ಬಿಜೆಪಿ ಧರಣಿ: ಉಭಯ ಸದನಗಳ ಕಲಾಪ ಬಲಿ

7
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯ

ಬಿಜೆಪಿ ಧರಣಿ: ಉಭಯ ಸದನಗಳ ಕಲಾಪ ಬಲಿ

Published:
Updated:
Prajavani

ಬೆಂಗಳೂರು: ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವ ಕಾರಣಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಉಭಯ ಸದನಗಳಲ್ಲಿ ಗುರುವಾರ ಧರಣಿ ನಡೆಸಿದರು. ಇದರಿಂದಾಗಿ, ಅರ್ಧ ಗಂಟೆಯಷ್ಟೇ ಕಲಾಪ ನಡೆಯಿತು.

ವಿಧಾನಸಭೆಯಲ್ಲಿ ಬೆಳಿಗ್ಗೆ 11.30ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು. ‘ನೀರಿಲ್ಲದ ಬಾವಿಯಲ್ಲಿ ಏನು ಮಾಡುತ್ತಿದ್ದೀರಿಯಪ್ಪ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಪ್ರಶ್ನಿಸಿದರು.

‘ಬಹುಮತ ಇಲ್ಲದ ಸರ್ಕಾರಕ್ಕೆ ಧಿಕ್ಕಾರ’, ‘ಗೊ ಬ್ಯಾಕ್‌, ಸಿಎಂ ಗೊ ಬ್ಯಾಕ್‌’ ಎಂದು ಘೋಷಣೆಗಳನ್ನು ಕೂಗಿದರು. ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಸಭೆಯಲ್ಲಿ ಕಾಗದ ಪತ್ರಗಳನ್ನು ಮುಂದಿಡಲಾಯಿತು. ‘ಸದನದಲ್ಲಿ ಕೂಗಾಡುವುದು ಬೇಡ. ಧೈರ್ಯ ಇದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ’ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಸವಾಲು ಎಸೆದರು. 

ಇದರ ನಡುವೆಯೇ, ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯ ಪ್ರಸ್ತಾವವನ್ನು ಎಸ್.ಟಿ.ಸೋಮಶೇಖರ್ ಮಂಡಿಸಿದರು. ಸದನದಲ್ಲಿ ಗಲಾಟೆ ಜೋರಾಯಿತು. ‘ವಿರೋಧ ಪಕ್ಷದ ಸದಸ್ಯರು ಯಾವುದೇ ಕಾರಣ ಇಲ್ಲದೆ ಧರಣಿ ನಡೆಸುತ್ತಿದ್ದಾರೆ. ಇದೊಂದು ಹೊಸ ಅಧ್ಯಾಯ. ಈ ನಡೆ ಪ್ರಜಾಸತ್ತಾತ್ಮಕ ಅಲ್ಲ’ ಎಂದು ರಮೇಶ್‌ ಕುಮಾರ್ ವ್ಯಾಖ್ಯಾನಿಸಿದರು. ಬಳಿಕ ಕಲಾಪವನ್ನು 10 ನಿಮಿಷ ಮುಂದೂಡಿದರು.

ಅರ್ಧ ಗಂಟೆ ಬಿಟ್ಟು ಮತ್ತೆ ಕಲಾಪ ಆರಂಭವಾಯಿತು. ಧರಣಿ ಮುಂದುವರಿಸಿದ ಬಿಜೆಪಿ ಸದಸ್ಯರು ‘ರಾಜ್ಯ ಒಂದು, ಮುಖ್ಯಮಂತ್ರಿಗಳಿಬ್ಬರು’ ಎಂದು ವ್ಯಂಗ್ಯವಾಡಿದರು. ಆಡಳಿತ ಪಕ್ಷದ ಸದಸ್ಯರು ‘ಬಿಜೆಪಿಗೆ ಧಿಕ್ಕಾರ’ ಎಂದು ಕೂಗಿದರು. ‘ನೀರಿಲ್ಲದ ಬಾವಿಯಲ್ಲಿ ಏಕೆ ಒದ್ದಾಡುತ್ತಿದ್ದೀರಿ. ತಾಕತ್ತಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಿ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ಸವಾಲೆಸೆದರು.

ಈ ಮಧ್ಯೆ, ರಮೇಶ್‌ ಕುಮಾರ್ ಅವರು ‘ಪ್ರಜಾವಾಣಿ’ ತರಿಸಿಕೊಂಡು ಕಣ್ಣಾಡಿಸಿದರು. ಬಳಿಕ ಕಲಾಪವನ್ನು ಶುಕ್ರವಾರ ಮಧ್ಯಾಹ್ನ 12.30ಕ್ಕೆ ಮುಂದೂಡಿದರು.

ಪರಿಷತ್‌ ಕಲಾಪ ಮೂರು ಸಲ ಮುಂದೂಡಿಕೆ
ವಿರೋಧ ಪಕ್ಷದವರು ಸಭಾಪತಿ ಪೀಠದ ಎದುರು ಧರಣಿ ನಡೆಸಿದ್ದರಿಂದ ವಿಧಾನ ಪರಿಷತ್ ಕಲಾಪವನ್ನು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಒಟ್ಟು ಮೂರು ಬಾರಿ ಮುಂದೂಡಿದರು.

ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, 'ಸರ್ಕಾರಕ್ಕೆ ಬಹುಮತ ಇಲ್ಲದಿರುವುದರಿಂದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿದರು.

ಇದಕ್ಕೆ ಎದಿರೇಟು ನೀಡಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, 'ಸರ್ಕಾರ ಬೀಳಲಿದೆ ಎಂಬುದು ಬರಿ ನಿಮ್ಮ ಕಲ್ಪನೆಯೇ ಅಥವಾ ರಾತ್ರಿ ಏನಾದರೂ ಕನಸು ಬಿದ್ದಿತ್ತಾ' ಎಂದು ಛೇಡಿಸಿದರು.

ಬಿಜೆಪಿ ಸದಸ್ಯರು ಸಭಾಪತಿಯವರ ಪೀಠದ ಎದುರು ಧರಣಿ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷಗಳ ಸದಸ್ಯರು ಧಿಕ್ಕಾರ ಕೂಗಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು. ಹಾಗಾಗಿ ಸಭಾಪತಿಯವರು ಮಧ್ಯಾಹ್ನ 12ರವರೆಗೆ ಕಲಾಪ ಮುಂದೂಡಿದರು. ಮಧ್ಯಾಹ್ನ 12 .15ಕ್ಕೆ ಕಲಾಪ ಮತ್ತೆ ಆರಂಭವಾದಾಗಲೂ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ‍ ಗದ್ದಲದ ನಡುವೆಯೇ ವಿವಿಧ ಕಾಗದ ಪತ್ರಗಳನ್ನು ಸದನದಲ್ಲಿ ಮಂಡಿಸಲಾಯಿತು. ಬಳಿಕ ಸಭಾಪತಿಯವರು ಕಲಾಪವನ್ನು ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗಲೂ ವಿರೋಧ ಪಕ್ಷದವರು ಧರಣಿ ಮುಂದುವರಿಸಿದ್ದರಿಂದ ಕಲಾಪವನ್ನು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.

ವಿರೋಧ ಪಕ್ಷದವರಿಂದ ಸದನದಲ್ಲಿ ಭಿತ್ತಿಪತ್ರ ಸಮರ
ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ಭಿತ್ತಿ‍ಪತ್ರ ಸಮರಕ್ಕೆ ವಿಧಾನ ಪರಿಷತ್‌ ಗುರುವಾರ ಸಾಕ್ಷಿಯಾಯಿತು.

ಧರಣಿಯ ವೇಳೆ ಬಿಜೆಪಿ ಸದಸ್ಯರು, 'ಬಿಜೆಪಿಗೆ ವೋಟು ಹಾಕುವವರು ಮುಸ್ಲಿಮರಲ್ಲ- ಜಮೀರ್ ಅಹಮದ್‌ ಖಾನ್‌', ‘ಹಿಂದೂ ವಿರೋಧಿ ಜಮೀರ್‌ ಅಹಮದ್‌ ಖಾನ್‌’, '10 % ಸರ್ಕಾರ, ಪುಟ್ಟರಂಗ ಶೆಟ್ಟಿ... ಮತ್ತೆ' ಎಂಬ ಬರಹಗಳಿರುವ ಭಿತ್ತಿಪತ್ರಗಳನ್ನು ಬಿಜೆಪಿ ಸದಸ್ಯರು ಪ್ರದರ್ಶಿಸಿದರು.

ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು, ‘ಮೋದಿ, ಅಮಿತ್‌ ಶಾ ಜೋಡಿಯಿಂದ ಜನತಂತ್ರ ನಾಶ’, ‘ಯಡ್ಯೂರಪ್ಪ ಜೈಲು ಸೇರಿದ ರಾಜ್ಯದ ಏಕೈಕ ಮುಖ್ಯಮಂತ್ರಿ’ ‘₹ 50 ಕೋಟಿ ಮತ್ತು ಮಂತ್ರಿಗಿರಿ ನೀಡುವ ಬಿಜೆಪಿಗೆ ದುಡ್ಡು ಎಲ್ಲಿಂದ ಬಂತು?’ ಎಂಬ ಬರಹಗಳಿರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !