ಪುಸ್ತಕೋತ್ಸವದ ಸುಗ್ಗಿ ಮತ್ತೆ ಬಂತು

7

ಪುಸ್ತಕೋತ್ಸವದ ಸುಗ್ಗಿ ಮತ್ತೆ ಬಂತು

Published:
Updated:
Deccan Herald

ನಗರದ ಪುಸ್ತಕ ಪ್ರೇಮಿಗಳಿಗೆ ಅಂತೂ ಇಂತೂ ಮತ್ತೆ ಸುಗ್ಗಿಕಾಲ ಬಂದಂತಾಗಿದೆ. 2015ರ ನಂತರ ಸ್ಥಗಿತಗೊಂಡಿದ್ದ ‘ಬೆಂಗಳೂರು ಪುಸ್ತಕೋತ್ಸವ’ ಹೊಸ ಹುರುಪಿನಿಂದ ಮತ್ತೆ ಬರುತ್ತಿದ್ದು, ಪುಸ್ತಕ ಪ್ರೇಮಿಗಳ ದಣಿವು ತಣಿಸಲಿದೆ.

ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘ ಹಾಗೂ ‘ಇಂಡ್ಯಾ ಕಾಮಿಕ್ಸ್’ ಸಹಯೋಗದಲ್ಲಿ ಇದೇ 15ರಿಂದ 21ರ ವರೆಗೆ ನಗರದ ಅರಮನೆ ಮೈದಾನದಲ್ಲಿ ಪುಸ್ತಕೋತ್ಸವ ನಡೆಯಲಿದ್ದು, ವೇದಿಕೆ ಸಜ್ಜುಗೊಳ್ಳುತ್ತಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಮಲೆಯಾಳಿ, ಬಂಗಾಳಿ, ತೆಲುಗು ಭಾಷೆಗಳ ಲಕ್ಷಾಂತರ ಕೃತಿಗಳು 350ಕ್ಕೂ ಅಧಿಕ ಮಳಿಗೆಗಳಲ್ಲಿ ಲಭ್ಯ. ಇಲ್ಲಿ ದೊರೆಯುವ ಪ್ರತಿ ಪುಸ್ತಕದ ಮೇಲೆ ಕನಿಷ್ಠ ಶೇಕಡಾ 15 ರಷ್ಟು ರಿಯಾಯಿತಿಯನ್ನೂ ಕಲ್ಪಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ಪುಸ್ತಕಗಳನ್ನು ಶೇಕಡಾ 50 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸುವರು. ಚಿಣ್ಣರಿಗಾಗಿ ನಾನಾ ಬಗೆಯ ಪುಸ್ತಕಗಳು ಲಭ್ಯ. ಅದರ ಜೊತೆಗೆ, ಎಜುಕೇಷನಲ್ ಟಾಯ್ಸ್ ಸಹ ಇಲ್ಲಿ ದೊರೆಯುತ್ತವೆ. ಇ–ಬುಕ್ಸ್, ಆಡಿಯೊ ಬುಕ್ಸ್ ಸಹ ಸಿಗಲಿವೆ. ಕೃತಿಗಳ ಜೊತೆಗೆ ಸ್ಟೇಷನರಿ ಸಾಮಗ್ರಿಗಳೂ ದೊರೆಯಲಿವೆ.

ಎಂದಿನಂತೆ ಈ ಬಾರಿಯೂ ನಟ ರಮೇಶ್ಅರವಿಂದ್ ಅವರೇ ಪುಸ್ತಕೋತ್ಸವದ ರಾಯಭಾರಿ. ‘ಸ್ವತಃಪುಸ್ತಕ ಪ್ರೇಮಿಯಾಗಿರುವುದರಿಂದ ಅವರು ನಮ್ಮ ಕಾರ್ಯಕ್ರಮಕ್ಕೆ ನಯಾ ಪೈಸೆ ಹಣ ಸ್ವೀಕರಿಸದೇ ರಾಯಭಾರಿ ಆಗಿದ್ದಾರೆ.  ಅಂತರರಾಷ್ಟ್ರೀಯ ಮಟ್ಟದ ಪ್ರಕಾಶಕ ಸಂಸ್ಥೆಗಳಿಂದಿಡಿದು ಸ್ಥಳೀಯ ಪ್ರಕಾಶಕ ಸಂಸ್ಥೆಗಳು ಪಾಲ್ಗೊಳ್ಳಲಿವೆ’ ಎಂದು ಪುಸ್ತಕೋತ್ಸವದ ನಿರ್ದೇಶಕ ಬಿ.ಎಸ್‌. ರಘುರಾಮ್‌ ತಿಳಿಸುತ್ತಾರೆ.

ಪ್ರತಿ ಮಳಿಗೆದಾರರಿಗೆ ಸಂಘದ ವತಿಯಿಂದ ವಿಮೆಯನ್ನು ಮಾಡಿಸಲಾಗಿದೆ. 2015ರಲ್ಲಿ ಲಕ್ಷಕ್ಕೂ ಮೀರಿ ಜನ ಬಂದಿದ್ದರು. ₹ 8 ಕೋಟಿಗೂ ಅಧಿಕ ವಹಿವಾಟು ಆಗಿತ್ತು ಎನ್ನುವ ಕಾರ್ಯಕ್ರಮ ಆಯೋಜಕರು ಈ ಬಾರಿ ಈವೆರಡನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ.

ನಿತ್ಯವೂ ವಿನೂತನ
ಪುಸ್ತಕೋತ್ಸವವನ್ನು ಬರೀ ಕೃತಿಗಳ ಮಾರಾಟಕ್ಕೆ ಸಿಮೀತ ಗೊಳಿಸದ ಆಯೋಜಕರು ಗ್ರಾಹಕರಿಗೆ ಮನರಂಜನೆಯನ್ನು ನೀಡಲೆಂದು ನಿತ್ಯಸಂಜೆ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಿದ್ದಾರೆ.  ಅದರ ಜೊತೆಗೆ, ಅ.16 ಹಾಗೂ 17ರಂದು ಕನ್ನಡ ಸಾಹಿತ್ಯೋತ್ಸವ ನಡೆಯಲಿದೆ. ನಿತ್ಯವೂ ಹೊಸ ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ, ಕೈಬರಹ ಕಾರ್ಯಾಗಾರ, ರಸಪ್ರಶ್ನೆ ಸ್ಪರ್ಧೆ ಹಾಗೂ ಪದಬಂದ ಸ್ಪರ್ಧೆಗಳನ್ನು ನಡೆಯಲಿವೆ.

ಒಂದು ಸೂರು ಲಕ್ಷಾಂತರ ಕೃತಿ
‘ಒಂದೇ ಸೂರಿನಡಿ, ನೂರಾರು ಮಳಿಗೆಗಳಲ್ಲಿ ಲಕ್ಷಂತಾರ ಪುಸ್ತಕಗಳು ಸಿಗಲಿವೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರಿಗೆ ಸಂಬಂಧಿ ಸಿದ ಎಲ್ಲ ವಿಚಾರಗಳ ಗ್ರಂಥಗಳ ಭಂಡಾರವೇ ಇಲ್ಲಿರಲಿದೆ. ಗ್ರಾಹಕರು ಬಯಸುವ ಎಲ್ಲ ಕ್ಷೇತ್ರಗಳ ಎಲ್ಲ ವಿಚಾರಗಳಿಗೆ ಸಂಬಂಧಿಸಿದ ಕೃತಿಗಳು ಅಗಾಧವಾಗಿ ಸಿಗಲಿವೆ’ ಎನ್ನುತ್ತಾರೆ ರಘುರಾಮ್.

‘ಸಂಘದ ವತಿಯಿಂದ 2013ರಲ್ಲಿ ಮೊದಲ ಬಾರಿಗೆ ಪುಸ್ತಕೋತ್ಸವ ಆಯೋಜಿಸಿದ್ದೆವು. 2015ರ ವರೆಗೆ ಯಶಸ್ವಿ ಯಾಗಿ ನಡೆದುಕೊಂಡು ಬಂದಿದ್ದ ಈ ಕಾರ್ಯಕ್ರಮ ನಂತರ ಅನಿವಾರ್ಯ ಕಾರಣಗಳಿಂದ ಹಾಗೂ ಜಾಗದ ಸಮಸ್ಯೆಯಿಂದ ಸ್ಥಗಿತಗೊಂಡಿತ್ತು. ಇದ್ದ ಎಲ್ಲ ತೊಡಕುಗಳನ್ನು ಮೀರಿ ಈ ಬಾರಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ’ ಎನ್ನುತ್ತಾರೆ ಅವರು

‘ನಗರದಲ್ಲಿ ಸಾಕಷ್ಟು ಮಂದಿಗೆ ಓದುವ ಹವ್ಯಾಸವಿದೆ. ನಾನಾ ಕಾರಣಗಳಿಂದ ಜನರು ಪುಸ್ತಕ ಓದುವಿಕೆಯಿಂದ ದೂರವಾಗುತ್ತಿದ್ದಾರೆ. ಆ ಹವ್ಯಾಸವನ್ನು ಇನ್ನಷ್ಟು ಬೆಳೆಸಲೆಂದೇ ಹಾಗೂ ಓದುಗರಿಗೆ ಹೊಸ ಹೊಸ ಬರಹಗಳ ಪುಸ್ತಕಗಳನ್ನು ಪರಿಚಯಿಸಲು ಪುಸ್ತಕೋತ್ಸವ ಸಹಕಾರಿ. ಹೀಗಾಗಿ, ಈ ಬಾರಿ ಇಂಗ್ಲಿಷ್ ಸೇರಿದಂತೆ ದೇಶದ ಎಲ್ಲ ಭಾಷೆಗಳ ಕೃತಿಗಳನ್ನು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಿದ್ದೇವೆ. ಇದರ ಲಾಭವನ್ನು ಜನರು ಪಡೆಯಬೇಕು’ ಎಂದು ಅವರು ಕಾರ್ಯಕ್ರಮದ ಉದ್ದೇಶದ ಕುರಿತು ಹೇಳುತ್ತಾರೆ.

‘ಪುಸ್ತಕಕೋತ್ಸವದಲ್ಲಿ ಸಿಗುವ ಆನಂದ ವಿಭಿನ್ನವಾದದ್ದು. ಪುಸ್ತಕೋತ್ಸವದ ಭೇಟಿಯ ಬಳಿಕವೂ ಜ್ಞಾನ ವೃದ್ಧಿಗೆ ಇದು ಸಹಕಾರಿ. ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಆನಂದಿಸಬಹುದು’ ಎನ್ನುವುದು ಪುಸ್ತಕೋತ್ಸವಕ್ಕೆ ಗ್ರಾಹಕರು ಏಕೆ ಬರಬೇಕು ಎಂಬುದಕ್ಕೆ ರಘು ಅವರು ನೀಡುವ ಉತ್ತರ.

ಇಸ್ಕಾನ್ ಫುಡ್ ಪೆಸ್ಟಿವಲ್
ಅಯ್ಯೋ... ಪುಸ್ತಕೋತ್ಸವದಲ್ಲಿ ಬರೀ ಕೃತಿಗಳಷ್ಟೇ ಇರುತ್ತವೆ. ಹಸಿದಾಗ ಹೊಟ್ಟೆ ತುಂಬಿಸಲು ಬೇರೆ ಕಡೆ ಮುಖಮಾಡಬೇಕಲ್ಲವೇ ಎಂದು ಗ್ರಾಹಕರು ಚಿಂತಿಸುವುದು ಬೇಡ. ಕಾರ್ಯಕ್ರಮಕ್ಕೆ ಬರುವ ಗ್ರಾಹಕರಿಗೆಂದೇ ಇಸ್ಕಾನ್ ಸಂಸ್ಥೆಯು ‘ಇಸ್ಕಾನ್ ಫುಡ್‌ ಫೆಸ್ಟಿವಲ್’ ಆಯೋಜಿಸಿದೆ. ನಾನಾ ಬಗೆಯ ರುಚಿಕರ ಖಾದ್ಯಗಳು ಆಹಾರ ಮೇಳದಲ್ಲಿ ಲಭ್ಯ. 

ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
ವಿದ್ಯಾರ್ಥಿ ಜೀವನದಿಂದಲೇ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ಸಲುವಾಗಿ ಪುಸ್ತಕೋತ್ಸವದಲ್ಲಿ ಪಾಲ್ಗೊಳ್ಳಲು ಶಾಲಾ– ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಅದಕ್ಕಾಗಿ, ವಿದ್ಯಾರ್ಥಿಗಳು ತಮ್ಮ ಶಾಲಾ–ಕಾಲೇಜಿನ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯ. ಅದರ ಹೊರತಾಗಿ, ಪ್ರವೇಶಕ್ಕೆ ಸಾರ್ವಜನಿಕರಿಗೆ ₹ 20 ಶುಲ್ಕ ನಿಗದಿ ಮಾಡಲಾಗಿದೆ.

ಪುಸ್ತಕೋತ್ಸವದ ಸಂಕ್ಷಿಪ್ತ ವಿವರ
* ಉದ್ಘಾಟನೆ: ಅಕ್ಟೋಬರ್ 15
* ಸಮಾರೋಪ: ಅಕ್ಟೋಬರ್ 21
* ಸ್ಥಳ: ತ್ರಿಪುರ ವಾಸಿನಿ, ಅರಮನೆ ಮೈದಾನ, ಬಳ್ಳಾರಿ ರಸ್ತೆ
* ಸಮಯ: ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 8
*ಪ್ರವೇಶ ದರ: ವಿದ್ಯಾರ್ಥಿಗಳಿಗೆ ಉಚಿತ, ಸಾರ್ವಜನಿಕರಿಗೆ ₹ 20

 


2015ರಲ್ಲಿ ನಡೆದ ಪುಸ್ತಕೋತ್ಸವದಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು

 

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !