ಭಾನುವಾರ, ಫೆಬ್ರವರಿ 28, 2021
31 °C
ನಿತ್ಯ ಚಟುವಟಿಕೆ ‘ಸ್ನೇಹಾ’ ಆ್ಯಪ್‌ನಲ್ಲಿ ದಾಖಲು

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯದ ಅಂಗನವಾಡಿ ಕೇಂದ್ರಗಳ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಗಣಕೀಕೃತಗೊಳಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ವಿತರಿಸಲು ನಿರ್ಧರಿಸಿದೆ.

ಇಲಾಖೆಯು ಪೋಷಣೆ ಅಭಿಯಾನದಡಿ ರಾಜ್ಯದ ಅಂಗನವಾಡಿ ಕೇಂದ್ರಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತರಲು ಯೋಜನೆ ಸಿದ್ಧಪಡಿಸಿದೆ. ಇದಕ್ಕಾಗಿ ‘ಸ್ನೇಹಾ’ ಆ್ಯಪ್‌ ರೂಪಿಸಿದೆ.

ಸದ್ಯ ಅಂಗನವಾಡಿ ಕಾರ್ಯಕರ್ತೆಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಮಾತೃಪೂರ್ಣ, ಮಾತೃ ವಂದನ, ಮಾತೃಶ್ರೀ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಕೇಂದ್ರದ ಪ್ರತಿನಿತ್ಯದ ಆಗುಹೋಗುಗಳ ಕುರಿತು ಸುಮಾರು 40 ಬಗೆಯ ಕಡತಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಕಾರ್ಯಕರ್ತರ ಮತ್ತು ಅಧಿಕಾರಿಗಳ ಕಾರ್ಯ ಒತ್ತಡ ತಗ್ಗಿಸಲು ಹಾಗೂ ಅಂಗನವಾಡಿ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಇಲಾಖೆಯು ಅಂಗನವಾಡಿಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತರಲು ಮುಂದಾಗಿದೆ.

ಸರ್ವರ್‌ನಲ್ಲಿ ದಾಖಲು

ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್‌ ಮೂಲಕ ದಾಖಲಿಸುವ ಪ್ರತಿ ವಿವರವು ಇಲಾಖೆಯ ಕೇಂದ್ರ ಕಚೇರಿಯ ಸರ್ವರ್‌ನಲ್ಲಿ ಅಡಕವಾಗುತ್ತದೆ. ಈ ದತ್ತಾಂಶವನ್ನು ರಾಜ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಕುಳಿತಲ್ಲೇ ಪರಾಮರ್ಶಿಸಬಹುದು.

ಪ್ರತ್ಯೇಕ ಪಾಸ್‌ವರ್ಡ್‌: ಅಧಿಕಾರಿಗಳು ಹಾಗೂ ಮೇಲ್ವಿಚಾರಕರಿಗೆ ಸ್ನೇಹಾ ಆ್ಯಪ್‌ನ ಬಳಕೆಗೆ ಪ್ರತ್ಯೇಕ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ. ಈಗಾಗಲೇ ಮೇಲ್ವಿಚಾರಕರಿಗೆ ಟ್ಯಾಬ್‌ ವಿತರಿಸಲಾಗಿದ್ದು, ಅವರು ಟ್ಯಾಬ್‌ ಮೂಲಕವೇ ಮಕ್ಕಳ ಆಧಾರ್‌ ಸಂಖ್ಯೆ ಜೋಡಣೆ ಹಾಗೂ ಅಂಗನವಾಡಿಗಳನ್ನು ಜಿಪಿಎಸ್‌ ಜಾಲಕ್ಕೆ ಸಂಪರ್ಕಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಜ್ಯದಲ್ಲಿ ಸದ್ಯ 66 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಮೊದಲ ಹಂತದಲ್ಲಿ 19 ಜಿಲ್ಲೆ ಹಾಗೂ ಎರಡನೇ ಹಂತದಲ್ಲಿ ಉಳಿದ 11 ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ಸಿಗಲಿದೆ. ಮೊಬೈಲ್‌ ಜತೆಗೆ ಸಿಮ್ ಕಾರ್ಡ್‌ ಸಹ ನೀಡಲಿದ್ದು, ಇಂಟರ್‌ನೆಟ್‌ ಸೇವಾ ವೆಚ್ಚವನ್ನು ಇಲಾಖೆಯೇ ಭರಿಸಲಿದೆ.

ಯಾವ ಜಿಲ್ಲೆಯಲ್ಲಿ ವಿತರಣೆ?

ಬಾಗಲಕೋಟೆ, ಬಳ್ಳಾರಿ, ಬೀದರ್‌, ದಾವಣಗೆರೆ, ಹಾವೇರಿ, ಕೊಪ್ಪಳ, ಯಾದಗಿರಿ, ವಿಜಯಪುರ, ಕಲಬುರ್ಗಿ, ಬೆಳಗಾವಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಕೊಡಗು, ಕೋಲಾರ, ರಾಯಚೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ವಿತರಣೆಯಾಗಲಿದೆ.

* ಜಿಲ್ಲೆಯ 2,061 ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ವಿತರಿಸಲಾಗುತ್ತದೆ.ಕಾರ್ಯಕರ್ತೆಯರು ನೂತನ ಆ್ಯಪ್‌ನಲ್ಲೇ ಕಾರ್ಯ ಚಟುವಟಿಕೆ ವಿವರ ದಾಖಲಿಸುತ್ತಾರೆ.
-ಸೌಮ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೋಲಾರ ಜಿಲ್ಲಾ ಉಪನಿರ್ದೇಶಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು