ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ್: ದೆಹಲಿ ರಾಜಕಾರಣದ ಒಳಮನೆ ಹೊಕ್ಕ ವಿರಳ ಕನ್ನಡಿಗ

ಅನಂತ್‌ ವಿಧಿವಶ
Last Updated 12 ನವೆಂಬರ್ 2018, 20:20 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ರಾಜಕಾರಣದ ಒಳಮನೆ ಹೊಕ್ಕು ಪ್ರಭಾವಿಸಿದ ಕರ್ನಾಟಕದ ರಾಜಕಾರಣಿಗಳ ಸಂಖ್ಯೆ ಬೆರಳೆಣಿಕೆಯದು.

ಅದರಲ್ಲಿ ತಮ್ಮ ವೈಯಕ್ತಿಕ ಏಳಿಗೆ ಮತ್ತು ರಾಜಕಾರಣದ ಜೊತೆ ಜೊತೆಗೆ ಕನ್ನಡದ ನೆಲ-ಜಲ-ನುಡಿ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಹೃದಯಕ್ಕೆ ಹತ್ತಿರ ತೆಗೆದುಕೊಂಡು ಶ್ರಮಿಸಿದವರು ಇನ್ನೂ ವಿರಳ. ಅನಂತಕುಮಾರ್ ಈ ಮಾತಿಗೆ ಅಪವಾದ.

ಆಡಳಿತ ಪಕ್ಷದಲ್ಲಿರಲಿ, ವಿರೋಧಪಕ್ಷದಲ್ಲೇ ಕುಳಿತುಕೊಳ್ಳಲಿ ರಾಜ್ಯಕ್ಕೆ ಅನ್ಯಾಯ ಆಗುವುದನ್ನು ಅವರು ಸುಲಭಕ್ಕೆ ಸಹಿಸುತ್ತಿರಲಿಲ್ಲ.

ವಾಜಪೇಯಿ ಮಂತ್ರಿಮಂಡಲದ ಅತ್ಯಂತ ಪ್ರಭಾವಿ ಮಂತ್ರಿಗಳಲ್ಲಿ ಒಬ್ಬರಾಗಿದ್ದರು. ಉಪಪ್ರಧಾನಿ ಆಡ್ವಾಣಿ ಅವರ ವಿಶೇಷ ಕೃಪಾಕಟಾಕ್ಷ ಅವರ ಮೇಲಿತ್ತು. ರಾಜ್ಯದ ಹಿತಕ್ಕಾಗಿ ಪ್ರಧಾನಿ ಕಾರ್ಯಾಲಯವನ್ನು ಪ್ರಭಾವಿಸಬಲ್ಲ ಕೇಂದ್ರ ಮಂತ್ರಿಯೊಬ್ಬರನ್ನು ದೆಹಲಿಯಲ್ಲಿ ಹೊಂದಿರುವ ಮಹತ್ವ ಏನೆಂಬುದನ್ನು ಅವರು 1998-2004ರ ಅವಧಿಯಲ್ಲಿ ಪ್ರತ್ಯಕ್ಷವಾಗಿ ತೋರಿಸಿಕೊಟ್ಟರು.

ಒಂದೆಡೆ ಡಿಎಂಕೆ, ಮತ್ತೊಂದೆಡೆ ತೆಲುಗುದೇಶಂ ಪಾರ್ಟಿಯು ವಾಜಪೇಯಿ ಸರ್ಕಾರದ ಪ್ರಮುಖ ಆಧಾರಸ್ತಂಭಗಳಾಗಿದ್ದವು. ಅವುಗಳನ್ನು ಎದುರು ಹಾಕಿಕೊಳ್ಳುವುದು ಸುಲಭವಿರಲಿಲ್ಲ. ತಮಿಳುನಾಡಿನ ಜೊತೆ ಕಾವೇರಿ ವಿವಾದ ಭುಗಿಲೆದ್ದಿದ್ದ ದಿನಗಳಲ್ಲಿ ಕಾವೇರಿ ಜಲಾಶಯಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕರಾಳ ಶಾಸನದ ಹಲ್ಲು ಉಗುರುಗಳನ್ನು ಪ್ರಧಾನಿ ವಾಜಪೇಯಿ ಅವರ ಮನಒಲಿಸಿ ಕಳಚಿದ ಕೀರ್ತಿ ಅಂದು ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಮತ್ತು ಅವರ ಬೆನ್ನಿಗೆ ನಿಂತಿದ್ದ ನೀರಾವರಿ ತಜ್ಞ ರಾಜಕಾರಣಿ ಎಚ್.ಎನ್.ನಂಜೇಗೌಡ ಅವರಿಗೆ ಸಲ್ಲಬೇಕು.

ರಾಜ್ಯದ ಹಿತದ ಪ್ರಶ್ನೆ ಬಂದಾಗ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರವಿದ್ದರೂ ಅವರ ಸಹಕಾರದ ಬಾಗಿಲು ಸದಾ ತೆರೆದಿರುತ್ತಿತ್ತು. ಜೆ.ಎಚ್.ಪಟೇಲ್ ಅವರಿಂದ ಹಿಡಿದು ಎಸ್.ಎಂ.ಕೃಷ್ಣ, ಧರಂಸಿಂಗ್ ಅವರಂತಹ ಬಿಜೆಪಿ ಯೇತರ ಮುಖ್ಯಮಂತ್ರಿಗಳಿಂದ ಮೊದಲು
ಗೊಂಡು ಮೈತ್ರಿ ಸರ್ಕಾರದ ಕುಮಾರಸ್ವಾಮಿ, ಬಿಜೆಪಿ ಸರ್ಕಾರದ ಬಿ.ಎಸ್‌.ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಎಲ್ಲರ ಸರ್ಕಾರಗಳಿಗೂ ಅವರ ತೆರೆಮರೆಯ ಸಲಹೆ ಸಹಕಾರ ಧಾರಾಳ ಲಭ್ಯವಿತ್ತು.

1996ರಲ್ಲಿ ಮೊದಲ ಸಲ ಲೋಕಸಭೆಗೆ ಆರಿಸಿ ಬಂದ ಅನಂತಕುಮಾರ್, ಲೋಕಸಭೆಯಲ್ಲಿ ಮುಂದಿನ ಆಸನಗಳಲ್ಲಿ ಕುಳಿತು ಮಾತನಾಡಿ ಗಮನ ಸೆಳೆದ ರಾಜಕಾರಣಿ.

ಹಿಂದಿಯೇ ಮೆರೆದಾಡುವ ದೆಹಲಿ ರಾಜಕಾರಣದಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಸಂಸದರಿಗೆ ಭಾಷೆಯೇ ದೊಡ್ಡ ಅಡಚಣೆ. ಬಾಯಿ ಕಟ್ಟಿ ಹೋಗುತ್ತದೆ. ಆದರೆ ಅನಂತಕುಮಾರ್ ಈ ಮಿತಿಯನ್ನು ಪ್ರಯತ್ನಪೂರ್ವಕವಾಗಿ ಮೀರಿ ಗೆದ್ದರು. ವಾಜಪೇಯಿ ಸರ್ಕಾರದ ಮಂತ್ರಿಯಾಗಿ ಅನತಿ ಕಾಲದಲ್ಲೇ ಪಕ್ಷದೊಳಗಿನ ತಮ್ಮ ರಾಜಕೀಯ ಪ್ರತಿಸ್ಪರ್ಧಿ ಧನಂಜಯ ಕುಮಾರ್ ಅವರನ್ನು ಹಿಂದೆ ಹಾಕಿದರು.

ಕ್ಲಿಷ್ಟ ವಿಷಯಗಳನ್ನು ಚುರುಕಾಗಿ ಗ್ರಹಿಸುವ ಪ್ರತಿಭೆ ಅವರಿಗಿತ್ತು. ನಾಗರಿಕ ವಿಮಾನಯಾನ ಖಾತೆಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊಟ್ಟಮೊದಲ ಪತ್ರಿಕಾಗೋಷ್ಠಿಯಲ್ಲೇ ಆ ವಿಷಯ ಕುರಿತು ಅವರು ಪ್ರದರ್ಶಿಸಿದ ಆಳದ ತಿಳಿವಳಿಕೆ ಅಪರೂಪದ್ದು.

ನಗರಾಭಿವೃದ್ಧಿ, ಸಂಸ್ಕೃತಿ- ಪ್ರವಾಸೋದ್ಯಮ ಮಂತ್ರಿಯಾಗಿ ತಮ್ಮ ಪ್ರಭಾವವನ್ನು ಗಟ್ಟಿ ಮಾಡಿಕೊಳ್ಳುತ್ತಲೇ ಬೆಳೆದರು. ಯಶಸ್ಸಿನ ನಡುವೆ ಎಡವಿ ಆಪಾದನೆಗಳು- ವಿವಾದಗಳನ್ನು ಮೈಮೇಲೆ ಎಳೆದುಕೊಂಡರು.

ನವದೆಹಲಿಯಲ್ಲಿ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ವಾಜಪೇಯಿ, ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರೊಂದಿಗೆ ಅನಂತಕುಮಾರ್.
ನವದೆಹಲಿಯಲ್ಲಿ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ವಾಜಪೇಯಿ, ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರೊಂದಿಗೆ ಅನಂತಕುಮಾರ್.

ಹುಡ್ಕೋ ಹಗರಣ- ನೀರಾ ರಾಡಿಯಾ ಗೌಜುಗಳಲ್ಲಿ ಸಿಲುಕಿದ್ದುಂಟು. ಸದಾ ಅವರ ತಲೆ ಕಾಯ್ದ ಬಿಜೆಪಿಯ ಮಹಾರಥಿ ಲಾಲ್ ಕೃಷ್ಣ ಆಡ್ವಾಣಿ ಅವರ ಪ್ರಭಾವ-ಸಾಮರ್ಥ್ಯಗಳು ಕ್ಷೀಣಿಸಿದ ವಿದ್ಯಮಾನ ಅನಂತ್ ಮೇಲೂ ಪ್ರತಿಫಲಿಸಿತ್ತು. ಪಕ್ಷದ ಒಳ-ಹೊರಗೆ ನರೇಂದ್ರ ಮೋದಿ ಪ್ರಬಲವಾಗಿ ಹೊರಹೊಮ್ಮಿ ಆಡ್ವಾಣಿ ಮೂಲೆಗುಂಪಾಗುತ್ತಿದ್ದಂತೆ ಅನಂತ್ ಕೂಡ ಪಾಳೆಯ ಬದಲಿಸಿದರು. ಆದರೆ ಆಡ್ವಾಣಿ ಅವರೊಂದಿಗೆ ಬಹುಕಾಲ ಗುರುತಿಸಿಕೊಂಡಿದ್ದ ಅನಂತ್ ಕುಮಾರ್ ಗೆ ಮೋದಿ ವಿಶ್ವಾಸ ಸಂಪೂರ್ಣವಾಗಿ ದೊರೆಯಲೇ ಇಲ್ಲ.

ಸದಾನಂದಗೌಡರಿಗೆ ರೈಲ್ವೆಯಂತಹ ಬೃಹತ್ ಖಾತೆಯನ್ನು ನೀಡಿ, ಅನಂತ್ ಅವರಿಗೆ ರಾಸಾಯನಿಕ- ರಸಗೊಬ್ಬರ ಖಾತೆ ನೀಡಿದ ಮೋದಿಯವರ ನಡೆ ಕುರಿತು ರಾಜಕೀಯ ವಲಯದ ಹುಬ್ಬುಗಳು ಮೇಲೇರಿದ್ದವು.

ಮುಖ್ಯಮಂತ್ರಿಯಾಗುವ ಗುಪ್ತ ಆಕಾಂಕ್ಷೆಯನ್ನು ಅನಂತ್ ಹೊಂದಿದ್ದು ಸುಳ್ಳಲ್ಲ. ಅಂತಹ ಯೋಗ್ಯತೆಯನ್ನೂ ಅವರು ಗಳಿಸಿಕೊಂಡಿದ್ದರು. ಪರಿಣಾಮವಾಗಿ ರಾಜ್ಯದಲ್ಲಿ ಎರಡು ಅಧಿಕಾರ ಕೇಂದ್ರಗಳು ತಲೆಯೆತ್ತಿದ್ದವು. ರಾಜ್ಯ ರಾಜಕಾರಣದಲ್ಲಿ ಅವರ ಒಂದು ಕಾಲದ ಗುರು ಯಡಿಯೂರಪ್ಪ ಅವರು ಅನಂತ್ ವಿರುದ್ಧ ನಿಂತರು.

ಕಡೆಗೆ ಬಿಜೆಪಿ ವರಿಷ್ಠರು ಪಂಚಾಯಿತಿ ನಡೆಸಿ ರಾಜ್ಯವನ್ನು ಯಡಿಯೂರಪ್ಪ ಅವರಿಗೂ ಕೇಂದ್ರವನ್ನು ಅನಂತ್‌ ಅವರಿಗೂ ಹಂಚಿಕೊಟ್ಟರು. ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡದಂತೆ ಅನಂತ್‌ಗೆ ತಾಕೀತು ಮಾಡಿದ್ದುಂಟು. ಆದರೆ ಈ ಮುಸುಕಿನ ಗುದ್ದಾಟ ನಿಲ್ಲಲಿಲ್ಲ. ಪಕ್ಷ ಬಿಟ್ಟ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನಗಳಿಗೆ ಆಡ್ವಾಣಿ-ಅನಂತ್-ಸುಷ್ಮಾ ಸ್ವರಾಜ್ ಅವರು ಸುಲಭಕ್ಕೆ ಒಪ್ಪಲಿಲ್ಲ.

ಈ ಕುರಿತು ಅವರ ಮನಸ್ಸುಗಳು ಮೆತ್ತಗಾಗುವ ಹೊತ್ತಿಗೆ ಮೋದಿಯವರ ರಂಗಪ್ರವೇಶ ಆಗಿತ್ತು. ಮರುಪ್ರವೇಶಕ್ಕೆ ಈ ತ್ರಿಮೂರ್ತಿಗಳ ಮರ್ಜಿ ಕಾಯುವ ಅಗತ್ಯ ಯಡಿಯೂರಪ್ಪನವರಿಗೆ ತೀರಿ ಹೋಗಿತ್ತು. ಇದೆಲ್ಲದರ ನಡುವೆ ರಾಜ್ಯ ಬಿಜೆಪಿಯ ದೆಹಲಿ ವ್ಯವಹಾರಗಳಿಗೆ ಅನಂತ್ ಅಧಿಕೃತ ನಿವಾಸವೇ ಕೇಂದ್ರವಾಗಿತ್ತು. ಎಲ್ಲ ಚರ್ಚೆಗಳು-ಸಮಾಲೋಚನೆಗಳು ಇಲ್ಲಿಯೇ ಹರಳುಗಟ್ಟುತ್ತಿದ್ದವು.

ಅಕಾಲ ಸಾವಿಗೆ ತುತ್ತಾಗಿರುವ ಅನಂತಕುಮಾರ್, ಈದ್ಗಾ ಮೈದಾನದ ರಾಜಕಾರಣ ನಡೆಸಿದರೂ ಕಟ್ಟರ್ ಹಿಂದುತ್ವ
ವಾದಿ ಅಥವಾ ಉಗ್ರಕೋಮುವಾದಿ ಆಗಿರಲಿಲ್ಲ. ಅವರು ತೆರವು ಮಾಡಿರುವ ಉದಾರಮುಖಿ ಬಿಜೆಪಿ ನಾಯಕನ ಜಾಗವನ್ನು ಮುಂಬರುವ ದಿನಗಳಲ್ಲಿ ಕಟ್ಟರ್ ವಾದಿ ಮುಖಗಳು ತುಂಬಿದರೆ ಆಶ್ಚರ್ಯಪಡಬೇಕಿಲ್ಲ.

ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ತಿವ ಶರೀರ ಮುಂದೆ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ಮಗಳು ಮತ್ತಿತರರು ಇದ್ದರು –ಪ್ರಜಾವಾಣಿ ಚಿತ್ರ/ಚಂದ್ರಹಾಸ ಕೋಟೆಕಾರ್‌
ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ತಿವ ಶರೀರ ಮುಂದೆ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ಮಗಳು ಮತ್ತಿತರರು ಇದ್ದರು –ಪ್ರಜಾವಾಣಿ ಚಿತ್ರ/ಚಂದ್ರಹಾಸ ಕೋಟೆಕಾರ್‌

ಅನಂತ್‌ ವಿಧಿವಶ

ಬೆಂಗಳೂರು:ಕೇಂದ್ರದ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತ್‌ ಕುಮಾರ್ (59) ಸೋಮವಾರ ಬೆಳಗಿನ ಜಾವ ನಿಧನರಾದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮೊದಲು ಲಂಡನ್‌ ಮತ್ತು ನ್ಯೂಯಾರ್ಕ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅವರಿಗೆ ಪತ್ನಿ ತೇಜಸ್ವಿನಿ, ಪುತ್ರಿಯರಾದ ಐಶ್ವರ್ಯಾ ಮತ್ತು ವಿಜೇತಾ ಇದ್ದಾರೆ.

ಅಂತಿಮ ಸಂಸ್ಕಾರ ಇಂದು: ಸೋಮವಾರ ಬಸವನಗುಡಿಯ ಅವರ ಮನೆ ‘ಸುಮೇರು’ನಲ್ಲಿ ಅನಂತ್‌ ಕುಮಾರ್‌ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ನ.13ರಂದು ಬೆಳಿಗ್ಗೆ 8ಕ್ಕೆ ಮಲ್ಲೇಶ್ವರದ ಬಿಜೆಪಿ ಕಚೇರಿಗೆ (ಜಗನ್ನಾಥ ಭವನ) ಪಾರ್ಥಿವ ಶರೀರವನ್ನು ತರಲಾಗುವುದು. ಬೆಳಿಗ್ಗೆ 10ಕ್ಕೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಾರ್ವಜನಿಕದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಮಧ್ಯಾಹ್ನ 1ಕ್ಕೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT