ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಾಯಕರಿಗೆ ಆತಂಕ ತಂದ ಸಮೀಕ್ಷೆ

ಗುಪ್ತಚರ ವರದಿ ಅನುಸಾರ 12 ಸ್ಥಾನ ಗೆಲ್ಲುವುದು ಸುಲಭ: 22ರ ಗುರಿ ಕೊಟ್ಟ ಅಮಿತ್ ಶಾ
Last Updated 19 ಮೇ 2019, 5:39 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 12 ಸ್ಥಾನಗಳನ್ನಷ್ಟೇ ಗೆಲ್ಲಲಿದೆ ಎಂಬ ಗುಪ್ತಚರ ವರದಿ ರಾಜ್ಯದ ಕಮಲ ಪಡೆಯ ಹಿರಿ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಕಳೆದ ಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ, ಈ ಸಲ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಂಕಲ್ಪ ತೊಟ್ಟಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಟ್ಟಿಗೆ ಚುನಾವಣೆ ಎದುರಿಸಿದರೆ ‘ಮಿಷನ್‌–22’ ಗುರಿ ತಲುಪುವುದು ಸುಲಭವಲ್ಲ ಎಂಬುದು ರಾಜ್ಯ ನಾಯಕರಿಗೆ ಗೊತ್ತಿದೆ. ಮೋದಿ ವಿಜಯ ಸಂಕಲ್ಪ ಯಾತ್ರೆ, ಕಮಲ ಜ್ಯೋತಿ ದೀಪಾವಳಿ, ಶಕ್ತಿ ಕೇಂದ್ರಗಳ ಸಮಾವೇಶ, ಮನೆ ಮೇಲೆ ಬಿಜೆಪಿ ಧ್ವಜ ಹಾರಾಟ, ಬೈಕ್‌ ರ‍್ಯಾಲಿ, ಪ್ರಧಾನಿ ಅವರ ಸಂಘಟನಾ ಸಂವಾದದಂತಹ ಕಾರ್ಯಕ್ರಮಗಳು ಮತ ತಂದುಕೊಡಬಲ್ಲದು ಎಂಬ ವಿಶ್ವಾಸದಲ್ಲಿದೆ.

ಆದರೆ, ಈಗಿನ ಸ್ಥಿತಿಯಲ್ಲಿ ಮಿಷನ್‌–22 ಸ್ಥಿತಿ ಗುರಿ ಮುಟ್ಟುವುದು ಕಷ್ಟ ಎಂಬ ಗೊತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಕ್ತಿ ಕೇಂದ್ರ ಸಮಾವೇಶದಲ್ಲಿ ಪಾಲ್ಗೊಳ್ಳಲು ಕಳೆದ ವಾರ ಬೆಂಗಳೂರಿಗೆ ಬಂದ ಅವರು, ರಾಜ್ಯ ನಾಯಕರ ಜತೆಗೆ ಸಭೆಗಳನ್ನು ನಡೆಸಿ ಮಾಹಿತಿ ಪಡೆದಿದ್ದಾರೆ. ‘ಗುಪ್ತಚರ ವರದಿಗಳ ಪ್ರಕಾರ ಪಕ್ಷ 12 ಸ್ಥಾನಗಳನ್ನಷ್ಟೇ ಗೆಲ್ಲಲಿದೆ. ‍ಪಕ್ಷ ಗೆಲ್ಲುವ 22 ಸ್ಥಾನಗಳು ಯಾವುವು ಎಂಬುದನ್ನು ತಿಳಿಸಿ’ ಎಂದು ಇಲ್ಲಿನ ನಾಯಕರಿಗೆ ಪ್ರಶ್ನಿಸಿದ್ದಾರೆ.

‘ಕಳೆದ ಸಲ ಗೆದ್ದ ಕೆಲವು ಕ್ಷೇತ್ರಗಳು ಕೈಬಿಡಲಿವೆ. ಸಂಸದರ ಕಾರ್ಯವೈಖರಿಗೆ ಅಸಮಾಧಾನ ಇದೆ’ ಎಂಬ ಅಂಶಗಳು ವರದಿಯಲ್ಲಿವೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಮಾತು ಕೇಳಿ ರಾಜ್ಯ ನಾಯಕರು ಮೌನಕ್ಕೆ ಶರಣಾದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತಿನ ಶೈಲಿ ಬದಲಾಗಲು ಶಾ ಚಾಟಿ ಸಹ ಕಾರಣ ಎಂದು ಮೂಲಗಳು ತಿಳಿಸಿವೆ.

‘ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿದೆ. 6–7 ಸಂಸದರ ಬಗ್ಗೆ ವ್ಯಾಪಕ ಅಸಮಾಧಾನಗಳು ಇವೆ. ಆದರೆ, ಕಲಬುರ್ಗಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಪಕ್ಷದ ಪರ ಹೆಚ್ಚಿನ ಒಲವು ಇದೆ. ಹೆಚ್ಚಿನ ಪರಿಶ್ರಮ ಹಾಕಿದರೆ ಬಳ್ಳಾರಿಯನ್ನು ಕೈವಶ ಮಾಡಿಕೊಳ್ಳಬಹುದು’ ಎಂದು ನಾಯಕರೊಬ್ಬರು ಹೇಳಿದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿತ್ತು. ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹಲವು ಸಮೀಕ್ಷೆಗಳು ತಿಳಿಸಿದವು. ಆದರೆ, ನರೇಂದ್ರ ಮೋದಿ ಅಲೆಯಿಂದಾಗಿ ಹೆಚ್ಚಿನ ಸ್ಥಾನ ಗೆದ್ದಿದ್ದೆವು. ಕೃಷಿಕರ ಖಾತೆಗೆ ₹6 ಸಾವಿರ ನಗದು, ಆದಾಯ ತೆರಿಗೆ ಪಾವತಿ ಮಿತಿ ಏರಿಕೆಯಂತಹ
ಕಾರ್ಯಕ್ರಮಗಳು ಪಕ್ಷಕ್ಕೆ ದೊಡ್ಡ ಇಡುಗಂಟನ್ನು ನೀಡಲಿವೆ. ಉಗ್ರರ ಮೇಲಿನ ದಾಳಿ ಪ್ರಕರಣದಿಂದ ಪಕ್ಷದ ಮತ ಪ್ರಮಾಣ ಶೇ 5ರಷ್ಟು ಏರಿಕೆಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಾಲಿಗಳಿಗೆ ಇಕ್ಕಟ್ಟು ತಂದ ಹುರಿಯಾಳುಗಳು

ಉಡುಪಿ– ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಜತೆಗೆ ಒಡನಾಟ ಹೊಂದಿದ್ದು ಕಡಿಮೆ. ರಾಜ್ಯ ರಾಜಕಾರಣದಲ್ಲೇ ಹೆಚ್ಚಿನ ಆಸಕ್ತಿ ತಳೆದಿದ್ದಾರೆ. ಶೋಭಾ ಬದಲು ಕೆ.ಜಯಪ್ರಕಾಶ ಹೆಗ್ಡೆ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂದಿದೆ. ಈ ಬೆಳವಣಿಗೆ ಬೆನ್ನಲ್ಲೇ ಶೋಭಾ ಗೋಬ್ಯಾಕ್‌ ಎಂಬ ಕೂಗೂ ಎದ್ದಿದೆ. ಸದಾನಂದಗೌಡ ರಾಜೀನಾಮೆಯಿಂದ ತೆರವಾಗಿದ್ದಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆದ್ದಿದ್ದ ಹೆಗ್ಡೆ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಶೋಭಾ ಎದುರು ಸೋತಿದ್ದರು. ಈಗ ಅವರು ಬಿಜೆಪಿಯಲ್ಲಿದ್ದಾರೆ.

ಮೈಸೂರು: ಪ್ರತಾಪಸಿಂಹ ಕಾರ್ಯಶೈಲಿ ಬಗ್ಗೆ ಪಕ್ಷದ ವಲಯದಲ್ಲಿ ಅಸಮಾಧಾನ ಇದೆ. ಜೆಡಿಎಸ್‌–ಕಾಂಗ್ರೆಸ್‌ ಜತೆಗೂಡಿ ಚುನಾವಣೆ ಎದುರಿಸಿದರೆ ಈ ಕ್ಷೇತ್ರದಲ್ಲಿ ಗೆಲುವಿನ ದಡ ಮುಟ್ಟಲು ಹರಸಾಹಸ ಮಾಡಬೇಕಾಗುತ್ತದೆ ಎಂಬುದನ್ನು ಹಿರಿಯ ನಾಯಕರೇ ಒಪ್ಪಿಕೊಳ್ಳುತ್ತಾರೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮಂಜುನಾಥ್‌ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಟಿಕೆಟ್‌ ನೀಡುವಂತೆ ನಾಯಕರಲ್ಲಿ ಕೋರಿದ್ದಾರೆ. ಟಿಕೆಟ್‌ ಸಿಕ್ಕರೆ ಸ್ಪರ್ಧಿಸಲು ಸಿದ್ಧ ಎಂದು ಅಪ್ಪಚ್ಚು ರಂಜನ್‌ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.

ವಿಜಯಪುರ: ಕೇಂದ್ರ ಸಚಿವರಾಗಿರುವ ಇಲ್ಲಿನ ಸಂಸದ ರಮೇಶ ಜಿಗಜಿಣಗಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವೆ ಕಿತ್ತಾಟ ಬೆಂಬಲಿಗರ ಹೊಡೆದಾಟದವರೆಗೆ ಸಾಗಿದೆ. ಬಿ.ಎಸ್‌.ಯಡಿಯೂರಪ್ಪ ಸಮ್ಮುಖದಲ್ಲೇ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ.

ಬಾಗಲಕೋಟೆ: ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯುವುದಾಗಿ ಸಂಸದ ಪಿ.ಸಿ.ಗದ್ದಿಗೌಡರ ಸಮಾರಂಭವೊಂದರಲ್ಲಿ ಅಭಿಲಾಷೆ ವ್ಯಕ್ತಪಡಿಸಿದ್ದರು. ಈ ಮಾತಿನ ಆಧಾರದಲ್ಲಿ ಮಾಜಿ ಶಾಸಕ ಪಿ.ಎಚ್‌.ಪೂಜಾರ ಟಿಕೆಟ್‌ ಗಿಟ್ಟಿಸಲು ಪ್ರಯತ್ನ ಆರಂಭಿಸಿದ್ದಾರೆ.

ಕೊಪ್ಪಳ: ಸಂಸದ ಸಂಗಣ್ಣ ಕರಡಿ ವಿರುದ್ಧ ಸ್ಥಳೀಯ ಮುಖಂಡರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಬದಲಿ
ಸದಿದ್ದರೆ ಗೆಲುವು ಕಷ್ಟ ಎಂಬುದನ್ನು ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಿರೂಪಾಕ್ಷಪ್ಪ ಸಿಂಗನಾಳ, ಡಾ. ಬಸವರಾಜ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ದಕ್ಷಿಣ ಕನ್ನಡ: ಸಂಸದ ನಳಿನ್‌ ಕುಮಾರ್ ಕಟೀಲು ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಿದ್ದು ವಿವಾದದ ಕಾರಣಗ
ಳಿಂದಲೇ. ಪಂಪ್‌ವೆಲ್‌ ಮೇಲ್ಸೇತುವೆ ಆಮೆಗತಿ ಕಾಮಗಾರಿಯನ್ನು ಮುಂದಿಟ್ಟುಕೊಂಡು ನಾಗರಿಕರು ಹೋರಾಟ ನಡೆಸಿದ್ದಾರೆ. ಈ ವಿಚಾರ ಪಕ್ಷದ ಮುಜುಗರಕ್ಕೂ ಕಾರಣವಾಗಿದೆ. ಕಮಲದ ಚಿಹ್ನೆ ನೋಡಿ ಜನರು ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ನಾಯಕರಲ್ಲಿದೆ.

ಬೆಳಗಾವಿ: ಸಂಸದ ಸುರೇಶ ಅಂಗಡಿ ಅವರನ್ನು ಮತ್ತೆ ಅಭ್ಯರ್ಥಿಯನ್ನಾಗಿ ಮಾಡಬಾರದು ಎಂದು ಸ್ಥಳೀಯ ಮುಖಂಡರು ಪಟ್ಟು ಹಿಡಿದಿದ್ದಾರೆ. ಅವರ ಬದಲು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರಿಗೆ ಟಿಕೆಟ್‌ ನೀಡಬೇಕು ಎಂಬ ವಾದವೂ ಶುರುವಾಗಿದೆ. ಆದರೆ, ಕೋರೆ ಅವರು ಚಿಕ್ಕೋಡಿಯಲ್ಲಿ ಸ್ಪರ್ಧಿಸಲು ಒಲವು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT