ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಬಸ್ ಬ್ರೇಕ್ ಫೇಲ್ : ಇಬ್ಬರು ಬೈಕ್‌ ಸವಾರರ ಸಾವು, 10 ಮಂದಿಗೆ ಗಾಯ

Last Updated 6 ಜನವರಿ 2020, 7:08 IST
ಅಕ್ಷರ ಗಾತ್ರ

ಬೆಂಗಳೂರು: ನಿಯಂತ್ರಣ ಕಳೆದುಕೊಂಡ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಕೊಟ್ಟಿಗೆಪಾಳ್ಯ ಜಂಕ್ಷನ್ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಬೈಲಪ್ಪ ಮತ್ತು ವಿಶ್ವರಾಧ್ಯ ಮೃತಪಟ್ಟವರು. ಭೈಲಪ್ಪ ಸ್ಥಳದಲ್ಲೇ ಸಾವಿಗೀಡಾದರೆ, ವಿಶ್ವರಾಧ್ಯ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.

ಘಟನೆಯಲ್ಲಿ 10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿದೆ. ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಗಾಯಾಳುಗಳನ್ನು ಲಕ್ಷ್ಮೀ ಸೂಪರ್ ಸ್ಪೆಷಲಿಟಿ ಹಾಗೂ ಯುನಿಟಿ ಲೈಫ್ ಲೈನ್ ‌ಆಸ್ಪತ್ರೆಗೆ ದಾಖಲಿಸಲಾಗಿದೆ

ಬಿಎಂಟಿಸಿ ಬಸ್ ಸುಂಕದಕಟ್ಟೆ ಕಡೆಯಿಂದ ಬರುವ ವೇಳೆ ಬ್ರೇಕ್ ಫೇಲ್ ಆಗಿದೆ. ಬಸ್ ಡಿಕ್ಕಿಯಿಂದ ಬೈಕ್, ಆಟೋ, ಕಾರು ಸೇರಿ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ವಾಹನಗಳನ್ನು ಪೊಲೀಸರು ತೆರವುಗೊಳಿಸಿದರು.

ಮಾಗಡಿ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಪಶ್ಚಿಮ ಸಂಚಾರ ವಿಭಾಗ ಡಿಸಿಪಿ ಸೌಮ್ಯಲತಾ ಭೇಟಿ ನೀಡಿದರು.

ಇಳಿಜಾರಿನಲ್ಲಿ ದುರಂತ ಸಂಭವಿಸಿದ್ದು, ಪಕ್ಕದಲೇ ನೂರಾರು ಜನ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಬ್ರೇಕ್ ಫೇಲ್ ಆದ ತಕ್ಷಣ ಬಸ್ ಅನ್ನು ಚಾಲಕ ವೆಂಕಟೇಶ್ ಬಲಕ್ಕೆ ಎಳೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿದೆ.

ಬ್ರೇಕ್ ಡೌನ್ ಆಗಿದ್ದು ತಿಳಿದುಬಂದರೆ ಡಿಪೊ ಮ್ಯಾನೇಜರ್ ಮೇಲೆ ಕ್ರಮ: ರವಿಕಾಂತೇಗೌಡ

'ಬಿಎಂಟಿಸಿ ಬಸ್ ಅಪಘಾತಕ್ಕೀಡಾದ ಮಾಹಿತಿ ಬೆಳಿಗ್ಗೆ 9 ಗಂಟೆಗೆ ಬಂದಿದೆ. ಬಸ್ ಕೊಟ್ಟಿಗೆಪಾಳ್ಯದಲ್ಲಿ ಬಲ ಭಾಗಕ್ಕೆ ನುಗ್ಗಿದೆ. ಆರು ದ್ವಿಚಕ್ರವಾಹನ, ಒಂದು ಆಟೊ, ಒಂದು ಕಾರು ಸೇರಿ ಎಂಟು ವಾಹನಗಳು ಜಖಂಗೊಂಡಿವೆ. ಇಬ್ಬರು ಮೃತಪಟ್ಟಿದ್ದಾರೆ. ಮೂರು ಮಂದಿಗೆ ಗಂಭೀರ ಗಾಯವಾಗಿದೆ' ಎಂದು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ರವಿಕಾಂತೇಗೌಡ ತಿಳಿಸಿದರು.

'ಬಸ್ ನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದೆ.‌ ಚಾಲಕ ನೀಡಿದ ಹೇಳಿಕೆ ಪ್ರಕಾರ ಬ್ರೇಕ್ ಫೇಲ್ಯೂರ್ ಆಗಿದೆ. ಎಡಬಾಗದಲ್ಲಿ ಸುಮಾರು 200 ಜನ ಇದ್ದರು. ಹೀಗಾಗಿ ಬಲಕ್ಕೆ ಎಳೆದೆ ಎಂದು ಚಾಲಕತಿಳಿಸಿದ್ದಾರೆ. ಆರ್ಟಿಒದವರಿಗೆ ಮಾಹಿತಿ ನೀಡಿದ್ದೇವೆ. ಅವರು ಬಂದು ಪರಿಶೀಲನೆ ಮಾಡುತ್ತಾರೆ. ತನಿಖೆಯಲ್ಲಿ ಬ್ರೇಕ್ ಡೌನ್ ಆಗಿದ್ದು ತಿಳಿದು ಬಂದರೆ ಡಿಪೊ ಮ್ಯಾನೇಜರ್ ಮೇಲೆ ಕ್ರಮ ಕೈಗೊಳ್ಳುತ್ತೇವೆ' ಎಂದರು.

'ಘಟನೆಯನ್ನು ಎಸಿಪಿ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಲಾಗುವುದು. ಡಿಪೊ ಮ್ಯಾನೇಜರ್ ತಪ್ಪು ತಿಳಿದು ಬಂದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಬಂಧಿಸುತ್ತೇವೆ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT