ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿಗೆ ‘ಬಿಜೆಪಿ’ ರಹದಾರಿ

ಭೂ ಕಬಳಿಕೆ ತಡೆ ನ್ಯಾಯಾಲಯದ ಹಲ್ಲು ಕಿತ್ತ ಸುಗ್ರೀವಾಜ್ಞೆ
Last Updated 13 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಭೂಗಳ್ಳರನ್ನು ಜೈಲಿಗೆ ಅಟ್ಟಿ, ಭೂ ಅಕ್ರಮಗಳಿಗೆ ಇತಿಶ್ರೀ ಹಾಡುವ ಆಶಯದಿಂದ ರಾಜ್ಯದಲ್ಲಿ ಸ್ಥಾ‍ಪಿಸಲಾಗಿರುವ ‘ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯ’ದ ಅಧಿಕಾರವನ್ನು ರಾಜ್ಯ ಬಿಜೆಪಿ ಸರ್ಕಾರ ಮೊಟಕುಗೊಳಿಸಿದೆ.

ಬಿಜೆಪಿ ಸರ್ಕಾರ ತರಾತುರಿಯಲ್ಲಿ ತಂದಿರುವ ಕರ್ನಾಟಕ ಭೂಕಬಳಿಕೆ ನಿಷೇಧ (ತಿದ್ದುಪಡಿ)–2020 ಸುಗ್ರೀವಾಜ್ಞೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಏಪ್ರಿಲ್‌ 9ರಂದು ಅಂಕಿತ ಹಾಕಿದ್ದು, ಏಪ್ರಿಲ್‌ 10ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

‘ಬೆಂಗಳೂರಿನಲ್ಲಷ್ಟೇ ನ್ಯಾಯಾಲಯದ ಕಚೇರಿ ಇದೆ. ಅರಣ್ಯ ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಡ ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮಲೆನಾಡಿನ ರೈತರು ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ಸಣ್ಣಪುಟ್ಟ ಒತ್ತುವರಿ ಪ್ರಕರಣಳಿಗೂ ಶಿಕ್ಷೆ ಅನುಭವಿಸುವಂತಾಗಿದೆ. ಹೀಗಾಗಿ, ಕಾಯ್ದೆಗೆ ತಿದ್ದುಪಡಿ ತರಬೇಕು. ಸ್ಥಳೀಯ ನ್ಯಾಯಾಲಯಗಳಿಗೆ ವಿಚಾರಣಾಧಿಕಾರ ಕೊಡಬೇಕು’ ಎಂದು ಶಾಸಕರು ಒತ್ತಾಯಿಸಿದ್ದರು.

‘ಮಲೆನಾಡಿನಲ್ಲಿ ಹೊಸದಾಗಿ ಸಾವಿರಾರು ಎಕರೆ ಅರಣ್ಯ ಒತ್ತುವರಿಯಾಗಿದೆ. ಇದನ್ನು ಮಾಡಿದ್ದು ಬಡ ರೈತರಲ್ಲ. ಪ್ರಭಾವಿಗಳು. ಭೂಗಳ್ಳರ ಹಿತ ಕಾಯುವ ಉದ್ದೇಶದಿಂದ ಕೆಲವು ಶಾಸಕರ ಲಾಬಿಗೆ ಮಣಿದು ಸುಗ್ರೀವಾಜ್ಞೆ ತರಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಅಕ್ರಮ ಸಾಗುವಳಿಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳಿವೆ. ಫಾರಂ 50 ಮತ್ತು 53 ಗಳಿಗೆ ಸಂಬಂಧಿಸಿದಂತೆ 1987ರ ಏಪ್ರಿಲ್ 14 ಕ್ಕಿಂತ ಮೊದಲು ಕೃಷಿ ಮಾಡಿರಬೇಕು. ಅಂಥವರು ಮಾತ್ರ ಅಕ್ರಮ–ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ಜೊತೆಗೆ, ಕೆಲವು ಸ್ವರೂಪದ ಭೂಮಿಗಳನ್ನು ಮಾತ್ರ ಸಕ್ರಮ ಮಾಡಬಹುದಿತ್ತು’

‘ಹಿಂದಿನ ಸರ್ಕಾರ 2002ಕ್ಕಿಂತ ಮೊದಲು ಕೃಷಿ ಮಾಡುತ್ತಿದ್ದವರಿಗೆ ಫಾರಂ 57ರಡಿ ಅರ್ಜಿ ಹಾಕಲು ಅವಕಾಶ ನೀಡಿತು. ಇಲ್ಲೂ ಕೆಲವು ರೀತಿಯ ಭೂಮಿಗಳನ್ನು ಮಾತ್ರ ಸಕ್ರಮ ಮಾಡಲು ಅವಕಾಶ ನೀಡಿದೆ. ಆದರೆ, ಇದನ್ನು ಮೀರಿ ಅಕ್ರಮ ಪ್ರವೇಶ ಮಾಡಿದವರ ಮೇಲೆ ಕರ್ನಾಟಕ ಭೂ ಕಂದಾಯ ಕಾಯ್ದೆ 192 ಎ ಪ್ರಕಾರ ಪ್ರಕರಣ ದಾಖಲಿಸುವುದು ಮತ್ತು ಭೂ ಕಬಳಿಕೆ ನಿಷೇಧ ಕಾಯ್ದೆಯಂತೆ ಶಿಕ್ಷಿಸಬಹುದಿತ್ತು’ ಎಂದು ಹೇಳಿದರು.

‘ಒಂದು ಕುಟುಂಬಕ್ಕೆ ಗರಿಷ್ಠ 4.38 ಎಕರೆ ಭೂಮಿ ಇಟ್ಟುಕೊಳ್ಳಲು ಅವಕಾಶವಿದೆ. ಈಗಿನ ಸುಗ್ರೀವಾಜ್ಞೆ ಎಲ್ಲದಕ್ಕೂ ತಿಲಾಂಜಲಿ ಇಟ್ಟಿದೆ. ಅರ್ಜಿ ಹಾಕಿದ್ದರೆ ಪ್ರಕರಣ ದಾಖಲಿಸುವಂತಿಲ್ಲ. ಈ ಅವಕಾಶ ಸಿಕ್ಕಿರುವುದರಿಂದ ಬಲಾಢ್ಯರು ಕಾಡು ಕಡಿದು ಲೂಟಿಗೆ ನಿಲ್ಲುತ್ತಾರೆ. ಮಕ್ಕಳು, ಹೆಂಡತಿ, ಮನೆಯಾಳುಗಳ ಹೆಸರಿನಲ್ಲಿ ಅರ್ಜಿ ಹಾಕಿಸುತ್ತಾರೆ. ಹೊಸ ಒತ್ತುವರಿಗಳು ಹೆಚ್ಚುತ್ತವೆ. ಗೋಮಾಳಗಳು ಒಂದಿಂಚೂ ಉಳಿಯುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT