ಬುಧವಾರ, ನವೆಂಬರ್ 13, 2019
18 °C

ಬಿಎಸ್‌ವೈ ಸೂಚನೆಯಂತೇ ರಾಜೀನಾಮೆ: ಅನರ್ಹ ಶಾಸಕ ನಾರಾಯಣಗೌಡ

Published:
Updated:

ಮಂಡ್ಯ: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಮೊದಲು ಬಿ.ಎಸ್‌.ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದ್ದೆ. ನಮ್ಮ ತಾಲ್ಲೂಕಿನ ಅಭಿವೃದ್ಧಿ ಮಾಡುವ ಭರವಸೆ ನೀಡಿದ ಕಾರಣದಿಂದಲೇ ರಾಜೀನಾಮೆ ನೀಡಿದೆ’ ಎಂದು ಕೆ.ಆರ್‌.ಪೇಟೆ ಕ್ಷೇತ್ರದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಹೇಳಿದರು.

ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಜನ್ಮದಿನದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಸಮ್ಮಿಶ್ರ ಸರ್ಕಾರ ಇದ್ದಾಗ ನನ್ನ ಕ್ಷೇತ್ರಕ್ಕೆ ಹಣ ಬಿಡುಗಡೆಯಾದರೆ ಅದನ್ನು ಹಾಸನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ನನಗೂ ಅಪಾರ ಬೇಸರವಾಗಿತ್ತು. ಒಂದು ದಿನ ಸಂಜೆ ಕೆಲವರು ನನ್ನನ್ನು ಬಿ.ಎಸ್‌.ಯಡಿಯೂರಪ್ಪ ಅವರ ಮನೆಗೆ ಕರೆದುಕೊಂಡು ಹೋದರು. ಯಡಿಯೂರಪ್ಪ ಅವರು, ಮುಖ್ಯಮಂತ್ರಿಯಾಗುವ ಅವಕಾಶ ಬಂದಿದೆ, ನೀನು ಕೈ ಜೋಡಿಸಿದರೆ ತಾಲ್ಲೂಕಿನ ಅಭಿವೃದ್ಧಿ ಮಾಡೋಣ ಎಂದರು. ಅವರ ಮಾತಿನಂತೆ ನಾನು ರಾಜೀನಾಮೆ ನೀಡಿದೆ’ ಎಂದರು.

‘ನಾನು ಕೆ.ಆರ್‌.ಪೇಟೆ ಅಭಿವೃದ್ಧಿಗಾಗಿ ₹ 700 ಕೋಟಿ ಕೇಳಿದ್ದೆ. ಆದರೆ ಮುಖ್ಯಮಂತ್ರಿಗಳು ₹ 1 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಕೇಳಿದ್ದಕ್ಕಿಂತ ₹ 300 ಕೋಟಿ ಹೆಚ್ಚು ಕೊಟ್ಟಿದ್ದಾರೆ. ಇದೀಗ ಮೊದಲ ಕಂತಿನಲ್ಲಿ ₹ 212 ಕೋಟಿ ಹಣ ಬಂದಿದೆ. ಹಂತಹಂತವಾಗಿ ಉಳಿದ ಅನುದಾನವೂ ಬರುತ್ತದೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸ್ಥಾನವನ್ನು ತ್ಯಾಗ ಮಾಡಿ ಬಿ.ಎಸ್‌.ಯಡಿಯೂರಪ್ಪ ಅವರ ಜೊತೆ ಕೈಜೋಡಿಸಿದ್ದೇನೆ’ ಎಂದರು.

ಆಸ್ತಿ ಮೀಸಲಿಡುವೆ–ಸವಾಲು: ‘ಜೆಡಿಎಸ್‌ ಮುಖಂಡರು ಕಳೆದ ಆರೂವರೆ ವರ್ಷಗಳಿಂದ ನನಗೆ ಕಿರುಕುಳ ನೀಡಿದ್ದಾರೆ, ಚಪ್ಪಲಿಗಿಂತ ಕಡೆಯಾಗಿ ಕಂಡಿದ್ದಾರೆ. ಮುಂದೆ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ನನ್ನ ಸ್ವಯಾರ್ಜಿತ ಆಸ್ತಿಯಲ್ಲಿ ಶೇ 50ರಷ್ಟು ಹಣವನ್ನು ಕ್ಷೇತ್ರದ ಅಭಿವೃದ್ಧಿಗಾಗಿ ಮೀಸಲಿಡುತ್ತೇನೆ. ಇದನ್ನು ಬಾಂಡ್‌ ಪೇಪರ್‌ನಲ್ಲಿ ಬರೆದು ಕೊಡುತ್ತೇನೆ. ಜೆಡಿಎಸ್‌ ಮುಖಂಡರು ಬರೆದು ಕೊಡುತ್ತಾರಾ’ ಎಂದು ಸವಾಲು ಹಾಕಿದರು.

ಪತ್ನಿ, ಪುತ್ರಿ ಪ್ರಚಾರಕ್ಕೆ: ನಾರಾಯಣಗೌಡ ಪತ್ನಿ ದೇವಕಿ, ಪುತ್ರಿ ರೀನಾ ಕೂಡ ಪ್ರಚಾರಕ್ಕೆ ಇಳಿದಿದ್ದಾರೆ. ಹುಟ್ಟೂರು ಕೈಗೋನಹಳ್ಳಿಯ ಮನೆ ದೇವರು ವೀರಭದ್ರಸ್ವಾಮಿ, ಸಂತೇಬಾಚಹಳ್ಳಿಯ ಪಟ್ಟಲದಮ್ಮ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರಿಗೆ ದಾನ ನೀಡಿದರು.

ಪ್ರತಿಕ್ರಿಯಿಸಿ (+)