ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಬೀಜ ವಿತರಣೆಗೆ ಹೆಚ್ಚುವರಿ ಕೇಂದ್ರ

ಕೊರೊನಾ ಹರಡುವ ಭೀತಿಯಿಂದ ಈ ಕ್ರಮ
Last Updated 4 ಜೂನ್ 2020, 3:31 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಮಾರಕ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಹಾಗೂ ಅಂತರ ಕಾಯ್ದುಕೊಳ್ಳಲು ಅನುವಾಗುವಂತೆ, ಬಿತ್ತನೆ ಬೀಜ ವಿತರಣೆಗೆ ಹೆಚ್ಚುವರಿ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಮುಂಗಾರು ಹಂಗಾಮು ಆರಂಭಕ್ಕೆ ಮುನ್ನವೇ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮೊದಲಾದ ಪರಿಕರಗಳ ಮಾರಾಟಕ್ಕೆ ಕ್ರಮ ವಹಿಸಲಾಗಿದೆ. ದಾಸ್ತಾನು ಪ್ರಕ್ರಿಯೆಯನ್ನು ಕೂಡ ಮುಂಚಿತವಾಗಿಯೇ ಮಾಡಲಾಗಿತ್ತು. ಇದರಿಂದಾಗಿ, ರೈತರು ಬೀಜ ಖರೀದಿಸಿ ಜಮೀನುಗಳಲ್ಲಿ ಮುಂಗಾರು ಬೇಸಾಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹೋದ ವರ್ಷ ಹಂಗಾಮಿನಲ್ಲಿ ನೆರೆ ಹಾಗೂ ಅತಿವೃಷ್ಟಿ ಕಾಣಿಸಿಕೊಂಡು ಅಪಾರ ನಷ್ಟ ಅನುಭವಿಸಿದ್ದರು. ಆ ನೋವನ್ನು ಮರೆತು ವರುಣ ಹಾಗೂ ಭೂತಾಯಿಯನ್ನು ನಂಬಿ ಕೃಷಿಗೆ ಮುಂದಾಗಿದ್ದಾರೆ. ಈ ಬಾರಿ ಆಶಾದಾಯಕ ಮುಂಗಾರಿನ ಮುನ್ಸೂಚನೆ ಇರುವುದು ಅವರ ಉತ್ಸಾಹ ಇಮ್ಮಡಿಗೊಳಿಸಿದೆ. ಜಿಲ್ಲೆಯ ಅಲ್ಲಲ್ಲಿ ಕೆಲವು ದಿನಗಳಿಂದ ಆಗಾಗ ಬೀಳುತ್ತಿರುವ ಮಳೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದೆ.

ಹೋದ ವಾರದಿಂದಲೇ ಆರಂಭ

ಈ ಹಂಗಾಮಿನಲ್ಲಿ 6.80 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆಯಿಂದ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಹೋಬಳಿಗೆ ಒಂದರಂತೆ ಇರುವ 35 ರೈತ ಸಂಪರ್ಕ ಕೇಂದ್ರಗಳು, 139 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಜೊತೆಗೆ ಹೆಚ್ಚುವರಿಯಾಗಿ 22 ಕೇಂದ್ರಗಳನ್ನು ಆರಂಭಿಸಲಾಗಿದೆ. ನಿಗದಿತ ಸೊಸೈಟಿ, ಸರ್ಕಾರಿ ಕಚೇರಿಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ರೈತರ ನೂಕುನುಗ್ಗಲು ತಪ್ಪಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಚಿಕ್ಕೋಡಿ (ನಿಪ್ಪಾಣಿ ಸೇರಿದಂತೆ) ತಾಲ್ಲೂಕಲ್ಲಿ ಹೋದ ವರ್ಷ 12 ಕೇಂದ್ರಗಳಿದ್ದವು. ಈ ಬಾರಿ 38ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರಗಳಲ್ಲಿ ಹೋದ ವಾರದಿಂದಲೇ ರಿಯಾಯಿತಿ ದರದಲ್ಲಿ ಬಿತ್ತನೆಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸೋಯಾ ಅವರೆ ಹೆಚ್ಚು

ಬೈಲಹೊಂಗಲ, ಹುಕ್ಕೇರಿ, ಬೆಳಗಾವಿ, ಚಿಕ್ಕೋಡಿ ತಾಲ್ಲೂಕುಗಳ ರೈತರು ಸೋಯಾಅವರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತುತ್ತಾರೆ. ಹೀಗಾಗಿ, 38ಸಾವಿರ ಕ್ವಿಂಟಲ್‌ ಬಿತ್ತನೆಬೀಜ ವಿತರಣೆಗೆ ಇಲಾಖೆಯಿಂದ ಗುರಿ ಹಾಕಿಕೊಳ್ಳಲಾಗಿದೆ. ಇಲಾಖೆಯಿಂದ ಖರೀದಿಸಿದರೆ ರಿಯಾಯಿತಿ ದರದಲ್ಲಿ ಸಿಗುತ್ತದೆ. ಖಾಸಗಿ ಅಗ್ರೊ ಅಂಗಡಿಗಳಲ್ಲೂ ಬಿತ್ತನೆ ಬೀಜಗಳು ಲಭ್ಯ ಇವೆ. ಕೆಲವು ರೈತರು, ತಾವೇ ಬೀಜ ಸಂರಕ್ಷಿಸಿ ಬಿತ್ತನೆಗೆ ಬಳಸುತ್ತಾರೆ. ಇಲಾಖೆಯ ಕೇಂದ್ರಗಳಲ್ಲಿ ಮಂಗಳವಾರದವರೆಗೆ ಶೇ 60ರಷ್ಟು ಸೋಯಾಅವರೆ ಬಿತ್ತನೆ ಬೀಜ ವಿತರಣೆ ಕಾರ್ಯ ನಡೆದಿದೆ.

‘5ರಿಂದ 6 ಹಳ್ಳಿಗಳಿಗೆ ಅನುಕೂಲವಾಗುವ ಗ್ರಾಮದಲ್ಲಿ ಹೆಚ್ಚುವರಿ ಕೇಂದ್ರ ಆರಂಭಿಸಲಾಗಿದೆ. ರೈತರು ಬಿತ್ತನೆಬೀಜ ಖರೀದಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆಯಲಿದೆ. ಕೆಲವು ದಿನಗಳಿಂದ ಮಳೆಯಾಗುತ್ತಿರುವುದು ಕೃಷಿಗೆ ಪೂರಕವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದರು.

ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿತರಣೆ ಮಾಹಿತಿ

ಬಿತ್ತನೆಬೀಜ;ಗುರಿ (ಕ್ವಿಂಟಲ್‌ಗಳಲ್ಲಿ)

ಸೋಯಾಬೀನ್;38ಸಾವಿರ

ಭತ್ತ;939

ಹೆಸರು;800

ಉದ್ದು;450

ತೊಗರಿ;300

ಹೈಬ್ರೀಡ್ ಜೋಳ;200

–––

ಕಕಮರಿಯ ಸಹಕಾರಿ ಸಂಘವನ್ನು ಬೀಜ ವಿತರಣೆ ಕೇಂದ್ರ ಮಾಡಿರುವುದರಿಂದ ಕಕಮರಿ, ಕೊಟ್ಟಲಗಿ, ರಾಮತೀರ್ಥ ಗ್ರಾಮಗಳ ರೈತರಿಗೆ ಅನುಕೂಲವಾಗಿದೆ
- ಮುತ್ತಣ್ಣ ಸಿಂದೂರ
ಕಕಮರಿ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT