ಭಾನುವಾರ, ಜುಲೈ 25, 2021
22 °C
ಜೂನ್‌ 19ಕ್ಕೆ ಕುಲಪತಿ ಕಾರ್ಯಭಾರ ಪೂರ್ಣ; ಹೂವಿನ ಹಾದಿಯಲ್ಲಿ ಕ್ರಮಿಸಿದ ಅನುಭವ

ವಿಜಯಪುರ: ಅಕ್ಕನ ನಾಮ ಚಿರಸ್ಥಾಯಿಗೊಳಿಸಿದ ಸಬಿಹಾ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಗುಮ್ಮಟ ನಗರಿ’ಯಲ್ಲಿ ತಲೆ ಎತ್ತಿ ನಿಂತಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯಕ್ಕೆ ಶರಣ ಪರಂಪರೆಯ ಶ್ರೇಷ್ಠ ಚೇತನ ಅಕ್ಕಮಹಾದೇವಿಯ ಹೆಸರನ್ನು ತಮ್ಮ ಅವಧಿಯಲ್ಲಿ ನಾಮಕರಣ ಮಾಡುವ ಮೂಲಕ ಕುಲಪತಿ ಪ್ರೊ.ಸಬಿಹಾ ಸ್ಮರಣೀಯರೆನಿಸಿದ್ದಾರೆ.

ಮಹಿಳಾ ಸಬಲೀಕರಣದ ಆದರ್ಶವನ್ನು ವಾಸ್ತವಕ್ಕೆ ತರುವಲ್ಲಿ ಶ್ರಮಿಸಿರುವ ಪ್ರೊ.ಸಬಿಹಾ ಅವರು ತಮ್ಮ ನಾಲ್ಕು ವರ್ಷಗಳ ಕಾರ್ಯಭಾರವನ್ನು ಜೂನ್‌ 19ರಂದು ಪೂರ್ಣಗೊಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ ಜೊತೆ ತಮ್ಮ ಅನುಭವವನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.

ವಿಶ್ವವಿದ್ಯಾಲಯದ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿನಿಯರು ಹಾಗೂ ಈ ಭಾಗದ ಜನಪ್ರತಿನಿಧಿಗಳು ಹಾಗೂ ನಾಗರಿಕರ ಸಹಕಾರದಿಂದ ಹೂವಿನ ಹಾದಿಯಲ್ಲಿ ಕ್ರಮಿಸಿದ ಅನುಭವವಾಗಿದೆ. ನಾಲ್ಕು ವರ್ಷ ತೃಪ್ತಿ, ಖುಷಿಯನ್ನು ಕೊಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕರಾವಳಿ ಮತ್ತು ವಿಜಯಪುರದ ನಡುವೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಾತಾವರಣ ವಿಭಿನ್ನವಾಗಿದ್ದರೂ ಇಲ್ಲಿ ಅನೇಕ ಒಳ್ಳೆಯ ಗುಣಗಳು ಕಂಡುಬಂದವು. ಇಂತಹ ಹತ್ತು ಹಲವು ಸಿಹಿ ನೆನಪುಗಳು ಹಾಗೂ ಧನ್ಯತೆಯ ಕ್ಷಣಗಳನ್ನು ಹೊತ್ತು ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ನನ್ನ ಮೂಲ ಹುದ್ದೆಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

ಪ್ರೊ. ಸಬಿಹಾ ಸಂದರ್ಶನದ ಪೂರ್ಣಪಾಠ ಇಂತಿದೆ

ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಸ್ನಾತಕೋತ್ತರ ಕೇಂದ್ರ ಹಾಗೂ ವಿಸ್ತರಣಾ ಕೇಂದ್ರವನ್ನು ನನ್ನ ಅವಧಿಯಲ್ಲಿ ಆರಂಭಿಸಲಾಗಿದೆ. ಲೀಲಾದೇವಿ ಆರ್‌. ಪ್ರಸಾದ್‌ ಅವರು ಎಂಟು ಎಕರೆ ಜಾಗವನ್ನು ವಿಸ್ತರಣಾ ಕೇಂದ್ರಕ್ಕೆ ನೀಡಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸರ್ಕಾರದಿಂದ ಸ್ನಾತಕೋತ್ತರ ಕೇಂದ್ರದ ಸ್ಥಾಪನೆಗೆ ಆರು ಎಕರೆ ಜಾಗ ದೊರೆತಿದೆ. ಈಗಾಗಲೇ ₹ 19 ಕೋಟಿ ಮೊತ್ತದಲ್ಲಿ ಸುಂದರ ಕಟ್ಟಡ ನಿರ್ಮಾಣವಾಗುತ್ತಿದೆ.

ಅಲ್ಲದೇ, ರಾಜ್ಯ ಸರ್ಕಾರದ ಸಹಕಾರದೊಂದಿಗೆ ಬೆಂಗಳೂರಿನ ಅದ್ದಿಗಾನಹಳ್ಳಿಯಲ್ಲಿ ರಾಜ್ಯದ ಹೆಣ್ಣುಮಕ್ಕಳಿಗಾಗಿ ಕೆಎಎಸ್‌, ಐಎಎಸ್‌ ಮುಂತಾದ ವಸತಿ ಸಹಿತ ತರಬೇತಿ ಕಾರ್ಯಗಳಿಗೆ ನಾಲ್ಕು ಎಕರೆ ಜಾಗ ದೊರೆತಿದ್ದು, ಮುಂದಿನ ದಿನಗಳಲ್ಲಿ ಕೋಚಿಂಗ್‌ ಕೇಂದ್ರ ಸ್ಥಾಪನೆಯಾಗಲಿರುವುದು ನನ್ನ ಅವಧಿಯಲ್ಲಿ ಆದ ಮುಖ್ಯ ಕಾರ್ಯ.

ಮಹಿಳಾ ವಿಶ್ವವಿದ್ಯಾಲಯದಲ್ಲಿ ನಿರ್ಣಯಾತ್ಮಕ ಹುದ್ದೆಗಳಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸುವ ಅಗತ್ಯವನ್ನು ಮನಗಂಡು ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ನನ್ನ ಅವಧಿಯಲ್ಲಿ ಮಹಿಳಾ ಕುಲಸಚಿವರ ನೇಮಕ ಆಗಿದೆ. ಆರ್ಥಿಕ ಅಧಿಕಾರಿ, ರೆಸಿಡೆಂಟ್‌ ಇಂಜಿನಿಯರ್‌ ಕೂಡಾ ಮಹಿಳೆಯರನ್ನು ನೇಮಕ ಮಾಡಿರುವುದು ಅಭಿಮಾನ ಉಂಟು ಮಾಡಿರುವ ಸಂಗತಿಯಾಗಿದೆ.

ಕ್ರೀಡಾ ನಿರ್ದೇಶಕರ ಹುದ್ದೆಯನ್ನು ಕೂಡ ಮಹಿಳಾ ಸಹಾಯಕ ಪ್ರಾಧ್ಯಾಪಕರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಈ ಮೂಲಕ ಮಹಿಳಾ ಸಬಲೀಕರಣದ ಆದರ್ಶವನ್ನು ನನ್ನ ಅವಧಿಯಲ್ಲಿ ವಾಸ್ತವಕ್ಕೆ ತರಲಾಗಿದೆ.

ವಿಶ್ವವಿದ್ಯಾಲಯದ ಆವರಣವನ್ನು ಅಂದಗೊಳಿಸುವ ಮತ್ತು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಸಾಧಕಿಯರ ಶಿಲ್ಪೋದ್ಯಾನವನ್ನು ಹಾಗೂ ಪಾರಂಪರಿಕ ಮನೆ, ಸಂಸ್ಕೃತಿಗಳ ತಾಣವನ್ನು ನಿರ್ಮಿಸಲಾಗಿದೆ.

ಸುಸಜ್ಜಿತ ಅತಿಥಿಗೃಹ, ವಿದ್ಯಾರ್ಥಿನಿ ನಿಲಯ, ಶೈಕ್ಷಣಿಕ ಸಮುದಾಯ ಭವನ ಮತ್ತು ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಸುಂದರ ಕೆರೆ ನಿರ್ಮಾಣ, ಇಟ್ಟಂಗಿಹಾಳ ಸಂಪರ್ಕಿಸುವ ರಸ್ತೆ ನಿರ್ಮಾಣ, ಅಂಬೇಡ್ಕರ್‌ ಕನ್ವೆನ್ಷನ್‌ ಹಾಲ್‌ ನಿರ್ಮಿಸಲಾಗಿದೆ. ಕ್ಯಾಂಪಸ್‌ನಲ್ಲಿ ವೈಫೈ ಸೌಲಭ್ಯವನ್ನು ಕಲ್ಪಿಸಲಾಗಿದೆ.

33 ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕರ ನೇಮಕಾತಿಯನ್ನು ನನ್ನ ಅವಧಿಯಲ್ಲಿ ಪಾರದರ್ಶಕವಾಗಿ ನೆರವೇರಿಸಲಾಗಿದೆ. ಇದು ವಿಶ್ವವಿದ್ಯಾಲಯದ ಎರಡನೇ ದೊಡ್ಡ ನೇಮಕಾತಿ ಪ್ರಕ್ರಿಯೆಯಾಗಿದೆ.

ವಿದ್ಯಾರ್ಥಿನಿಯರಿಗಾಗಿ ‘ಘನತೆಯ ಬದುಕು’ ಎಂಬ ಕಾರ್ಯಾಗಾರದ ಮೂಲಕ ಲಿಂಗತ್ವ ಸೂಕ್ಷ್ಮತೆ, ಮಾನವ ಹಕ್ಕುಗಳು, ಕೌಟುಂಬಿಕ ದೌರ್ಜನ್ಯ ತಡೆ ಕುರಿತಂತೆ ಅರಿವು ಮೂಡಿಸುವ ಕೆಲಸವನ್ನು ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗಿದೆ.

ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿ ಸ್ನಾತಕ ಪದವಿಗಳ ಭಾಷಾ ಮತ್ತು ಐಚ್ಛಿಕ ಪತ್ರಿಕೆಗಳನ್ನು ಮಹಿಳಾ ದೃಷ್ಟಿಕೋನದ ಹಿನ್ನೆಲೆಯಲ್ಲಿ ಆಮೂಲಾಗ್ರ ಪರಿಷ್ಕರಿಸಿ ವಿಶೇಷ ಅಧ್ಯಯನ ಮಂಡಳಿ ಸಭೆಯಲ್ಲಿ ಅಂಗೀಕರಿಸಿ ಪಠ್ಯಪುಸ್ತಕ ಮುದ್ರಿಸಲಾಗಿದೆ. ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಅಧ್ಯಾಪಕ ಬಂಧುಗಳ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು