ಬುಧವಾರ, ಜನವರಿ 22, 2020
19 °C
* ಜಂಟಿ ಕಮಿಷನರ್ ನೇತೃತ್ವದಲ್ಲಿ ಕಾರ್ಯಾಚರಣೆ * ಅನಧಿಕೃತವಾಗಿ ವಾಹನಗಳ ತಪಾಸಣೆ

ಸಂಚಾರ ಎಎಸ್‌ಐ ತಂಡದ ‘ಸುಲಿಗೆ’ ಬಯಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮದ್ಯ ಕುಡಿದು ವಾಹನ ಚಲಾಯಿಸುವವರ ತಪಾಸಣೆ ಸೋಗಿನಲ್ಲಿ ಅನಧಿಕೃತವಾಗಿ ಕಾರ್ಯಾಚರಣೆ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ಅಶೋಕನಗರ ಸಂಚಾರ ಠಾಣೆಯ ಎಎಸ್‌ಐ ಹಾಗೂ ಕೆಲವು ಕಾನ್‌ಸ್ಟೆಬಲ್‌ಗಳ ಕೃತ್ಯವನ್ನು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್‌. ರವಿಕಾಂತೇಗೌಡ ನೇತೃತ್ವದ ವಿಶೇಷ ತಂಡ ಬಯಲು ಮಾಡಿದೆ.

ಕೆಲವು ಪೊಲೀಸರು ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಎಸಿಪಿಗಳಾದ ಸತೀಶ್, ಕವಿತಾ ಮತ್ತು ಮಲ್ಲೇಶ್ವರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಅನಿಲ್‌ ನೇತೃತ್ವದಲ್ಲಿ ತಂಡ ರಚಿಸಿದ್ದ ರವಿಕಾಂತೇಗೌಡ, ಶನಿವಾರ ರಾತ್ರಿ ಕಾರ್ಯಾಚರಣೆಗೆ ಇಳಿದಿದ್ದರು.

ಅಶೋಕನಗರ ಸಂಚಾರ ಠಾಣೆ ವ್ಯಾಪ್ತಿಯ ಈಜೀಪುರದ ಶ್ರೀನಿವಾಗಿಲು ಜಂಕ್ಷನ್ ಸಮೀಪ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ (ಎಎಸ್‌ಐ) ಮುನಿಯಪ್ಪ, ಸಿಬ್ಬಂದಿಯಾದ ಗಂಗರಾಜ್, ನಾಗರಾಜ್ ಹಾಗೂ ಹರ್ಷ ಎಂಬುವರು ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಚಾಲಕರನ್ನು ಅಡ್ಡಗಟ್ಟಿ ತಪಾಸಣೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲೇ ದಾಳಿ ಮಾಡಿದ ವಿಶೇಷ ತಂಡ, ಪುರಾವೆ ಸಮೇತ ಆರೋಪಿಗಳ ಕೃತ್ಯವನ್ನು ಪತ್ತೆ ಮಾಡಿದೆ.

‘ಸಾರ್ವಜನಿಕರನ್ನು ಅಡ್ಡಗಟ್ಟಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪದಡಿ ಎಎಸ್‌ಐ ಹಾಗೂ ಇತರೆ ಸಿಬ್ಬಂದಿ ವಿರುದ್ಧ ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಬಿ.ಆರ್.ರವಿಕಾಂತೇಗೌಡ ಹೇಳಿದರು.

‘ಎಎಸ್‌ಐ ಹಾಗೂ ಇತರರು ಒಂದು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದರು. ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ವಾಹನಗಳನ್ನು ಅಡ್ಡಗಟ್ಟುತ್ತಿದ್ದರು. ಪೇಟಿಎಂ, ಗೂಗಲ್ ಪೇ ಹಾಗೂ ಇತರೆ ವ್ಯಾಲೆಟ್ ಮೂಲಕ ಹಣ ಪಡೆದುಕೊಳ್ಳುತ್ತಿದ್ದರು. ಶನಿವಾರ ರಾತ್ರಿ ಮಳೆ ಬರುತ್ತಿತ್ತು. ಇಂಥ ಸಂದರ್ಭದಲ್ಲಿ ತಪಾಸಣೆ ನಡೆಸುವುದು ಬೇಡವೆಂದು ಹಿರಿಯ ಅಧಿಕಾರಿ ಹೇಳಿದ್ದರು. ಅಷ್ಟಾದರೂ ಆರೋಪಿಗಳು ಸ್ಥಳಕ್ಕೆ ಹೋಗಿದ್ದರು’ ಎಂದು ತಿಳಿಸಿದರು.  

ಚಾಲಕನನ್ನು ಕಳುಹಿಸಿ ಕಾರ್ಯಾಚರಣೆ: ಮೂವರು ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಎಎಸ್‌ಐ ನೇತೃತ್ವದ ತಂಡ ಸುಲಿಗೆ ಮಾಡುತ್ತಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಶೇಷ ತಂಡದ ಅಧಿಕಾರಿಗಳು ಮಫ್ತಿಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.

‘ಚಾಲಕನೊಬ್ಬನ ಬಾಯಿ ಹಾಗೂ ಬಟ್ಟೆಗೆ ಮದ್ಯವನ್ನು ಲೇಪಿಸಿ ಕಾರಿನ ಸಮೇತ ಸ್ಥಳಕ್ಕೆ ಕಳುಹಿಸಲಾಗಿತ್ತು. ಆತನನ್ನು ಅಡ್ಡಗಟ್ಟಿದ್ದ ಖಾಸಗಿ ವ್ಯಕ್ತಿಗಳು, ‘ಮದ್ಯ ಕುಡಿದು ವಾಹನ ಓಡಿಸಿದ್ದಕ್ಕೆ ಕಾರು ಜಪ್ತಿ ಮಾಡುತ್ತೇವೆ. ಆ ನಂತರ ನ್ಯಾಯಾಲಯದಲ್ಲಿ ₹ 15 ಸಾವಿರ ದಂಡ ಕಟ್ಟಿ ವಾಹನ ಬಿಡಿಸಿಕೊಂಡು ಹೋಗಬೇಕು. ಆ ರೀತಿ ಆಗಬಾರದೆಂದರೆ ಇದ್ದಷ್ಟು ಹಣ ಕೊಟ್ಟು ಹೋಗು’ ಎಂದಿದ್ದರು. ಹಣವಿಲ್ಲವೆಂದು ಚಾಲಕ ಹೇಳಿದ್ದಾಗ ಪೇಟಿಎಂ ಮೂಲಕ ಹಣ ಪಡೆದುಕೊಂಡಿದ್ದರು. ಅದಾಗಿ ಕೆಲ ಕ್ಷಣಗಳಲ್ಲೇ ದಾಳಿ ಮಾಡಲಾಯಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಆಸ್ಪತ್ರೆಗಳಲ್ಲಿ ಸಿಗುವ ಆಲ್ಕೋಮೀಟರ್‌ ಬಳಸಿಕೊಂಡು ಕೃತ್ಯ ಎಸಗಲಾಗುತ್ತಿತ್ತು. ಅಂಥ ಮೂರು ಆಲ್ಕೋಮೀಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ₹ 32 ಸಾವಿರ ನಗದು ಹಾಗೂ ಕೆಲವರ ಚಾಲನಾ ಪರವಾನಗಿ (ಡಿ.ಎಲ್) ಪತ್ರಗಳೂ ಆರೋಪಿಗಳ ಬಳಿ ಸಿಕ್ಕಿವೆ’ ಎಂದು ತಿಳಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು