ಗುರುವಾರ , ಅಕ್ಟೋಬರ್ 17, 2019
21 °C
‘ನಮ್ಮ ಬಳ್ಳಾರಿ: ನಮ್ಮ ಹಕ್ಕು’: ಧರಣಿ ನಿರತರ ಪ್ರತಿಪಾದನೆ

ವಿಭಜನೆ ಖಂಡಿಸಿ ‘ಬಳ್ಳಾರಿ ಜಿಲ್ಲೆ’ ಬಂದ್‌: ಬೆಳಿಗ್ಗೆಯೇ ಪ್ರತಿಭಟನೆ ಕಾವು

Published:
Updated:
Prajavani

ಬಳ್ಳಾರಿ: ‘ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ಸ್ಥಾಪಿಸಬಾರದು, ನಮ್ಮ ಬಳ್ಳಾರಿ ನಮ್ಮ ಹಕ್ಕು’ ಎಂದು ಪ್ರತಿಪಾದಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ನೂರಾರು ಮುಖಂಡರು, ಕಾರ್ಯಕರ್ತರು ಮಂಗಳವಾರ ಬೆಳಿಗ್ಗೆ 6ರಿಂದಲೇ ಬಂದ್‌ ಆಚರಿಸಿದರು.

ವಿಭಜನೆಯನ್ನು ವಿರೋಧಿಸುವ ಸಲುವಾಗಿಯೇ ಅಸ್ತಿತ್ವಕ್ಕೆ ಬಂದಿರುವ ಸಮಿತಿಯ ಮುಖಂಡರು ಬೆಳಿಗ್ಗೆ 6ಕ್ಕೇ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸೇರಿ ಟೈರ್‌ ಸುಟ್ಟು ಪ್ರತಿಭಟಿಸಿದರು.

ಇದನ್ನೂ ಓದಿ: ಬಳ್ಳಾರಿ ವಿಭಜಿಸಿದರೆ ಬೆಂಕಿ ಹೊತ್ತಿಕೊಳ್ತದೆ : ಜಿ.ಸೋಮಶೇಖರ ರೆಡ್ಡಿ ಆಕ್ರೋಶ

ಈ ಸಂದರ್ಭದಲ್ಲಿ ಸಂಚಾರ ನಿಯಂತ್ರಣ ಪೊಲೀಸರು ಮತ್ತು ಮುಖಂಡರ ನಡುವೆ ವಾಗ್ವಾದ ನಡೆಯಿತು. ಎಚ್.ಆರ್‌.ಗವಿಯಪ್ಪ ವೃತ್ತದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಳಿ ರಚಿಸಿದರು. ದೂರವಾಣಿ ಟವರ್ ಮೇಲೆ ಹತ್ತಿ ಕನ್ನಡ ಬಾವುಟ ಹಾರಿಸಲು ಪ್ರಯತ್ನಿಸಿದರು. ರಸ್ತೆಗಿಳಿದ ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ಪ್ರತಿಭಟನಾಕಾರರು ತಡೆದರು.ಆಟೋರಿಕ್ಷಾ ಮಾಲೀಕರು, ಚಾಲಕರ ಸಂಘ ಬೆಂಬಲ ನೀಡಿದ್ದರಿಂದ ಆಟೋರಿಕ್ಷಾಗಳು ಸಂಚರಿಸಲಿಲ್ಲ.


ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸಂಚಾರ ನಿಯಂತ್ರಣ ಪೊಲೀಸರೊಂದಿಗೆ ವಾಗ್ವಾದ

ವಕೀಲರು, ರೈತರು, ಕನ್ನಡ ಪರ ಹೋರಾಟಗಾರರು, ಕಾರ್ಮಿಕರು, ಶಾಲೆ–ಕಾಲೇಜುಗಳ ಒಕ್ಕೂಟ, ಹೋಟೆಲ್‌ ಮಾಲೀಕರ ಸಂಘ, ಎಪಿಎಂಸಿ ವರ್ತಕರು, ವಿಶ್ವ ಹಿಂದೂ ಪರಿಷತ್, ಲಾರಿ ಮಾಲೀಕರ ಸಂಘ, ಹಮಾಲರ ಸಂಘ, ಗಾರ್ಮೆಂಟ್ಸ್‌ ಮಾಲೀಕರು ಬಂದ್ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ದರೂರು ಪುರುಷೋತ್ತಮಗೌಡ ಹಾಗೂ ಟಪಾಲ್‌ ಗಣೇಶ್‌, ‘ರಾಜಕೀಯ ಕಾರಣಗಳಿಗಾಗಿ ಜಿಲ್ಲೆಯನ್ನು ವಿಭಜಿಸಲು ಮುಂದಾಗಿರುವುದು ಸರಿಯಲ್ಲ. ಜಿಲ್ಲೆಯಲ್ಲಿ ಚರ್ಚೆ, ಸಮಾಲೋಚನೆ ನಡೆಸಬೇಕು. ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ತಜ್ಞರ ಸಲಹೆಗಳನ್ನು ಪಡೆಯಬೇಕು. ಆದರೆ ಇದಾವುದನ್ನೂ ಮಾಡದೇ ಸರ್ಕಾರ ತರಾತುರಿಯನ್ನು ಜಿಲ್ಲೆಯನ್ನು ವಿಭಜಿಸಲು ಮುಂದಾಗಿದೆ’ ಎಂದು ದೂರಿದರು.


ಬಸ್‌ ತಡೆದ ಕಾರ್ಯಕರ್ತರು

‘ಸರ್ಕಾರ ಇನ್ನಾದರೂ ಎಚ್ಚರಿಕೆಯಿಂದ ಮುಂದೆ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.

ಸಿದ್ಮಲ್‌ ಮಂಜುನಾಥ್‌, ಮೋಹನ್‌ಬಾಬು, ಚಾನಾಳ್‌ ಶೇಖರ್‌, ಮಲ್ಲಿಕಾರ್ಜುನ, ಚಂದ್ರಶೇಖರ ಆಚಾರ್‌, ಕೆ.ಎರ್ರಿಸ್ವಾಮಿ ನೇತೃತ್ವ ವಹಿಸಿದ್ದರು.


ಬಿಕೋ ಎನ್ನುತ್ತಿರುವ ಬಳ್ಳಾರಿಯ ಕಪ್ಪಗಲ್ಲು ರಸ್ತೆ


ಎಚ್‌.ಆರ್‌.ಗವಿಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚನೆ

 

Post Comments (+)