ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಸಂಸ್ಕೃತಿ ವಿರೋಧಿ ನೀತಿ

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಆರೋಪ
Last Updated 1 ಜೂನ್ 2019, 18:42 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುವ ಅನುದಾನವನ್ನು ಕಡಿತಗೊಳಿಸುವ ಮೂಲಕ ಸಂಸ್ಕೃತಿ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀಕೃಷ್ಣ ಸುವರ್ಣಗೋಪುರ ಸಮರ್ಪಣೋತ್ಸವದ ಅಂಗವಾಗಿ ಉಡುಪಿ ಶ್ರೀ ಕೃಷ್ಣಮಠ ರಾಜಾಂಗಣದಲ್ಲಿ ಶನಿವಾರ ನಡೆದ ಕಲಾವಿದರ ಸಮಾವೇಶದಲ್ಲಿ ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಲೆ ಹಾಗೂ ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡಬೇಕೆಂಬ ಧೋರಣೆ ಇದೆ. ಆದರೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲಾಖೆಗೆ ಕೊಡುವ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ. ಕಳೆದ ವರ್ಷ ಇಲಾಖೆಗೆ ₹397 ಕೋಟಿ ಅನುದಾನ ನೀಡಬೇಕಿತ್ತು. ಆದರೆ ರೈತರ ಸಾಲಮನ್ನಾದ ನೆಪದಲ್ಲಿ ₹100 ಕೋಟಿ ಕಡಿತಗೊಳಿಸಲಾಗಿತ್ತು. ಈ ವರ್ಷವೂ ₹13 ಕೋಟಿಯಷ್ಟು ಕಡಿಮೆ ಮಾಡಿದ್ದಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಇಲಾಖೆಗೆ ಕೊಡಬೇಕಾಗಿರುವ ಅನುದಾನಕ್ಕೆ ಸರ್ಕಾರ ಕತ್ತರಿ ಹಾಕುತ್ತಿದೆ ಎಂದು ದೂರಿದರು.

ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನಕ್ಕೆ ಕತ್ತರಿ ಹಾಕಿದರೆ, ಇಲಾಖೆಯು ಅದನ್ನು ಯಕ್ಷಗಾನ ಅಕಾಡೆಮಿ ಮೇಲೆ ಹೊರೆಹಾಕಿದೆ. ಹಾಗಾಗಿ ಪ್ರತಿ ವರ್ಷ ಅಕಾಡೆಮಿಗೆ ಬರುತ್ತಿದ್ದ ₹1.10 ಕೋಟಿಯಷ್ಟು ಹಣ ಕಡಿತಗೊಂಡಿದೆ. ಈಗ ₹80 ಲಕ್ಷ ಮಾತ್ರ ಬರುತ್ತಿದೆ. ಇದರಲ್ಲಿ ಆಡಳಿತಾತ್ಮಕ ವೆಚ್ಚವನ್ನು ಕಳೆದರೆ, ₹38ಲಕ್ಷ ಉಳಿಯುತ್ತದೆ. ಇದರಲ್ಲಿ ರಾಜ್ಯದಾದ್ಯಂತ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾದ ಅನಿವಾರ್ಯತೆ ಅಕಾಡೆಮಿಗೆ ಎದುರಾಗಿದೆ ಎಂದು ಪ್ರೊ.ಹೆಗಡೆ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT