ಗುರುವಾರ , ಫೆಬ್ರವರಿ 25, 2021
29 °C

ಬೆಳಗಾವಿ: ಜಿ.ಪಂ ಅಧ್ಯಕ್ಷೆಯ ಅಡುಗೆ–ಸೌಂದರ್ಯ ಸೂತ್ರದ ಯೂಟ್ಯೂಬ್‌ ಚಾನೆಲ್‌

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ರಾಜಕೀಯಕ್ಕೆ ಬಂದ ಮೇಲೆ ಸಮಯ ಹೊಂದಿಸಲಾಗದೇ ಹಲವರು ತಮ್ಮ ಹವ್ಯಾಸಗಳನ್ನು ಬಿಟ್ಟುಕೊಡುತ್ತಾರೆ. ಆದರೆ, ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಸತತ ಕಾರ್ಯಕ್ರಮಗಳ ನಡುವೆಯೂ ‘ಆಶಾ ಐಹೊಳೆಸ್‌ ಕಿಚನ್‌ ಅಂಡ್‌ ಬ್ಯೂಟಿ ಸಿಕ್ರೇಟ್ಸ್‌’ ಹೆಸರಿನ ಯುಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾರೆ. ವೈವಿಧ್ಯಮಯ ಅಡುಗೆ ಮಾಡುವ ಬಗೆ ಹಾಗೂ ಸೌಂದರ್ಯ ಕಾಪಾಡಿಕೊಳ್ಳುವ ಸೂತ್ರಗಳ ಬಗ್ಗೆ ಹಿಂದಿಯಲ್ಲಿ ವಿವರಣೆ ನೀಡುತ್ತಾರೆ.

15– 20 ದಿನಗಳಿಂದ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಇದುವರೆಗೆ ಸುಮಾರು 6 ವಿಡಿಯೊಗಳನ್ನು ಹಾಕಿದ್ದಾರೆ. 2,900 ಜನರು ಇವುಗಳನ್ನು ವೀಕ್ಷಿಸಿದ್ದಾರೆ. 160 ಜನರು ಚಂದಾದಾರರಾಗಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದವರಾದ ಆಶಾ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಥಣಿ ತಾಲ್ಲೂಕಿನ ತಾವಂಶಿ ಗ್ರಾಮದ ಪ್ರಶಾಂತರಾವ್‌ ಅವರನ್ನು ಮದುವೆಯಾದ ಅವರು, ಉಗಾರ ಖುರ್ದ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಅಡುಗೆ ಬಗ್ಗೆ ಆಸಕ್ತಿ: ‘ನನಗೆ ಅಡುಗೆ ಮಾಡುವುದರಲ್ಲಿ ಮೊದಲಿನಿಂದಲೂ ಆಸಕ್ತಿ ಇದೆ. ಈಗಲೂ ಹೆಚ್ಚಿನ ಸಮಯ ನಾನೇ ಮನೆಯಲ್ಲಿ ಅಡುಗೆ ಮಾಡುತ್ತೇನೆ. ಅಡುಗೆ ಮಾಡುವುದು ಕೂಡ ಒಂದು ಕಲೆ. ಅದನ್ನು ಇಂದಿನ ಯುವಕರು– ಯುವತಿಯರಿಗೆ ತಿಳಿಸಬೇಕಾಗಿದೆ. ಇತ್ತೀಚೆಗೆ ಹೆಚ್ಚಿನ ಯುವಕರು– ಯುವತಿಯರು ಉನ್ನತ ಶಿಕ್ಷಣ ಪಡೆದು ಉದ್ಯೋಗ ಮಾಡುತ್ತಿದ್ದಾರೆ. ಆದರೆ, ಅಡುಗೆ ಮಾಡಲು ಬಯಸುತ್ತಿಲ್ಲ. ಅವರಲ್ಲಿ ಅಡುಗೆ ಮಾಡುವುದರ ಬಗ್ಗೆ ಆಸಕ್ತಿ ಮೂಡಿಸಬೇಕೆನ್ನುವುದು ನನ್ನ ಬಯಕೆ. ಹೀಗಾಗಿ ಇವತ್ತಿನ ಕಾಲಮಾನಕ್ಕೆ ತಕ್ಕಂತೆ ತಂತ್ರಜ್ಞಾನದ ಸಹಾಯದಿಂದ ಟಿಪ್ಸ್‌ ನೀಡುತ್ತಿದ್ದೇನೆ’ ಎನ್ನುತ್ತಾರೆ ಆಶಾ.

‘ಚಹಾ, ಅವಲಕ್ಕಿ, ಎಗ್‌ ಕರಿ, ಮಸಾಲಾ ರೈಸ್‌, ಗಜ್ಜರಿಯ ಹಲ್ವಾ ಸೇರಿದಂತೆ ವಿವಿಧ ತಿನಿಸುಗಳನ್ನು ಮಾಡುವ ವಿಧಾನದ ಬಗ್ಗೆ ವಿಡಿಯೊ ಹಾಕಿದ್ದೇನೆ. ಈ ವಿಡಿಯೊಗಳನ್ನು ನೋಡಿದ ಜನರು ಖುಷಿಪಟ್ಟಿದ್ದಾರೆ. ವಿಡಿಯೊ ನೋಡಿ ಅಡುಗೆ ಮಾಡಲು ಕಲಿಯುತ್ತಿರುವುದಾಗಿಯೂ ಹೇಳುತ್ತಿದ್ದಾರೆ. ಚಳಿಗಾಲದಲ್ಲಿ ಮೈಕಾಂತಿಯನ್ನು ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆಯೂ ಟಿಪ್ಸ್‌ ನೀಡಿದ್ದೇನೆ’ ಎಂದರು.

‘ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿರುವ ನನಗೆ ಕನ್ನಡ ಸ್ಪಷ್ಟವಾಗಿ ಬರುವುದಿಲ್ಲ. ಈಗ ಒಂದೆರಡು ವರ್ಷಗಳಿಂದ ಮಾತನಾಡಲು ಆರಂಭಿಸಿದ್ದೇನೆ. ಹೀಗಾಗಿ ಹಿಂದಿಯಲ್ಲಿ ವಿವರಣೆ ನೀಡಿದ್ದೇನೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು