ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಬ್ರಹ್ಮದ ಅಗಾಧತೆ

Last Updated 3 ಮೇ 2019, 20:25 IST
ಅಕ್ಷರ ಗಾತ್ರ

ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ |
ಭುವನಜೀವನಜಲಧಿಯೂರ್ಮಿಕೋಟಿಯಲಿ ||
ಛವಿಕೋಟಿಯೆರಚಲ್ ಪ್ರತಿಚ್ಛಾಯೆ ವಿಲಸಿಪುದು |
ಸವಿ ನಮ್ಮದದರ ಕಣ – ಮಂಕುತಿಮ್ಮ || 127 ||ಪದ-ಅರ್ಥ: ಶಿವಸೌಖ್ಯಸೌಂದರ್ಯಗಳ=ಶಿವ(ಮಂಗಳಕರವಾದ)+ಸೌಖ್ಯ+ಸೌಂದರ್ಯಗಳ. ಪೂರ್ಣರವಿ=ಪೂರ್ಣ(ಒಟ್ಟು ಮೊತ್ತ)+ರವಿ, ಬೊಮ್ಮ=ಪರಬ್ರಹ್ಮ. ಭುವನಜೀವನಜಲಧಿಯೂರ್ಮಿಕೋಟಿಯಲಿ= ಭುವನ(ಪ್ರಪಂಚದ)+ಜೀವನ+ಜಲಧಿ(ಸಮುದ್ರ)+ಯೂರ್ಮಿ(ಅಲೆಗಳು)+ಕೋಟಿಯಲಿ(ಕೋಟಿ ಸಂಖ್ಯೆಯಲಿ), ಛವಿಕೋಟಿಯೆರಚಲ್= ಛವಿ(ಕಾಂತಿ)+ಕೋಟಿ+ಎರಚಲ್(ಎರಚಲು), ಪ್ರತಿಚ್ಛಾಯೆ= ಪ್ರತಿಫಲನ, ವಿಲಸಿಪುದು(ವಿಲಾಸವಾಗುವುದು, ಪ್ರಕಾಶವಾಗುವುದು)

ವಾಚ್ಯಾರ್ಥ: ಮಂಗಳಕರವಾದ, ಸೌಖ್ಯದ, ಸೌಂದರ್ಯಗಳ ಒಟ್ಟು ಮೊತ್ತ, ಮೂಲವಾಗಿರುವುದು ಸೂರ್ಯನಂತಿರುವ ಪರಬ್ರಹ್ಮ. ಈ ಲೋಕಜೀವನವೆಂಬ ಸಮುದ್ರದ ಕೋಟಿಕೋಟಿ ಅಲೆಗಳ ಮೇಲೆ ಅದರ ಕೋಟಿ ಕಾಂತಿಯು ಬೀಳಲು ಅದರಿಂದ ಒಂದು ಪ್ರತಿಫಲನದ ಪ್ರಕಾಶವಾಗುವುದು. ಅದರಲ್ಲಿಯ ಒಂದು ಕಣ ಮಾತ್ರ ನಮಗೆ ಸವಿಯಾದದ್ದು.

ವಿವರಣೆ: ಒಂದು ಅತ್ಯದ್ಭುತವಾದುದನ್ನು, ಮಾತಿಗೆ ಮೀರಿದ ವೈಭವವನ್ನು ಒಬ್ಬ ಸಮರ್ಥಕವಿ ಬಣ್ಣಿಸುವಾಗ ಬಳಸುವ ಭಾಷೆ ಹೇಗಾಗುತ್ತದೆನ್ನುವುದಕ್ಕೆ ಸುಂದರ ಮಾದರಿ ಈ ಕಗ್ಗ. ನಾವು ವರ್ಣಿಸುವಂಥ ವಸ್ತು ಎಷ್ಟು ದೊಡ್ಡದು ಎಂದು ಹೇಳುವ ಸಂಭ್ರಮ ಪದಗಳನ್ನು ಹೆಣೆಯುತ್ತ ಹೋಗುತ್ತದೆ. ಪರಬ್ರಹ್ಮ ಬಹಳ ದೊಡ್ಡದು. ಅದು ಎಷ್ಟು ದೊಡ್ಡದೆಂದರೆ ಸಣ್ಣ ಪುಟ್ಟ ಪದಗಳು ಅದನ್ನು ವರ್ಣಿಸಲಾರವು ಮತ್ತು ಸಣ್ಣಪದಗಳ ಬಳಕೆ ಅದರ ಮಹತ್ತನ್ನು ಸಾರಲಾರದು.

ಮಂಗಳಕರವಾದದ್ದರ, ಸೌಖ್ಯದ, ಸೌಂದರ್ಯಗಳ ಒಟ್ಟು ಮೊತ್ತವೇ ಸೂರ್ಯನಂತಿರುವ ಪರಬ್ರಹ್ಮ. ಈ ಭೂಲೋಕದ ಜೀವನವೆಂಬ ಮಹಾಸಮುದ್ರದ ಕೋಟ್ಯಂತರ ಅಲೆಗಳ ಮೇಲೆ ಪರಬ್ರಹ್ಮದ ಕೋಟಿಕಿರಣಗಳ ಕಾಂತಿ ಚೆಲ್ಲಿದಾಗ ಒಂದು ಬ್ರಹತ್ ಪ್ರತಿಫಲನ ಉಂಟಾಗುತ್ತದೆ. ನಮ್ಮ ಕಣ್ಣುಗಳು ಅವೆಲ್ಲವನ್ನು ಹಿಡಿದುಕೊಳ್ಳಲು ಅಸಮರ್ಥವಾಗಿವೆ. ಈ ಮಹಾಕಾಂತಿಯ ಪ್ರತಿಫಲನದಲ್ಲಿ ಒಂದು ಪುಟ್ಟ ಕಣದಷ್ಟನ್ನು ನಾವು ಅನುಭವಿಸಬಲ್ಲೆವು. ಅದೇ ನಮ್ಮ ಬದುಕಿನ ಸವಿ. ಎಂಥ ಕಾವ್ಯಾತ್ಮಕವಾದ ಭಾಷೆ!

ಇಂಥದ್ದೇ ಒಂದು ಪ್ರಸಂಗ ಮಹಾಭಾರತದ್ದು. ಕುಮಾರವ್ಯಾಸನ ಅಪ್ಪಟ ಪ್ರತಿಭೆಯ ವಿಲಾಸ ಅದು. ದ್ಯೂತದಲ್ಲಿ ಸೋತ ಮೇಲೆ ದ್ರೌಪದಿಯನ್ನು ಸಭೆಗೆ ಎಳೆತರಲು ಹೋದ ದುಶ್ಯಾಸನ ತನ್ನ ತಾಯಿಯಂತಿರಬೇಕಾಗಿದ್ದ ಅತ್ತಿಗೆಯ ಮುಡಿಗೆ ಕೈ ಹಾಕುತ್ತಾನೆ. ಅದೆಂಥ ಶ್ರೀಮುಡಿ! ಅದನ್ನು ವರ್ಣಿಸುವಾಗ ಕುಮಾರವ್ಯಾಸನ ಬರವಣಿಗೆ ಉತ್ತುಂಗಕ್ಕೇರಿಬಿಡುತ್ತದೆ. ಈ ಒಂದು ಪದ್ಯಕ್ಕೆ ಕುವೆಂಪುರವರು ಒಂದು ಲೇಖನವನ್ನೇ ಬರೆದಿದ್ದಾರೆ. ಆ ಮಹೀಶಕೃತುವರದೊಳುದ್ದಾಮ ಮುನಿಜನರಚಿತ ಮಂತ್ರಸ್ತೋಮ ಪುಷ್ಕಲ ಪೂತ ಪುಣ್ಯಜಲಾಭಿಷೇಚನದ ಶ್ರೀಮುಡಿಗೆ ಕೈಯಿಕ್ಕಿದನು ವರಕಾಮಿನೀ ನಿಕುರುಂಬವಕಟಕ
ಟಾ ಮಹಾಸತಿ ಶಿವ ಶಿವಾಯೆಂದೊದರಿತಲ್ಲಲ್ಲಿ.

ಮೊದಲಿನ ನಾಲ್ಕು ಸಾಲುಗಳಲ್ಲಿ ಆಕೆಯ ಶ್ರೀಮುಡಿಯ ವರ್ಣನೆಯನ್ನು ಅತ್ಯಂತ ಎತ್ತರಕ್ಕೇರಿಸಿ ಅದನ್ನು ಸಂಸ್ಕಂತ ಭೂಯಿಷ್ಟ ಮಾಡಿ ಕೊನೆಗೆ ಅತನ ಕೆಟ್ಟ ಕೆಲಸವನ್ನು, ಸಣ್ಣತನವನ್ನು ತೋರಲು ಗ್ರಾಮ್ಯವಾಗಿ ಕೈ ಇಕ್ಕಿದನು ಎನ್ನುತ್ತಾನೆ ಕವಿ. ಅದೇ ರೀತಿ ಡಿ.ವಿ.ಜಿ ಈ ಕಗ್ಗದಲ್ಲಿ ಪರಬ್ರಹ್ಮ ಎಷ್ಟು ದೊಡ್ಡವನು ಎಂದು ಹೇಳುವಾಗ ಪದಗಳು ಸಾಲುಸಾಲಾಗಿ ನುಗ್ಗಿ ಬರುತ್ತವೆ ಮತ್ತು ಮಾನವನ ಅಶಕ್ತತೆಯನ್ನು, ನಮಗೆ ದಕ್ಕಿದ್ದನ್ನು ಹೇಳುವಾಗ ‘ಕಣ’ ಎಂಬ ಸಣ್ಣ ಶಬ್ದ ಬರುತ್ತದೆ. ಇದೊಂದು ಸುಂದರ ಕಾವ್ಯಪ್ರಯೋಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT