ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಹುದ್ದೆಗೂ ₹ 10 ಲಕ್ಷ ಲಂಚ?

ಅಂಬೆಗಾಲಿಡುತ್ತಿರುವ ಮಂಡ್ಯ ವಿ.ವಿಯಲ್ಲಿ ನೇಮಕಾತಿ ಅಕ್ರಮ
Last Updated 19 ಸೆಪ್ಟೆಂಬರ್ 2019, 19:53 IST
ಅಕ್ಷರ ಗಾತ್ರ

ಮಂಡ್ಯ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮಂಡ್ಯ ಏಕೀಕೃತ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಅತಿಥಿ ಉಪನ್ಯಾಸಕ ಹುದ್ದೆಗೆ ತಲಾ ₹10 ಲಕ್ಷದವರೆಗೂ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

1948ರಲ್ಲಿ ಸ್ಥಾಪನೆಯಾಗಿ, ನಂತರ ಸ್ವಾಯತ್ತ ಸಂಸ್ಥೆಯಾಗಿದ್ದ ನಗರದ ಸರ್ಕಾರಿ ಮಹಾವಿದ್ಯಾಲಯಕ್ಕೆ ಈಗ ಏಕೀಕೃತ ವಿಶ್ವವಿದ್ಯಾಲಯ ರೂಪ ನೀಡಲಾಗಿದೆ. ಇಲ್ಲಿ 2 ಸಾವಿರ ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಏಳು ತಿಂಗಳಿಂದ ನೂತನ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಿದ್ದು, ಪ್ರೊ.ಎಂ.ಎಸ್‌.ಮಹದೇವ ನಾಯಕ್‌ ಅವರನ್ನು ವಿಶೇಷಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಗೊಂಡ ನಂತರ ನೂತನ ವಿಶ್ವವಿದ್ಯಾಲಯ ಗೊಂದಲಗಳ ಗೂಡಾಗಿದೆ. ಅಂಬೆಗಾಲಿಡುತ್ತಿರುವ ವಿ.ವಿ ವಿರುದ್ಧ ಅಕ್ರಮ ನೇಮಕಾತಿ ಹಾಗೂ ಹಣಕಾಸು ಅವ್ಯವಹಾರದ ದೂರುಗಳು ದಾಖಲಾಗಿವೆ. ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಸಂಬಳ ನೀಡಲು ಹಣವಿಲ್ಲದಿದ್ದರೂ ವಿಶೇಷಾಧಿಕಾರಿಯು ಪ್ರಭಾರ ಕುಲಸಚಿವ, ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದು ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯಪಾಲರಿಗೆ ದೂರು: ಮುಂದೆ ಹುದ್ದೆಗಳು ಕಾಯಂ ಆಗುತ್ತವೆ ಎಂದು ನಂಬಿಸಿ ಅತಿಥಿ ಉಪನ್ಯಾಸಕ ಹುದ್ದೆಗೆ ತಲಾ ₹10 ಲಕ್ಷ ವಸೂಲಿ ಮಾಡಲಾಗಿದೆ. ರೋಸ್ಟರ್‌ ನಿಯಮಗಳನ್ನು ಗಾಳಿಗೆ ತೂರಿ ಬೇಕಾದವರನ್ನು ನೇಮಕ ಮಾಡಿ
ಕೊಳ್ಳಲಾಗಿದೆ. ಅತಿಥಿ ಉಪನ್ಯಾಸಕರ ನೇಮಕಾತಿಗೆ ಮಾತ್ರ ಜಾಹೀರಾತು ನೀಡಲಾಗಿದ್ದು, ಬೋಧಕೇತರ ಸಿಬ್ಬಂದಿ ನೇಮಕಾತಿ ಕುರಿತು ಯಾವುದೇ ಪ್ರಕಟಣೆ ನೀಡಿಲ್ಲ ಎಂದು ಆರೋಪಿಸಿ ಕೆಲವರು ಸೆ.14ರಂದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

‘ಸರ್ಕಾರಿ ಮಹಾವಿದ್ಯಾಲಯದಲ್ಲಿ ಕ್ಯಾಂಟೀನ್‌ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ₹5 ಲಕ್ಷ ಕೊಟ್ಟು ತಮ್ಮ ಪತ್ನಿಗೆ ಸಿ ಗ್ರೂಪ್‌ ನೌಕರಿ ಕೊಡಿಸಿದ್ದಾರೆ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಆರಂಭಗೊಳ್ಳುವಾಗಲೂ ಇದೇ ರೀತಿ ಅಕ್ರಮ ನಡೆದಿತ್ತು. ಮಂಡ್ಯ ವಿ.ವಿ ಕೂಡ ಮಿಮ್ಸ್‌ ಹಾದಿಯನ್ನೇ ಹಿಡಿದಿದೆ. ಸರ್ಕಾರಿ ಮಹಾವಿದ್ಯಾಲಯದಲ್ಲಿ ಇದ್ದ ಬೋಧಕ ಸಿಬ್ಬಂದಿಯಿಂದಲೇ ವಿ.ವಿ ನಡೆಸಬಹುದಾಗಿತ್ತು. ಸರ್ಕಾರ ಹಣ ಬಿಡುಗಡೆ ಮಾಡುವವರೆಗೂ ಕಾಯಬಹುದಾಗಿತ್ತು. ವಿಶೇಷಾಧಿಕಾರಿಗಳು, ಬಂದ ಕೂಡಲೇ ನೇಮಕಾತಿಗೆ ಕೈ ಹಾಕಿದ್ದು ತಪ್ಪು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ನಾತಕೋತ್ತರ ಪದವೀಧರರೊಬ್ಬರು ತಿಳಿಸಿದರು.

₹1 ಕೋಟಿ ವಾಪಸ್‌ ಕಟ್ಟಿದರು:ಸರ್ಕಾರಿ ಮಹಾವಿದ್ಯಾಲಯದ ಕಾಲೇಜು ನಿರ್ವಹಣಾ ಸಮಿತಿಯ ಖಾತೆಯಲ್ಲಿದ್ದ ₹ 1 ಕೋಟಿ ಹಣವನ್ನು ವಿಶೇಷಾಧಿಕಾರಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ ಕ್ರಮ ವಿವಾದಕ್ಕೆ ಕಾರಣವಾಗಿದೆ. ಅನುಮತಿ ಪಡೆಯದೇ ಹಣ ವರ್ಗಾ
ವಣೆಯಾದ ವಿಷಯ ತಿಳಿದ ಸಮಿತಿಯ ಅಧ್ಯಕ್ಷ, ಮಂಡ್ಯ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್‌ ತುರ್ತು ಸಭೆ ನಡೆಸಿ ಹಣವನ್ನು ವಾಪಸ್‌ ಕಟ್ಟಿಸಿಕೊಂಡಿದ್ದಾರೆ.

ಕೆಲಸ ಸಿಗದವರಿಂದ ಸಲ್ಲದ ಆರೋಪ

‘ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಅತಿಥಿ ಉಪನ್ಯಾಸಕಅರು ಹಾಗೂ ಬೋಧಕೇತರ ಸಿಬ್ಬಂದಿ ನೇಮಕ ನಡೆದಿದೆ. ಅರ್ಹತೆ ಆಧಾರದ ಮೇಲೆ ಪಾರದರ್ಶಕವಾಗಿ ಆಯ್ಕೆ ನಡೆದಿದೆ. ಬೇಕಿದ್ದರೆ ಸರ್ಕಾರ ತನಿಖೆ ನಡೆಸಲಿ. ಕೆಲಸ ಸಿಗದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಮಂಡ್ಯ ವಿವಿ ವಿಶೇಷಾಧಿಕಾರಿ ಪ್ರೊ.ಎಂ.ಎಸ್‌.ಮಹದೇವ ನಾಯಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT