ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಪರಿಸ್ಥಿತಿ ಹಿಂಗ ಆದರ ಹಸಿವಿನಿಂದ ನಾವೇ ಸಾಯ್ತೀವಿ

ಕುಡಿಯಲು ನೀರಿಲ್ಲದೇ, ತಿನ್ನಲು ಆಹಾರವಿಲ್ಲದೇ ಭಿಕ್ಷುಕರ ಪರದಾಟ
Last Updated 26 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ಒಂದು ವಾರದಿಂದ ಇಡೀ ಕಲಬುರ್ಗಿ ಬಂದ್‌ ಆಗೇದ. ಕುಡಿಯಾಕ ನೀರೂ ಸಿಗ್ತಿಲ್ಲ. ರಸ್ತಾ ಮ್ಯಾಲ ಹೋಗುವವರಿಗೆ ಕೈಮುಗಿದು ಅಷ್ಟೋ ಇಷ್ಟೋ ರೊಕ್ಕ ಭಿಕ್ಷೆ ಇಸಗೊಂಡು ಹೋಟೆಲಿನ್ಯಾಗ ಏನಾದರೂ ತಿಂದು ಹೊಟ್ಟಿ ಹೊರಿತಿದ್ದಿವಿ. ಈಗ ಹೋಟೆಲ್ ಬಂದ ಅವ, ನೀರೂ ಸಿಗ್ತಿಲ್ಲ. ಪರಿಸ್ಥಿತಿ ಹಿಂಗ ಆದರ ಹಸಿವಿನಿಂದನ ನಾವು ಸಾಯ್ತೀವಿ...’

ಇದು ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದ ಚರಂಡಿಯ ಪಕ್ಕದ ಬೇವಿನ ಮರದ ನೆರಳಿನಲ್ಲಿ ಕುಳಿತಿದ್ದ ಭಿಕ್ಷಕರ ಮಾತುಗಳು.

ಕೊರೊನಾ ಹಾವಳಿಯಿಂದಾಗಿ ಒಂದು ವಾರದಿಂದ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಹಂತಹಂತವಾಗಿ ಎಲ್ಲ ಬಸ್‌, ರೈಲುಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ಬಸ್‌ ನಿಲ್ದಾಣಕ್ಕೆ ಯಾರೂ ಬರುತ್ತಿಲ್ಲ. ರಸ್ತೆಯ ಮೇಲೂ ಸಂಚರಿಸುತ್ತಿಲ್ಲ. ಅಂಗಡಿಗಳೆಲ್ಲ ಬಂದ್ ಆಗಿವೆ. ಕಣ್ಣಿ ಮಾರ್ಕೆಟ್‌ ಅನ್ನು ಸಹ ಪೊಲೀಸರು ತೆರವುಗೊಳಿಸಿದ್ದಾರೆ. ಹೀಗಾಗಿ, ಜನಸಂಚಾರವೇ ಇಲ್ಲದ್ದರಿಂದ ದಿನದ ಭಿಕ್ಷೆಯೂ ಹುಟ್ಟುತ್ತಿಲ್ಲ. ಅಳಿದುಳಿದ ಭಿಕ್ಷೆಯ ಹಣದಿಂದ ಚಹಾದ ಅಂಗಡಿಯಲ್ಲಿ ಏನಾದರೂ ಖರೀದಿಸೋಣ ಎಂದರೆ ಏನೂ ಸಿಗುತ್ತಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಪ್ರತಿನಿಧಿ ಎದುರು ಅಸಹಾಯಕರಾಗಿ ನುಡಿದರು.

‘ಅದೇನೋ ಕೊರೊನಾ ಬಂದದಂತ ಎಲ್ಲಾನೂ ಮೋದಿ ಬಂದ್‌ ಮಾಡಿಸ್ಯಾರ. ನೌಕರಸ್ಥರಿಗೆ, ವ್ಯಾಪಾರ ಮಾಡೂ ಮಂದೀಗೆ ಚಿಂತಿ ಇಲ್ಲ. ಬೇಕಾದಷ್ಟು ಖರೀದಿ ಮಾಡಿ ಮನೆಯೊಳಗೆ ಇಟ್ಕೊತಾರ. ಆದರ ನಮ್ಮಂತಹ ಗರೀಬ ಮಂದಿ ಏನು ಮಾಡಬೇಕ್ರಿ. ಯಾರನ್ನಂತ ಕೇಳಬೇಕು. ಎಷ್ಟು ದಿನ ಅಂತ ಉಪವಾಸ ಇರ್ಲಿಕ್ಕೆ ಆಗ್ತದ ಇರ್ತೀವಿ. ಒಂದು ದಿನ ಹಸಿವಿನಿಂದ ನರಳಿ ನರಳಿ ಸತ್ತು ಹೋಗ್ತೀವಿ’ ಎಂದು ಪದ್ಮಾ ಹಾಗೂ ರಫೀಕ್‌ ಕಣ್ಣೀರಿಡುತ್ತಾ ಪರಿಸ್ಥಿತಿಯ ಭೀಕರತೆಯನ್ನು ಬಿಚ್ಚಿಟ್ಟರು.

ನಾವು ಉಪವಾಸ ಇರುವುದನ್ನು ನೋಡಿ ಯಾರೋ ಒಬ್ಬಿಬ್ಬರು ತಿನ್ನಲು ಏನಾದರೂ ಕೊಡುತ್ತಾರೆ. ಆದರೆ, ಎಲ್ಲ ಸಮಯವೂ ಊಟ ಸಿಗುತ್ತಿಲ್ಲ. ಇದ್ದ ಇಂದಿರಾ ಕ್ಯಾಂಟೀನ್‌ ಮುಚ್ಚಿದ್ದಾರೆ. ಇದರಿಂದ ನಮ್ಮ ಪರಿಸ್ಥಿತಿ ಇನ್ನಷ್ಟು ಪರೇಶಾನ್‌ ಆಗಿದೆ ಎಂದರು.

ಪೊಲೀಸರ ಕಿರುಕುಳ

ಒಂದು ಕಡೆ ಸುಮ್ಮನೆ ಕುಳಿತುಕೊಳ್ಳಲೂ ಪೊಲೀಸರು ನಮಗೆ ಬಿಡುತ್ತಿಲ್ಲ. ಒಂದು ಕಡೆ ಕುಳಿತರೆ ಅಲ್ಲಿಂದ ಎಬ್ಬಿಸಿ ಕಳಿಸುತ್ತಾರೆ. ತೆವಳುತ್ತಾ ಬೇರೆ ಕಡೆ ಕುಳಿತುಕೊಂಡರೆ ಅಲ್ಲಿಗೂ ಬಂದು ನಮ್ಮನ್ನು ಹೆದರಿಸಿ ಕಳಿಸುತ್ತಾರೆ. ನಮಗೆ ಇಲ್ಲಿರುವ ಯಾವ ಹಕ್ಕೂ ಇಲ್ಲವೇ? ನಿರ್ಗತಿಕರಾದ ನಾವು ಎಲ್ಲಿಗ್ರಿ ಹೋಗಬೇಕು ಎಂದು ಪದ್ಮಾ ಪ್ರಶ್ನಿಸಿದರು.

ಇದು ಬರೀ ರಫೀಕ್, ಪದ್ಮಾ ಅವರ ಪರಿಸ್ಥಿತಿ ಅಷ್ಟೇ ಅಲ್ಲ, ನಗರದಲ್ಲಿರುವ ಬಹುತೇಕ ಸೂರಿಲ್ಲದವರು, ಭಿಕ್ಷುಕರ ಪರಿಸ್ಥಿತಿಯೂ ಇದೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT