ಸೋಮವಾರ, ಜುಲೈ 26, 2021
22 °C

ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ಬಿಎಸ್‌ವೈಗೆ ‘ಗದ್ದುಗೆ’ ಉಳಿಸಿಕೊಳ್ಳುವ ಸವಾಲು

ಎಸ್. ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿದ್ದಿಗೆ ಬಿದ್ದು ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ‘ಕುರ್ಚಿ’ ಈಗ ಅಲುಗಾಡಲಾರಂಭಿಸಿದೆ.

ಯಡಿಯೂರಪ್ಪ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಚರ್ಚೆ ಈಗ ಬಿಜೆಪಿಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಪಾಡ್‌ಕಾಸ್ಟ್ ಕೇಳಿ:

ಇದಕ್ಕೆ ಮುಖ್ಯಕಾರಣ, ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಯಡಿಯೂರಪ್ಪ ಅವರ ಮಾತಿಗೆ ಕಿಮ್ಮತ್ತು ಸಿಕ್ಕಿಲ್ಲ. ಕರ್ನಾಟಕದ ಮಟ್ಟಿಗೆ ಪಕ್ಷದ ‘ವರಿಷ್ಠರು’ ಎಂದರೆ, ಬಿ.ಎಲ್‌.ಸಂತೋಷ್.‌ ಇವರ ನಿರ್ಣಯವೇ ಈಗ ಅಂತಿಮ ಎನ್ನುವ ಸ್ಪಷ್ಟ ಸಂದೇಶ ಸೋಮವಾರ ರವಾನೆಯಾಗಿದೆ ಎಂಬುದನ್ನು ಬಿಎಸ್‌ವೈ ಬಣ ಮತ್ತು ಸಂತೋಷ್‌ ಬಣ ಒಪ್ಪುತ್ತವೆ.

ಯಡಿಯೂರಪ್ಪ ಅವಧಿ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಅವರನ್ನು ‘ಗೌರವ’ಯುತವಾಗಿ ನಿವೃತ್ತಿಗೊಳಿಸುವ ಚರ್ಚೆ ಪಕ್ಷದಲ್ಲಿ ಕೆಲವು ತಿಂಗಳ ಹಿಂದೆಯೇ ಆರಂಭವಾಗಿತ್ತು. ಮುಂದಿನ ತಲೆಮಾರಿಗೆ ಅಧಿಕಾರ ಹಸ್ತಾಂತರಿಸಬೇಕು. ಬಿಎಸ್‌ವೈ ಅವರಾಗೇ ಬಿಟ್ಟುಕೊಟ್ಟರೆ ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡುವ ಇರಾದೆಯನ್ನು ವರಿಷ್ಠರು ಹೊಂದಿದ್ದಾರೆ ಎನ್ನುವ ಮಾತೂ ಚರ್ಚೆಯಲ್ಲಿದೆ.

ಆದರೆ, ಕೊರೊನಾ ಸಂಕಷ್ಟ ಯಡಿಯೂರಪ್ಪ ಅವರನ್ನು ಬಚಾವ್‌ ಮಾಡಿತು. ಯಡಿಯೂರಪ್ಪ ಅವರೂ ಉಳಿದ ಎರಡೂವರೆ ವರ್ಷ ಯಾವುದೇ ಸಮಸ್ಯೆ ಇಲ್ಲದೆ, ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಎಂಬ ಉಮೇದಿನಲ್ಲಿ ಇದ್ದಾರೆ.

ಈ ಮಧ್ಯೆ ಉತ್ತರ ಕರ್ನಾಟಕ ಭಾಗದ ಲಿಂಗಾಯತ ಶಾಸಕರು ಒಂದೆರಡು ಗೋಪ್ಯ ಸಭೆಗಳನ್ನು ನಡೆಸಿ, ಒಂದು ವೇಳೆ ವರಿಷ್ಠರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದರೆ. ಮುಖ್ಯಮಂತ್ರಿ ಹುದ್ದೆ ಲಿಂಗಾಯತ ಸಮುದಾಯಕ್ಕೆ ಸಿಗಬೇಕು. ಹೀಗಾಗಿ ಸಮುದಾಯದ ನಾಯಕರೊಬ್ಬರನ್ನೇ ಮುಖ್ಯಮಂತ್ರಿ ಮಾಡುವಂತೆ ವರಿಷ್ಠರನ್ನು ಒತ್ತಾಯಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

‘ಬಿಜೆಪಿ ಅಧಿಕಾರಕ್ಕೆ ಬಂದರೆ ಒಂದು ವರ್ಷದ ಮಟ್ಟಿಗೆ ಮಾತ್ರ ಮುಖ್ಯಮಂತ್ರಿ ಆಗಿರಬೇಕು. ಬಳಿಕ ಬಿಟ್ಟುಕೊಡಬೇಕು ಎಂಬ ಮಾತುಕತೆ ಆಗಿತ್ತು. ಅದಕ್ಕೆ ಯಡಿಯೂರಪ್ಪ ಅವರೂ ಒಪ್ಪಿಕೊಂಡಿದ್ದರು. ಈಗ ಒಂದು ವರ್ಷ ಮುಗಿದಿದೆ. ಹೀಗಾಗಿ ಅವರಾಗಿಯೇ ಬಿಟ್ಟುಕೊಡಬೇಕು. ಆಗ ಬೇರೆ ರೀತಿ ಸಂದೇಶ ಹೋಗುವುದಿಲ್ಲ’ ಎನ್ನುವುದು ಸಂತೋಷ್‌ ಬಣದಲ್ಲಿ ಗುರುತಿಸಿಕೊಂಡಿರುವ ಕೆಲವು ಮುಖಂಡರ ಪ್ರತಿಪಾದನೆ.

‘ರಾಜ್ಯಸಭೆ ಮತ್ತು ವಿಧಾನಪರಿಷತ್‌ ಚುನಾವಣೆಗಳು ಮುಗಿದ ಬಳಿಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸುವ ಪ್ರಕ್ರಿಯೆಗೆ ಹೆಚ್ಚಿನ ವೇಗ ಸಿಗುವುದು ಖಚಿತ. ಇನ್ನು ಎಷ್ಟು ಕಾಲ ಒಬ್ಬ ನಾಯಕನನ್ನೇ ನೆಚ್ಚಿಕೊಂಡಿರಬೇಕು. ಹೊಸ ಪೀಳಿಗೆಯವರು ಅಧಿಕಾರ ಹಿಡಿಯಬೇಕು’ ಎಂಬುದು ಅವರ ಖಚಿತ ನುಡಿಗಳು.

‘ಕಳೆದ ಒಂದು ವರ್ಷದಿಂದ ಸುಗಮವಾಗಿ ಆಡಳಿತ ನಡೆಸುವ ಸ್ಥಿತಿ ರಾಜ್ಯದಲ್ಲಿ ಇರಲಿಲ್ಲ. ಮಂತ್ರಿ ಮಂಡಲದ ಸದಸ್ಯರನ್ನು ಆಯ್ಕೆ ಮಾಡುವ ವಿಚಾರ, ಮೂವರು ಉಪಮುಖ್ಯಮಂತ್ರಿಗಳ ನೇಮಕ ಸೇರಿದಂತೆ ಬಹುತೇಕ ಸಂದರ್ಭಗಳಲ್ಲಿ ವರಿಷ್ಠರ ನಿರ್ಣಯವೇ ಅಂತಿಮವಾಗಿತ್ತು. ವಿಧಾನಸಭಾ ಚುನಾವಣೆ, ಲೋಕಸಭೆ ಚುನಾವಣೆ ಮತ್ತು ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಹೇಬರ(ಬಿಎಸ್‌ವೈ) ಮಾತಿಗೆ ಮನ್ನಣೆ ಸಿಗಲಿಲ್ಲ’ ಎಂಬುದು ಬಿಎಸ್‌ವೈ ಪರ ನಾಯಕರ ಅಭಿಪ್ರಾಯ.

‘ಕಳೆದ ಶನಿವಾರ ಪ್ರಮುಖರ ಸಭೆ ನಡೆದಾಗ ಈರಣ್ಣ ಮತ್ತು ಗಸ್ತಿ ಅವರ ಆಯ್ಕೆಯಾಗುವುದು ಸಂತೋಷ್‌ಗೆ ಗೊತ್ತಿತ್ತು. ಆದರೆ ಮುಖ್ಯಮಂತ್ರಿಯವರಿಗೆ ತಿಳಿಸುವ ಗೋಜಿಗೆ ಹೋಗಿಲ್ಲ’ ಎಂದೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು