ಶನಿವಾರ, ಡಿಸೆಂಬರ್ 14, 2019
25 °C
ಜಿಂದಾಲ್‌ ವಿಷಯದಲ್ಲಿ ನಾನು ಮೋಸ ಹೋದೆ–ಅನಿಲ್‌ ಲಾಡ್‌

ಉಪಚುನಾವಣೆ ಮುಗಿಯುತ್ತಿದ್ದರೂ ಬಿಜೆಪಿಗೆ ಸೇರಿಸಿಕೊಂಡಿಲ್ಲ: ಅನಿಲ್‌ ಲಾಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಉಪಚುನಾವಣೆ ಮುಗಿಯುತ್ತ ಬಂದರೂ ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ನಾನೀಗ ಸ್ವತಂತ್ರನು. ಹಾಗಂತ ಕಾಂಗ್ರೆಸ್‌ ತೊರೆದಿಲ್ಲ. ಆ ಪಕ್ಷದ ಅಭ್ಯರ್ಥಿ ವೆಂಕಟರಾವ್‌ ಘೋರ್ಪಡೆ ಅವರು ನಮ್ಮೂರಿನ ಅರಸರು. ನಮ್ಮ ಮನೆತನಕ್ಕೆ ಅವರು ಸಾಕಷ್ಟು ಮಾಡಿದ್ದಾರೆ. ಅವರ ಮನವಿ ಮೇರೆಗೆ ವಿಜಯನಗರ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುತ್ತಿರುವೆ’ ಎಂದು ಕಾಂಗ್ರೆಸ್‌ ಮುಖಂಡ ಅನಿಲ್‌ ಲಾಡ್‌ ಹೇಳಿದರು.

ಚುನಾವಣಾ ಪ್ರಚಾರಕ್ಕೆ ಇನ್ನೆರಡೇ ದಿನಗಳು ಬಾಕಿ ಉಳಿದಿರುವಾಗ ಸೋಮವಾರ ಇಲ್ಲಿ ಕಾಣಿಸಿಕೊಂಡ ಅವರು, ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿ, ‘ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ನಿಜ. ಕಾಂಗ್ರೆಸ್‌ ಪಕ್ಷ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಬಿಜೆಪಿ ಸೇರುತ್ತೇನೆ ಎಂದಾಗ ಬಿ. ಶ್ರೀರಾಮುಲು ನನ್ನನ್ನು ಸ್ವಾಗತಿಸಿದರು. ಆದರೆ, ಉಪಚುನಾವಣೆ ಮುಗಿಯುವುದಕ್ಕೆ ಬಂದರೂ ಇದುವರೆಗೆ ನನ್ನನ್ನು ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಂಡಿಲ್ಲ’ ಎಂದರು.

‘ಸರ್ಕಾರವು ಜಿಂದಾಲ್‌ಗೆ ಭೂ ಪರಭಾರೆ ಮಾಡಬಾರದು ಎಂದು ನಡೆಸಿದ ಹೋರಾಟದಲ್ಲಿ ನಾನು ಅನರ್ಹ ಶಾಸಕ ಆನಂದ್‌ ಸಿಂಗ್‌ ಅವರ ಕೈಜೋಡಿಸಿದೆ. ನಂತರ ಅವರು ರಾಜೀನಾಮೆ ಕೂಡ ಕೊಟ್ಟರು. ಆದರೆ, ನಂತರದ ದಿನಗಳಲ್ಲಿ ಸಿಂಗ್‌ ಅದರ ಬಗ್ಗೆ ಮಾತಾಡಲಿಲ್ಲ. ಜಿಂದಾಲ್‌ ವಿರುದ್ಧ ಮಾತಾಡದಂತೆ ಬಿಜೆಪಿಯವರು ಏನಾದರೂ ಷರತ್ತು ಹಾಕಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಜಿಂದಾಲ್‌ ವಿಷಯದಲ್ಲಿ ನಾನು ಮೋಸ ಹೋಗಿದ್ದೇನೆ ಎಂದೆನಿಸುತ್ತದೆ’ ಎಂದರು.

‘ಬಳ್ಳಾರಿ ಜಿಲ್ಲಾ ಉಸ್ತುವಾರಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಶ್ರೀರಾಮುಲು ಅವರನ್ನು ಬಿಜೆಪಿಯವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆನಂದ್‌ ಸಿಂಗ್‌ ಕ್ಷೇತ್ರದ ಜನರಿಗೆ ಸಿಗುತ್ತಿಲ್ಲ. ಕ್ಷೇತ್ರದ ಜನ ಏನಾದರೂ ಕೆಲಸವಿದ್ದರೆ ಸಿಂಗ್‌ ಸಂಬಂಧಿಕರಾದ ಸಂದೀಪ್‌ ಸಿಂಗ್‌, ಧರ್ಮೇಂದ್ರ ಸಿಂಗ್‌ ಅವರನ್ನು ಕೇಳುವಂತಹ ಸ್ಥಿತಿಯಿದೆ. ಅವರಿಂದಲೇ ಸಿಂಗ್‌ ಹಾಳಾಗುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು