡಿ ಶುಭಾಶಯ ಕೋರಿದ್ದಾರೆ. ರಜನಿಕಾಂತ್‌, ಕಮಲ ಹಾಸನ್‌ ಅವರೂ ರಾಜಕಾರಣಕ್ಕೆ ಪದಾರ್ಪಣೆ ಮಾಡುತ್ತಿದ್ದು, ಸಕಲ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸುಮಲತಾ ಅವರು ಕನ್ನಡ, ತಮಿಳು, ತೆಲುಗು, ಮಲೆಯಾಳ, ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳು, ತೆಲುಗು ಕಿರುತೆರೆಯಲ್ಲಿ ಮನೆ ಮಾತಾಗಿದ್ದಾರೆ. ಹೀಗಾಗಿ ಅವರೆಲ್ಲರ ಬೆಂಬಲ ದೊರೆಯಲಿದ್ದು ಮಂಡ್ಯ ರಾಜಕಾರಣ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ನಟ–ನಟಿಯರ ಆಕರ್ಷಣೆಯ ಕೇಂದ್ರವಾಗಲಿದೆ.

ಇದನ್ನೂ ಓದಿ: ಸುಮಲತಾ ಮಂಡ್ಯದ ಗೌಡ್ತಿ ಅಲ್ಲ; ಆಂಧ್ರದ ಗೌಡ್ತಿ: ಕೆ.ಟಿ ಶ್ರೀಕಂಠೇಗೌಡ

‘ರಜನಿಕಾಂತ್‌ ಅವರನ್ನು ಅಂಬರೀಷ್‌ ಒಮ್ಮೆ ಮಂಡ್ಯಕ್ಕೆ ಆಹ್ವಾನಿಸಿದ್ದರು. ಇಲ್ಲಿಯ ಜನರು ಅಂಬಿ ಮೇಲಿಟ್ಟಿದ್ದ ಅಭಿಮಾನವನ್ನು ಕಣ್ಣಾರೆ ಕಂಡಿದ್ದಾರೆ. ಸುಮಲತಾ ಅವರಿಗೆ ರಜನಿಕಾಂತ್‌ ಕರೆ ಮಾಡಿ ಮಂಡ್ಯ ಜನರ ಅಭಿಮಾನವನ್ನು ನೆನಪು ಮಾಡಿಕೊಂಡಿದ್ದಾರೆ. ಸ್ಪರ್ಧೆ ಮಾಡಿದರೆ ಸಕಲ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿರುವ ಚಿರಂಜೀವಿ ಅವರೂ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ’ ಎಂದು ಅಂಬರೀಷ್‌ ಅಭಿಮಾನಿಗಳ ಸಂಘ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್‌ ಹೇಳಿದರು.

ಕೃಷ್ಣ ಭೇಟಿ: ಸುಮಲತಾ ಫೆ. 7ರಂದು ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಸಲಹೆ ಪಡೆಯಲಿದ್ದಾರೆ ಎನ್ನಲಾಗಿದೆ. ಆದರೆ ಈ ಭೇಟಿಯನ್ನು ಬೇರೆ ರೀತಿಯಲ್ಲೇ ಬಣ್ಣಿಸಲಾಗುತ್ತಿದೆ. ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಯಿಂದಾಗಿ ಸುಮಲತಾ ಸ್ಪರ್ಧಿಸುವ ಅವಕಾಶ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಆಗ ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ಹಾಕದಂತೆ ಕೃಷ್ಣ ಅವರಲ್ಲಿ ಮನವಿ ಮಾಡುವ ಉದ್ದೇಶದಿಂದ ಈ ಭೇಟಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮಂಡ್ಯದ ಮನೆಮಗಳು ಯಾರು? ಸುಮಲತಾರನ್ನು ಮತ್ತೆ ಕೆಣಕಿದ ಜೆಡಿಎಸ್

ಅಸ್ತ್ರಕ್ಕೆ ಪ್ರತ್ಯಸ್ತ್ರ: ಕಾಂಗ್ರೆಸ್‌ ಮುಖಂಡರು ‘ಸುಮಲತಾ’ ಹೆಸರಿನ ಅಸ್ತ್ರದೊಂದಿಗೆ ಕಣಕ್ಕಿಳಿಯುತ್ತಿದ್ದಂತೆ ಜೆಡಿಎಸ್ ಮುಖಂಡರು ‘ಲಕ್ಷ್ಮಿ ಅಶ್ವಿನ್‌ಗೌಡ’ ಹೆಸರಿನ ಪ್ರತ್ಯಸ್ತ್ರ ಹೂಡಿದ್ದಾರೆ. ಲೋಕಸಭಾ ಉಪಚುನಾವಣೆ ವೇಳೆ ಟಿಕೆಟ್‌ ವಂಚಿತರಾದ ನಂತರ ಅವರು ಅಜ್ಞಾತರಾಗಿ
ದ್ದರು. ಸುಮಲತಾ ಸ್ಪರ್ಧಿಸಿದರೆ ನಿಖಿಲ್‌ ಕುಮಾರಸ್ವಾಮಿ ಬದಲಿಗೆ ಲಕ್ಷ್ಮಿ ಅಶ್ವಿನ್‌ಗೌಡ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿ ಮುಖಂಡರು ಇದ್ದಾರೆ.

‘ನಾವು ಇಲ್ಲಿಯವರೆಗೂ ನಿಖಿಲ್‌ ಅಭ್ಯರ್ಥಿ ಎಂದೇ ತಿಳಿದಿದ್ದೇವೆ. ಮೇಲ್ಮಟ್ಟದಲ್ಲಿ ಯಾವ ನಿರ್ಧಾರವಾಗಿದೆ ಎಂಬ ವಿಚಾರ ಇನ್ನೂ ತಿಳಿದಿಲ್ಲ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

**

ಮುಖ್ಯಾಂಶಗಳು

* ಸುಮಲತಾಗೆ ಚಿತ್ರರಂಗದ ಗಣ್ಯರ ಮಾರ್ಗದರ್ಶನ

* ಕರೆ ಮಾಡಿ ಶುಭ ಕೋರಿದ ಸೂಪರ್‌ಸ್ಟಾರ್‌ ರಜನಿಕಾಂತ್‌

* ಸುಮಲತಾ ವಿರುದ್ಧ ಲಕ್ಷ್ಮಿ ಅಶ್ವಿನ್‌ ಗೌಡ ಸ್ಪರ್ಧೆ ಸಾಧ್ಯತೆ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !