ಶುಕ್ರವಾರ, ಸೆಪ್ಟೆಂಬರ್ 17, 2021
28 °C
ಸಾಕು ತಾಯಿ ಇಲ್ಲದಿದ್ದರೆ ನಟನೆ ಕಲಿಯುತ್ತಿರಲಿಲ್ಲ...

‘ಬಳ್ಳಾರಿ ಲಲಿತಮ್ಮ’ ಎಂದರೆ ಹಿರಣ್ಣಯ್ಯಗೆ ಹೆಮ್ಮೆ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಮಾಸ್ಟರ್‌ ಹಿರಣ್ಣಯ್ಯ ಅವರು ಬಳ್ಳಾರಿಗೆ ಯಾವಾಗ ಬಂದರೂ ತಮ್ಮ ಸಾಕು ತಾಯಿ, ಕಲಾವಿದೆ ಬಳ್ಳಾರಿ ಲಲಿತಮ್ಮ ಅವರನ್ನು ಭೇಟಿ ಮಾಡದೇ ಹೋಗುತ್ತಿರಲಿಲ್ಲ.

ತಮ್ಮ 9ನೇ ವಯಸ್ಸಿನಲ್ಲೇ ಮಾಸ್ಟರ್‌ ಹಿರಣ್ಣಯ್ಯ ತಾಯಿಯನ್ನು ಕಳೆದುಕೊಂಡಿದ್ದರು. ಅವರ ತಂದೆ ಹಿರಣ್ಣಯ್ಯ ಅವರಿಗೆ ಲಲಿತಮ್ಮ ಎರಡನೇ ಪತ್ನಿ. ಹೀಗಾಗಿ ಅವರು ಲಲಿತಮ್ಮ ಬಳಿಯೇ ಬೆಳೆದವರು. ಇರುವಷ್ಟೂ ದಿನ ಅವರು, ‘ಬಳ್ಳಾರಿ ನನ್ನ ಚಿಕ್ಕಮ್ಮನ ಊರು’ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಬಳ್ಳಾರಿಯಲ್ಲಿ ಪಾಲ್ಗೊಂಡ ಬಹುತೇಕ ಕಾರ್ಯಕ್ರಮಗಳಲ್ಲಿ ಅವರು ಲಲಿತಮ್ಮ ನವರ ಸ್ಮರಣೆಯೊಂದಿಗೇ ಮಾತನ್ನು ಆರಂಭಿಸುತ್ತಿದ್ದರು.

ಹಿರಣ್ಣಯ್ಯ ಅವರ ನಾಟಕ ಕಂಪನಿಯಲ್ಲೇ ಲಲಿತಮ್ಮ ಕೂಡ ಕಲಾವಿದೆಯಾಗಿದ್ದರು. ಅದು ಅವರ ನಡುವಿನ ದಾಂಪತ್ಯಕ್ಕೂ ದಾರಿ ಮಾಡಿತ್ತು.

‘ನಮ್ಮ ತಾಯಿ ಲಲಿತಮ್ಮ 2003ರಲ್ಲಿ ತೀರಿಕೊಂಡರು. ಅಲ್ಲೀವರೆಗೂ ಮಾಸ್ಟರ್‌ ಹಿರಣ್ಣಯ್ಯ ಬಳ್ಳಾರಿ ಮಾರ್ಗದಲ್ಲಿ ಸಂಚರಿಸುವ ಪ್ರತಿ ಸಂದರ್ಭದಲ್ಲೂ
ನಮ್ಮ ಮನೆಗೆ ಬಂದು ಎರಡು– ಮೂರು ಗಂಟೆಗಳ ಕಾಲ ಇರುತ್ತಿದ್ದರು. 1953ರಲ್ಲಿ ಹಿರಣ್ಣಯ್ಯ ತೀರಿಕೊಂಡ ನಂತರ ಮಾಸ್ಟರ್‌ ನಮ್ಮ ಜೊತೆಗೆ ಹೆಚ್ಚು ಇರುತ್ತಿದ್ದರು’ ಎಂದು ಲಲಿತಮ್ಮ ಅವರ ಮಗ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹಿರಣ್ಣಯ್ಯ ಅಭಿನಯಿಸಿದ ಬಹುತೇಕ ಪಾತ್ರಗಳಲ್ಲಿ ಮಾಸ್ಟರ್‌ ಕೂಡ ಅಭನಯಿಸಿದ್ದರು. ಅದೂ ತಮ್ಮ ಸಾಕುತಾಯಿಯೊಂದಿಗೆ. ಮಕಮಲ್‌ ಟೋಪಿ, ದೇವದಾಸಿ, ಅಣ್ಣ– ತಂಗಿ, ತಾಯಿ ಕರುಳು, ರಾಮಾಯಣ ನಾಟಕಗಳಲ್ಲಿ ಅಭಿನಯಿಸಿದ್ದರು. ತಾಯಿಯೊಂದಿಗೆ ಈ ಪಾತ್ರಗಳಲ್ಲಿ ಅಭಿನಯಿಸುವುದು ಹೇಗೆ ಎಂದು ಮಾಸ್ಟರ್‌ ಕೇಳುತ್ತಿದ್ದರು. ಆಗ ಲಲಿತಮ್ಮನವರು, ಅಭಿನಯ ಬೇರೆ, ಜೀವನವೇ ಬೇರೆ ಎಂದು ಹೇಳಿ ಉತ್ತೇಜಿಸುತ್ತಿದ್ದರು’ ಎಂದರು.

ಸನ್ಮಾನ: ಕೆಲವು ವರ್ಷಗಳ ಹಿಂದೆ ನಗರದ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸುವ ಮುನ್ನ ಮಾಸ್ಟರ್‌ ಹಿರಣ್ಣಯ್ಯ ಅವರು, ‘ನನ್ನ ಚಿಕ್ಕಮ್ಮ ಲಲಿತಮ್ಮಇಲ್ಲದಿದ್ದರೆ ನಾನು ನಟನೆ ಕಲಿಯಲು ಆಗುತ್ತಿರಲಿಲ್ಲ. ಮೊದಲು ಅವರಿಗೆ ಸನ್ಮಾನವಾಗಲಿ’ ಎಂದು ಹೇಳಿ ತಮ್ಮ ಪತ್ನಿ ಶಾಂತಮ್ಮ ಅವರಿಂದ ಸನ್ಮಾನಿಸಿದ್ದರು.

‘ಇದು ನಮ್ಮ ನೆನಪಿನಲ್ಲಿ ಹಚ್ಚಹಸಿರಾಗಿದೆ. ಎಂದಿಗೂ ಅವರು ನಮ್ಮನ್ನು ದೂರದವರೆಂದು ಭಾವಿಸಲಿಲ್ಲ. ಒಡಹುಟ್ಟಿದವರಂತೆಯೇ ಭಾವಿಸಿದ್ದರು’ ಎಂದು ಕುಮಾರಸ್ವಾಮಿ ಅಭಿಮಾನದಿಂದ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು