ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ರೈತರಿಗೆ ಮಾರಕ: ರೈತರು, ವಿರೋಧಪಕ್ಷಗಳ ಆತಂಕ

ರೈತರು, ವಿರೋಧ ಪಕ್ಷದಿಂದ ವ್ಯಾಪಕ ವಿರೋಧ
Last Updated 12 ಮೇ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದು ರೈತರ ಪಾಲಿಗೆ ಮಾರಕ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಕೊರೊನಾ ಸೋಂಕಿನಿಂದಾಗಿ ತಾವು ಬೆಳೆದ ಬೆಳೆಗಳನ್ನು ಕೇಳುವವರಿಲ್ಲದೆ ರೈತ ಸಮುದಾಯ ಕಂಗಾಲಾಗಿದೆ. ಈ ಸಂದರ್ಭದಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಅವರು ಮಂಗಳವಾರ ಇಲ್ಲಿ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇದೇ 5ರಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು ಮಾದರಿ ಪತ್ರ ಕಳುಹಿಸುತ್ತೇವೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತನ್ನಿ ಎಂದು ಹೇಳಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು’ ಎಂದು ಹೇಳಿದರು.

‘ರೈತರಿಗೆ ಸಂಬಂಧಿಸಿದ ಕಾನೂನು ಮಾಡುವಾಗ ವಿಧಾನಸಭೆಯಲ್ಲಿ, ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಏಕಾಏಕಿ ಆದೇಶ ಹೊರಡಿಸಿದರೆ ಹೇಗೆ? ಸಂವಿಧಾನ ಪ್ರಕಾರ ಇದು ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯ. ನಿರ್ಧಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯಗಳ ವಿವೇಚನೆಗೆ ಬಿಡಬೇಕು’ ಎಂದರು.

‘ಲೂಟಿಗೆ ಅವಕಾಶ’

ಎಪಿಎಂಸಿ ಕಾಯ್ದೆಗೆ ತರುವ ತಿದ್ದುಪಡಿಗಳಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ವ್ಯವಸಾಯ ಮತ್ತು ರೈತಾಪಿ ಜನತೆಯನ್ನು ಮನಬಂದಂತೆ ಲೂಟಿ ಮಾಡಲು ನೆರವಾಗಲಿವೆ. ರಾಜ್ಯದ ಎಲ್ಲಾ ಎಪಿಎಂಸಿ ಗಳನ್ನು ನಾಶ ಮಾಡಲಿದೆ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜ ಹೇಳಿದ್ದಾರೆ.‌ ‘ತಿದ್ದುಪಡಿ ಕಾಯ್ದೆಯಿಂದ ಇಡೀ ಗ್ರಾಮೀಣ ಪ್ರದೇಶವಲ್ಲಿ ನಿರುದ್ಯೋಗ ಸೃಷ್ಟಿಯಾಗಲಿದೆ. ಸಣ್ಣ ಹಾಗೂ ಮದ್ಯಮ ವರ್ತಕ ಸಮುದಾಯಕ್ಕೆ ಸಂಕಷ್ಟ ತರಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ರೈತರ ಪಾಲಿನ ಮರಣ ಶಾಸನ’

ಇದು ರೈತರ ಮೇಲಿನ ಮರಣಶಾಸನ. ತಾವು ರೈತ ನಾಯಕ ಎಂದು ಹೇಳಿದ್ದ ಯಡಿಯೂರಪ್ಪ ಅವರು ಕೈಗೊಳ್ಳಬಹುದಾದ ನಿರ್ಧಾರವಂತೂ ಇದಲ್ಲವೇ ಅಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ರಾಜ್ಯಪಾಲರ ಅನುಮೋದನೆಗೆ ಕಳುಹಿಸಿರುವ ಸುಗ್ರೀವಾಜ್ಞೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ರೈತರಿಗಾಗಿಯೇ ಇರುವ ಮಾರುಕಟ್ಟೆ ಯನ್ನು ಅತಂತ್ರಗೊಳಿಸುವ ಈ ಕ್ರಮವನ್ನು ರೈತ ಸಂಘ ವಿರೋಧಿಸಲಿದೆ ಎಂದು ತಿಳಿಸಿದ್ದಾರೆ.


‘ಕಾಯ್ದೆ ಜಾರಿಗೆ ತರಾತುರಿ ಏಕೆ?‘

‘ಕೇಂದ್ರವನ್ನು ಮೆಚ್ಚಿಸಲು ಹೊರಟಿರುವ ರಾಜ್ಯ ಸರ್ಕಾರ ಎಪಿಎಂಸಿಗೆ ತರಾತುರಿಯಲ್ಲಿ ತಿದ್ದುಪಡಿ ತರಲು ಮುಂದಾಗಿದೆ. ಮಹಾರಾಷ್ಟ್ರದಂತೆ ಇಲ್ಲಿ ಕೂಡಾ ಸರ್ಕಾರಕ್ಕೆ ಹಿನ್ನಡೆಯಾಗುವುದು ನಿಶ್ಚಿತ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

‘ರೈತರ ಪಾಲಿಗೆ ಕಂಟಕವಾಗಿರುವ ಈ ತಿದ್ದುಪಡಿಯನ್ನು ವಿಧಾನಮಂಡಲದಲ್ಲಿ ಚರ್ಚೆ ಮಾಡಿಯೇ ಜಾರಿಗೆ ತನ್ನಿ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಯಿರಿ. ಸುಗ್ರೀವಾಜ್ಞೆಯ ಅಗತ್ಯ ಇಲ್ಲ’ ಎಂದು ಅವರು ಹೇಳಿದ್ದಾರೆ.‌

‘ಶೋಷಣೆ ನಿಶ್ಚಿತ’

‘ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರ ಶೋಷಣೆ ವ್ಯಾಪಕವಾಗಿ ಹೆಚ್ಚಾಗಲಿದೆ. ಏಪಿಎಂಸಿಗಳಿಗೆ ಆದಾಯ ಮತ್ತು ವ್ಯಾಪಾರವಿಲ್ಲದೆ ಹಾಗೂ ಅವುಗಳ ಅಗತ್ಯವಿಲ್ಲದೆ ಬಂದ್‌ ಆಗುವುದು ನಿಶ್ಚಿತ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

‘ರೈತರನ್ನು ವ್ಯವಸಾಯದಿಂದ ಹೊರದೂಡಲಿದೆ. ಕೃಷಿಯನ್ನು ಮತ್ತು ರಾಜ್ಯದ ಗ್ರಾಹಕ ಮಾರುಕಟ್ಟೆಯನ್ನು ನಿಧಾನವಾಗಿ ಕಾರ್ಪೋರೇಟ್ ಕುಳಗಳ ಕೈಗೆ ವರ್ಗಾಯಿಸಲಿದೆ‌’ ಎಂದು ಎಚ್ಚರಿಸಿದ್ದಾರೆ.

‘ರೈತರ ಪಾಲಿನ ಮರಣ ಶಾಸನ’

ಇದು ರೈತರ ಮೇಲಿನ ಮರಣಶಾಸನ. ತಾವು ರೈತ ನಾಯಕ ಎಂದು ಹೇಳಿದ್ದ ಯಡಿಯೂರಪ್ಪ ಅವರು ಕೈಗೊಳ್ಳಬಹುದಾದ ನಿರ್ಧಾರವಂತೂ ಇದಲ್ಲವೇ ಅಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ರಾಜ್ಯಪಾಲರ ಅನುಮೋದನೆಗೆ ಕಳುಹಿಸಿರುವ ಸುಗ್ರೀವಾಜ್ಞೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ರೈತರಿಗಾಗಿಯೇ ಇರುವ ಮಾರುಕಟ್ಟೆಯನ್ನು ಅತಂತ್ರಗೊಳಿಸುವ ಈ ಈ ಕ್ರಮವನ್ನು ರೈತ ಸಂಘ ವಿರೋಧಿಸಲಿದೆ ಎಂದು ತಿಳಿಸಿದ್ದಾರೆ.

***

ಉದ್ಯಮಿಗಳಿಂದ ದೊಡ್ಡ ಮಟ್ಟದ ಕಿಕ್‌ಬ್ಯಾಕ್‌ ಪಡೆದು ತಿದ್ದುಪಡಿ ತರಲು ಸರ್ಕಾರದಲ್ಲಿದ್ದವರು ಮುಂದಾಗಿದ್ದಾರೆ. ವಾಪಸ್ ಪಡೆಯದೇ ಇದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು.

– ಸಚಿನ್ ಮೀಗಾ, ಅಧ್ಯಕ್ಷ, ಕರ್ನಾಟಕ ಕಿಸಾನ್ ಕಾಂಗ್ರೆಸ್

***

ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಈ ಕಾಯ್ದೆ ಜಾರಿ ಮಾಡಲಾಗುತ್ತಿದೆ ಎಂಬ ಅನುಮಾನವಿದೆ. ತಿದ್ದುಪಡಿಯ ಸಾಧಕ–ಬಾಧಕ ಕುರಿತು ರೈತರೊಂದಿಗೆ ಚರ್ಚೆ ಮಾಡಬೇಕು

– ಕುರಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT