ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ತೀರ್ಪು | ರಾಜ್ಯದಾದ್ಯಂತ ಕಟ್ಟೆಚ್ಚರ, ರಾಜಧಾನಿಯಲ್ಲಿ ನಿಷೇಧಾಜ್ಞೆ

ಕಮಿಷನರ್ ಭಾಸ್ಕರ್‌ ರಾವ್ ತುರ್ತು ಪತ್ರಿಕಾಗೋಷ್ಠಿ
Last Updated 8 ನವೆಂಬರ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಶನಿವಾರ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ.

‘ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ಬೆಳಿಗ್ಗೆ 6ರಿಂದ ತಡರಾತ್ರಿ 12ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಗುಂಪು ಸೇರಿ ಮೆರವಣಿಗೆ ಮಾಡುವುದು ಹಾಗೂ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ. ಯಾರಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕಮಿಷರನ್ ಭಾಸ್ಕರ್ ರಾವ್ ಅವರು ಶುಕ್ರವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

’ಈದ್ ಮಿಲಾದ್ ಹಬ್ಬದ ಪ್ರಯುಕ್ತ ಭಾನುವಾರ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಈಗ ತೀರ್ಪು ಬರುತ್ತಿರುವುದರಿಂದ ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ತಡರಾತ್ರಿ 12ರವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಈ ಬಗ್ಗೆ ಅಬಕಾರಿ ಇಲಾಖೆಗೂ ಈಗಾಗಲೇ ಮಾಹಿತಿ ನೀಡಲಾಗಿದೆ’ ಎಂದು ಹೇಳಿದರು.

‘ರಸ್ತೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮೆರವಣಿಗೆ ಮಾಡಬಾರದು. ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು ಹಾಗೂ ಬಣ್ಣ ಎರಚುವುದನ್ನು ನಿಷೇಧಿಸಲಾಗಿದೆ. ತಲೆಗೆ ಬಟ್ಟೆ ಕಟ್ಟಿಕೊಂಡು ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಮಾಡುವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಭಾಸ್ಕರ್‌ ರಾವ್ ಹೇಳಿದರು.

‘ತೀರ್ಪು ಹಿನ್ನೆಲೆಯಲ್ಲಿ ಈಗಾಗಲೇ ಬಹುಸಂಖ್ಯಾತರ ಹಾಗೂ ಅಲ್ಪಸಂಖ್ಯಾತರ ನಾಯಕರ ಸಭೆ ನಡೆಸಲಾಗಿದೆ. ತೀರ್ಪು ಏನೇ ಬಂದರೂ ಶಾಂತಿ ಕಾಪಾಡುವಂತೆ ಎಲ್ಲರನ್ನೂ ಕೋರಿದ್ದೇವೆ. ಕಾನೂನು ಪಾಲಿಸುವುದಾಗಿ ಅವರೆಲ್ಲ ಭರವಸೆ ನೀಡಿದ್ದಾರೆ’ ಎಂರದರು.

ಜಾಲತಾಣಗಳ ಬಗ್ಗೆ ನಿಗಾ: ‘ತೀರ್ಪು ಪ್ರಕಟವಾಗುವ ಮುನ್ನ ಹಾಗೂ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಪ್ರಕಟಿಸಬಾರದು. ಆ ಬಗ್ಗೆ ಡಿಸಿಪಿ ನೇತೃತ್ವದ ತಂಡ ನಿಗಾ ವಹಿಸಲಿದ್ದು, ಯಾರಾದರೂ ಅಂಥ ಪೋಸ್ಟ್ ಪ್ರಕಟಿಸಿದರೂ ಪ್ರಕರಣ ದಾಖಲಿಸಿಕೊಳ್ಳಲಿದೆ’ ಎಂದು ಭಾಸ್ಕರ್ ರಾವ್ ಹೇಳಿದರು.

‘ಮಾಧ್ಯಮದವರು ಸಹ ಪ್ರಚೋದನಕಾರಿ ದೃಶ್ಯಗಳನ್ನು ಬಿತ್ತರಿಸಬಾರದು. ತೀರ್ಪಿನ ಬಗ್ಗೆ ಚರ್ಚೆ ನಡೆಸುವ ವೇಳೆಯಲ್ಲೂ ಶಾಂತಿಗೆ ಧಕ್ಕೆ ತರುವ ಮಾತುಗಳನ್ನಾಡಬಾರದು’ ಎಂದು ಕೋರಿದರು.

ರಾತ್ರಿಯೇ ತುರ್ತು ಸಭೆ:ಅಯೋಧ್ಯೆ ತೀರ್ಪು ಶನಿವಾರ ಬೆಳಿಗ್ಗೆ ಪ್ರಕಟವಾಗುವ ಮಾಹಿತಿ ತಿಳಿಯುತ್ತಿದ್ದಂತೆ ಕಮಿಷನರ್ ಭಾಸ್ಕರ್ ರಾವ್ ಅವರು ಶುಕ್ರವಾರ ರಾತ್ರಿಯೇ ಸಭೆ ನಡೆಸಿದರು. ಅದಾದ ಬಳಿಕವೇ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಭದ್ರತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಪರಾಧ ಹಿನ್ನೆಲೆಯುಳ್ಳವರು ಹಾಗೂ ರೌಡಿಗಳ ಮೇಲೆ ಕಣ್ಣಿಡುವಂತೆ ಕಮಿಷನರ್ ಹೇಳಿದರು.ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಮುಲಾಜಿಲ್ಲದೆ ವಶಕ್ಕೆ ಪಡೆಯುವಂತೆ ಸೂಚನೆ ನೀಡಿದರು.

‘ಸಮಾಜಘಾತುಕ ವ್ಯಕ್ತಿಗಳ ಮೇಲೆ ನಿಗಾ’
‘ಅಯೋಧ್ಯೆ ತೀರ್ಪು ಏನೇ ಬಂದರೂ ರಾಜ್ಯದಲ್ಲಿ ಶಾಂತಿ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಭದ್ರತೆ ಸಂಬಂಧ ಪೊಲೀಸ್‌ ಅಧಿಕಾರಿಗಳು ಸಾಕಷ್ಟು ಸಭೆಗಳನ್ನು ಮಾಡಿದ್ದಾರೆ. ಶಾಂತಿ ಕಾಪಾಡುವಂತೆ ಎಲ್ಲ ಸಮುದಾಯದವರನ್ನು ಕೋರಿ ಶಾಂತಿ ಪಾಲನಾ ಸಭೆಯನ್ನೂ ನಡೆಸಿದ್ದಾರೆ’ ಎಂದರು.

‘ಸಮಾಜಘಾತುಕ ವ್ಯಕ್ತಿಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಕೇಂದ್ರದಿಂದಲೂ ಕೆಲ ಸೂಚನೆಗಳು ಬಂದಿವೆ’ ಎಂದು ಅವರು ಹೇಳಿದರು.

ನಗರದ ಭದ್ರತೆಗೆ ಪೊಲೀಸ್ ಬಲ
50:
ಕೆಎಸ್ಆರ್‌ಪಿ ತುಕಡಿ
30:ನಗರ ಸಶಸ್ತ್ರ ಮೀಸಲು ಪಡೆ ತುಕಡಿ
1: ಕೇಂದ್ರ ಮೀಸಲು ಪಡೆ (ಸಿಆರ್ ಪಿಎಫ್) ತುಕಡಿ
1,200: ಗೃಹರಕ್ಷಕರು
250: ಪೌರ ರಕ್ಷಕರು
8,000: ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT