ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಆಡಿಯೊ ಬಿಡುಗಡೆ ಮಾಡಿ ಸಿಎಂ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ: ಬಿಎಸ್‌ವೈ 

Last Updated 27 ಮಾರ್ಚ್ 2019, 7:03 IST
ಅಕ್ಷರ ಗಾತ್ರ

ಬೆಂಗಳೂರು:ಆಡಿಯೊ ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ದಂಡನಾರ್ಹ ಅಪರಾಧ ಎಸಗಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸದನದಲ್ಲಿ ಆರೋಪಿಸಿದರು.

ಮಂಗಳವಾರ ವಿಧಾನಸಭೆ ಕಲಾಪದಲ್ಲಿ ಮಧ್ಯಾಹ್ನ ಚರ್ಚೆ ಆರಂಭವಾದ ವೇಳೆ ಸಿಎಂ ವಿರುದ್ಧ ಆಪಾದಿಸಿದ ಯಡಿಯೂರಪ್ಪ, ‘ಸಿಎಂ ಆಡಿಯೊ ಬಿಡುಗಡೆ ಮಾಡಿರುವುದು ದಂಡನಾರ್ಹ ಅಪರಾಧ. ಅದು ನಾಲ್ಕು ಕಾರಣಕ್ಕಾಗಿ. 1) ನಕಲಿ ಆಡಿಯೊ ಬಿಡುಗಡೆ ಮಾಡಿದ್ದು. 2) ಸುಳ್ಳು ಹೇಳಿದ್ದು. 3) ಮೋಸ ಮಾಡುವ ಉದ್ದೇಶದಿಂದ ಆಡಿಯೊ ಬಿಡುಗಡೆ ಮಾಡಿದ್ದು. 4) ನಕಲಿ ಎಂದು ಗೊತ್ತಿದ್ದು ಬಿಡುಗಡೆ ಮಾಡಿದ್ದು. ಎಲ್ಲಾ ಕೃತ್ಯಗಳು ಐಪಿಸಿ ಅಡಿ ದಂಡನಾರ್ಹ ಅಪರಾಧ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯೂ ಅಪರಾಧ. ಆದ್ದರಿಂದ ಮುಖ್ಯಮಂತ್ರಿ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಸಭಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ಘಟನಾವಳಿಗಳ ಬಗ್ಗೆ ಮತ್ತು ಸಭಾಧ್ಯಕ್ಷರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಆ ಮಾತು ಆಡುವ ವೇಳೆ ನಾನಿದ್ದಿದ್ದೇ ಆದರೆ ರಾಜಕೀಯ ನಿವೃತ್ತಿಗೂ ಸಿದ್ಧ ಎಂದು ಹೇಳಿದ್ದೆ. ಆ ಮಾತಿಗೆ ನಾನು ಈಗಲೂ ಬದ್ಧ ಎಂದು ಯಡಿಯೂರಪ್ಪ ಹೇಳಿದರು.

30ರಿಂದ 32 ನಿಮಿಷ ಆಡಿಯೊವನ್ನು 2 ನಿಮಿಷಕ್ಕೆ ಕಟ್‌ ಪೇಸ್ಟ್‌ ಮಾಡಿ ಷಡ್ಯಂತ್ರ ಮಾಡಿ, ಮಾಧ್ಯಮಗಳಲ್ಲಿ ಬಿತ್ತರಿಸಲು ನೀಡಿದ್ದಾರೆ. ಸಿಎಂ ಪ್ರಾಮಾಣಿಕರಿದ್ದರೆ ಸಂಪೂರ್ಣ ಆಡಿಯೊ ಬಿಡುಗಡೆ ಮಾಡಿದ್ದರೆ ಅದಕ್ಕೆ ಅರ್ಥ ಬರುತ್ತಿತ್ತು. ಈಗಾಗಿ ಒಬ್ಬ ಸಿಎಂ ಆಗಿ ಮಾಡಿರುವ ಅಪರಾಧ ಕೃತ್ಯ ಮೋಲ್ನೋಟಕ್ಕೆ ಕಾಣುತ್ತಿದೆ ಎಂದು ಆಪಾದಿಸಿದರು.

ಸಿಎಂ ಕುರ್ಚಿ ಉಳಿಸಿಕೊಳ್ಳಲು ಆಡಿಯೊ ದುರುಪಯೋಗಪಡಿಸಿಕೊಂಡರು. ಇದು ಶೋಭೆ ತರುವಂತಹದ್ದಲ್ಲ ಎಂದರು.

ಎಸ್‌ಐಟಿಗೆ ಆದೇಶ ಮಾಡಲು ಅಧ್ಯಕ್ಷರಿಗೂ ಅಧಿಕಾರ ಇಲ್ಲ. ತಮ್ಮ ಕೊಠಡಿಗೆ ಕರೆಯಲಿಲ್ಲ. ಚರ್ಚೆ ಮಾಡಲಿಲ್ಲ. ಸಿಎಂ ಮತ್ತು ನಮ್ಮನ್ನು, ಸಿದ್ದರಾಮಯ್ಯ ಅವರನ್ನು ಕರೆದು ಮಾತನಾಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದರು.

ಕೊಠಡಿಗೆ ಕರೆದು ಮಾತನಾಡಿ. ಈಗಲಾದರೂ ಚರ್ಚೆ ಮಾಡಿ. ಸದನ ಸಮಿತಿ ಆಗಲೇ ಬೇಕು. ಎಸ್‌ಐಟಿಗೆ ರಚನೆಗೆ 104 ಶಾಸಕರು ಅವಕಾಶ ನೀಡುವುದಿಲ್ಲ ಮತ್ತು ಸಹಮತವೂ ಇಲ್ಲ ಎಂದು ತಿಳಿಸಿದರು.

20ಕ್ಕೂ ಹೆಚ್ಚು ಕಾಂಗ್ರೆಸ್‌ನ ಶಾಸಕರು ನಾವು ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಅವರನ್ನು ಸಿಎಂ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯಕ್ಕೆ ಗೊತ್ತು. ಅವರು ಮುಂಬೈಗೆ ಹೋಗಿದ್ದರೆ ಅದಕ್ಕೆ ಯಡಿಯೂರಪ್ಪ ಕಾರಣ ಅಲ್ಲ. ಅವರನ್ನು ಕಾಯ್ದಿಟ್ಟುಕೊಳ್ಳುವುದು ಕಾಂಗ್ರೆಸ್‌ನ ಜವಾಬ್ದಾರಿ. ಅದಕ್ಕೆ ನಾನು ಹೊಣೆ ಅಲ್ಲ ಎಂದರು.

ಯಾವ ನೈತಿಕತೆ ಇದೆ ನಿಮಗೆ, ಎಂಎಲ್‌ಗೆ 25 ಕೋಟಿ, ರಾಜ್ಯಸಭಾ ಸ್ಥಾನಕ್ಕೆ 50 ಕೋಟಿ ಕೇಳಿದ್ದೀರಿ ಇದು ಶೋಭೆ ತರುತ್ತದಾ? ಎಂದು ಮುಖ್ಯಮಂತ್ರಿಗೆ ಯಡಿಯೂರಪ್ಪಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT