ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರಿಂದ ‘ವಿಧಾನಸೌಧ ಚಲೋ’ 12ಕ್ಕೆ

Last Updated 8 ಜುಲೈ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ನಿರ್ದಿಷ್ಟ ಗೌರವಧನ ನಿಗದಿ ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ 12ಕ್ಕೆ ‘ವಿಧಾನಸೌಧ ಚಲೋ’ ನಡೆಸುವುದಾಗಿ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹10 ಸಾವಿರ ಗೌರವ ಧನ ನಿಗದಿ ಪಡಿಸಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಈ ಹಿಂದೆ ನೀಡುತ್ತಿದ್ದ ಪ್ರೋತ್ಸಾಹಧನವನ್ನೂ ಕಡಿತ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತೆಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ’ ಎಂದು ಅವರು ದೂರಿದರು.

‘ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಿದರೂ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ಮೌನವಾಗಿದೆ. ಸರ್ಕಾರದ ಗಮನ ಸೆಳೆಯಲು ಜುಲೈ 12ರಂದು ಬೆಳಿಗ್ಗೆ 11.30ಕ್ಕೆ ನಗರದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಪ್ರತಿಭಟನೆ ನಡೆಸಲಿದ್ದೇವೆ. ಇದಕ್ಕೆ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌ (ಸಿಐಟಿಯು) ಬೆಂಬಲ ಸೂಚಿಸಿದೆ. ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಇಲಾಖೆಯ ಅಧಿಕಾರಿಗಳು ನಮ್ಮ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಾರೆ. ಅಧಿಕಾರಿಗಳು ಮಾಡಬೇಕಾದ ಕೆಲಸಗಳನ್ನು ನಮ್ಮಿಂದ ಮಾಡಿಸಿಕೊಳ್ಳುತ್ತಾರೆ. ನಮ್ಮ ಸ್ಥಿತಿಇಂದಿಗೂ ಅತಂತ್ರವಾಗಿದೆ. ನಿಗದಿತ ಸಂಬಳವೆಂಬುದೇ ಇಲ್ಲ’ ಎಂದು ಆಶಾ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡರು.

‘ಅವಿವಾಹಿತ ಆಶಾ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಿದೆ. ಕುಷ್ಠರೋಗ ಶಂಕಿತ ಪುರುಷರನ್ನು ತಪಾಸಣೆ ಮಾಡಲು ನಮಗೆ ಹೇಳುತ್ತಾರೆ. ತಪಾಸಣೆ ವೇಳೆ ಅವರಿಗೆ ಬಟ್ಟೆ ತೆಗೆಯುವಂತೆ ಹೇಳಬೇಕು. ಈ ವೇಳೆ ನಮಗೆ ರಕ್ಷಣೆ ಇರುವುದಿಲ್ಲ. ತಪಾಸಣೆ ವೇಳೆ ಇಲಾಖೆಯ ಅಧಿಕಾರಿಗಳು ಜೊತೆಗೆ ಇರುವುದಿಲ್ಲ. ನಮ್ಮ ಆತಂಕಗಳು ಯಾರಿಗೂ ಅರ್ಥವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮಾಸಿಕ ಕನಿಷ್ಠ ₹10 ಸಾವಿರ ಗೌರವಧನ ನಿಗದಿಪಡಿಸಬೇಕು. ಪಿಎಫ್‌, ಇಎಸ್‌ಐ ಸೌಲಭ್ಯ ಕಲ್ಪಿಸಬೇಕುಬಜೆಟ್‌ನಲ್ಲಿ ಎನ್‌ಆರ್‌ಎಚ್‌ಎಂಗೆ ಅನುದಾನ ಹೆಚ್ಚಿಸಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗಳು

* ಮಾಸಿಕ ಕನಿಷ್ಠ ₹10 ಸಾವಿರ ಗೌರವಧನ ನಿಗದಿಪಡಿಸಬೇಕು

* ಪಿಎಫ್‌, ಇಎಸ್‌ಐ ಸೌಲಭ್ಯ ಕಲ್ಪಿಸಬೇಕು

* ಬಜೆಟ್‌ನಲ್ಲಿ ಎನ್‌ಆರ್‌ಎಚ್‌ಎಂಗೆ ಅನುದಾನ ಹೆಚ್ಚಿಸಬೇಕು

* ಜನಶ್ರೀ ಭೀಮಾ ಯೋಜನೆಯ ವೆಚ್ಚ ಭರಿಸುವುದು

* 8 ತಿಂಗಳ ಬಾಕಿ ಪ್ರೋತ್ಸಾಹಧನ ನೀಡಬೇಕು

* ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಿಸಬೇಕು

* ಗರ್ಭಿಣಿಯರ ಆರೈಕೆ ವೇಳೆ ಅಗತ್ಯ ಸೌಲಭ್ಯ ಒದಗಿಸಬೇಕು

* ಸಾರಿಗೆ ಮತ್ತು ಊಟದ ಭತ್ಯೆ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT